ಅ.27 ರಿಂದ ನ.2: ಮಂಗಳೂರಲ್ಲಿ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್‌ ಪಂದ್ಯಾಕೂಟ

| Published : Sep 22 2025, 01:02 AM IST

ಅ.27 ರಿಂದ ನ.2: ಮಂಗಳೂರಲ್ಲಿ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್‌ ಪಂದ್ಯಾಕೂಟ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ಬ್ಯಾಡ್ಮಿಂಟನ್‌ ಅಸೋಸಿಯೇಶನ್‌ ಮತ್ತು ದಕ್ಷಿಣ ಕನ್ನಡ ಬ್ಯಾಡ್ಮಿಂಟನ್‌ ಅಸೋಸಿಯೇಶನ್‌ ವತಿಯಿಂದ ಇಲ್ಲಿನ ಖಾಸಗಿ ಹೊಟೇಲ್‌ ಸಭಾಂಗಣದಲ್ಲಿ ಭಾನುವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿವ್‌ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ನಗರದ ಉರ್ವ ಒಳಾಂಗಣ ಕ್ರೀಡಾಂಗಣದಲ್ಲಿ ಅ.27 ರಿಂದ ನ.2 ರ ವರೆಗೆ ‘ಚೀಫ್‌ ಮಿನಿಸ್ಟ​ರ್ಸ್ ಮಂಗಳೂರು ಇಂಡಿಯಾ ಇಂಟರ್‌ ನ್ಯಾಷನಲ್‌ ಟೂರ್ನಮೆಂಟ್‌ -2025’ ನಡೆಯಲಿದೆ. ಪಂದ್ಯಾಕೂಟ ಆಯೋಜನೆಗೆ ಒಟ್ಟು 2.75 ಕೋ. ರು. ವೆಚ್ಚ ಅಂದಾಜಿಸಲಾಗಿದ್ದು, ಈಗಾಗಲೇ ಮುಖ್ಯಮಂತ್ರಿಗಳು 1 ಕೋಟಿ ರು. ಅನುದಾನ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

ಕರ್ನಾಟಕ ಬ್ಯಾಡ್ಮಿಂಟನ್‌ ಅಸೋಸಿಯೇಶನ್‌ ಮತ್ತು ದಕ್ಷಿಣ ಕನ್ನಡ ಬ್ಯಾಡ್ಮಿಂಟನ್‌ ಅಸೋಸಿಯೇಶನ್‌ ವತಿಯಿಂದ ಇಲ್ಲಿನ ಖಾಸಗಿ ಹೊಟೇಲ್‌ ಸಭಾಂಗಣದಲ್ಲಿ ಭಾನುವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ರಾಜ್ಯದಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್‌ ಪಂದ್ಯ ಮಂಗಳೂರಿನಲ್ಲಿ ನಡೆಯುತ್ತಿದೆ. ಇದು ಮಂಗಳೂರಿಗೆ ಮಾತ್ರವಲ್ಲದೆ ರಾಜ್ಯಕ್ಕೂ ಪ್ರತಿಷ್ಠೆಯಾಗಿದೆ. ಇದಕ್ಕೆ ಬೇಕಾಗುವ ಅನುದಾನವನ್ನು ಜಿಲ್ಲೆಯ ವಿವಿಧ ಸಾರ್ವಜನಿಕ ವಲಯಗಳ ಸಂಸ್ಥೆಗಳು, ಬ್ಯಾಂಕ್‌ಗಳು, ಖಾಸಗಿ ಸಂಸ್ಥೆಗಳಿಂದ ಪ್ರಾಯೋಜಕತ್ವದ ಮೂಲಕ ಹೊಂದಿಸಿಕೊಳ್ಳುವ ಅಗತ್ಯವಿದೆ ಎಂದರು.ಜಿಲ್ಲಾಧಿಕಾರಿ ದರ್ಶನ್‌ ಮಾತನಾಡಿ, ಕ್ರೀಡಾಕೂಟಕ್ಕೆ ಪ್ರೇಕ್ಷಕರಾಗಿ ವಿವಿಧ ಶಾಲೆ, ಪಿಯು ಕಾಲೇಜುಗಳ ಮಕ್ಕಳನ್ನು ಕರೆಸುವ ವ್ಯವಸ್ಥೆ ಮಾಡಬೇಕು. ಉದ್ಘಾಟನೆಯ ಮುನ್ನಾ ದಿನ ಅಥವಾ ಸಮಾರೋಪ ಕಾರ್ಯಕ್ರಮವನ್ನು ಕಡಲ ಕಿನಾರೆಯಲ್ಲಿ ಆಯೋಜಿಸಬೇಕು. ಕರಾವಳಿ ಉತ್ಸವ ಪ್ರಚಾರಕ್ಕೆ ಚಾಲನೆ ನೀಡುವುದನ್ನೂ ಇದರಲ್ಲಿ ಜೋಡಿಸಿಕೊಂಡರೆ ಉತ್ತಮ ಎಂದು ಸೂಚನೆ ನೀಡಿದರು.ದ.ಕ. ಬ್ಯಾಡ್ಮಿಂಟನ್‌ ಅಸೋಸಿಯೇಶನ್‌ ಅಧ್ಯಕ್ಷ ಸಂತೋಷ್‌ ಕುಮಾರ್‌ ಶೆಟ್ಟಿ ಮಾತನಾಡಿ, ಇದೊಂದು ಗ್ಲೋಬಲ್‌ ರ್‍ಯಾಂಕಿಂಗ್‌ ಸ್ಪರ್ಧೆಯಾಗಿದ್ದು, 450ಕ್ಕೂ ಅಧಿಕ ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. 120ಕ್ಕೂ ಅಧಿಕ ತಾಂತ್ರಿಕ ಅಧಿಕಾರಿಗಳು, 8 ದಿನದಲ್ಲಿ 15 ಸಾವಿರಕ್ಕೂ ಅಧಿಕ ಪ್ರೇಕ್ಷಕರು, ಪಾಲ್ಗೊಳ್ಳಲಿದ್ದಾರೆ. ವಿಶ್ವ ಬ್ಯಾಡ್ಮಿಂಟನ್‌ ಒಕ್ಕೂಟ, ಭಾರತೀಯ ಬ್ಯಾಡ್ಮಿಂಟನ್‌ ಸಂಸ್ಥೆ, ಕರ್ನಾಟಕ ಬ್ಯಾಡ್ಮಿಂಟನ್‌ ಸಂಸ್ಥೆಯಿಂದ 100ಕ್ಕೂ ಅಧಿಕ ಪಾದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ರಾಜು, ಜಿ.ಪಂ. ಉಪಕಾರ್ಯದರ್ಶಿ ಜಯಲಕ್ಷ್ಮಿ ರಾಯಕೋಡ, ಪಾಲಿಕೆ ಆಯಕ್ತ ರವಿಚಂದ್ರ ನಾಯಕ್‌, ಸ್ಮಾರ್ಟ್‌ಸಿಟಿ ಎಂ.ಡಿ. ಡಾ. ಸಂತೋಷ್‌ ಕುಮಾರ್‌, ಜನರಲ್‌ ಮೆನೇಜರ್‌ ಅರುಣ್‌ ಪ್ರಭಾ, ಮುಡಾ ಆಯುಕ್ತ ಮುಹಮ್ಮದ್‌ ನಝೀರ್‌, ವಿಧಾನ ಪರಿಷತ್‌ ಮಾಜಿ ಸದಸ್ಯ ಹರೀಶ್‌ ಕುಮಾರ್‌, ಅಸೋಸಿಯೇಶನ್‌ ಕಾರ್ಯದರ್ಶಿ ಸುಪ್ರೀತ್‌ ಆಳ್ವ, ಉಪಾಧ್ಯಕ್ಷ ಅಶೋಕ್‌ ಹೆಗ್ಡೆ ಮತ್ತಿತರರಿದ್ದರು. ಕ್ರೀಡಾ ಇಲಾಖೆ ಉಪ ನಿರ್ದೇಶಕ ಪ್ರದೀಪ್‌ ಡಿಸೋಜಾ ನಿರೂಪಿಸಿದರು. ವಿವಿಧ ಇಲಾಖೆಗಳ ಅಧಿಕಾರಿಗಳು, ಎಂಆರ್‌ಪಿಎಲ್‌, ಕೆಸಿಸಿಐ, ಕ್ರೆಡೈ ಸೇರಿದಂತೆ ವಿವಿಧ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.