ಶಿಗ್ಗಾಂವಿ: ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಬೆಳಗ್ಗೆ 9 ಗಂಟೆಗೆ ಧ್ವಜಾರೋಹಣ ನೆರವೇರಿಸಬೇಕಿದ್ದ ತಾಲೂಕು ಆಡಳಿತವು ನಿಗದಿತ ಸಮಯಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳದ ಹಿನ್ನೆಲೆಯಲ್ಲಿ ಕನ್ನಡಪರ ಹೋರಾಟಗಾರರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮವನ್ನು ಸರಿಯಾಗಿ ಬೆಳಗ್ಗೆ 9 ಗಂಟೆಗೆ ನೆರವೇರಿಸಲು ಸಮಯ ನಿಗದಿಪಡಿಸಲಾಗಿತ್ತು. ಆದರೆ 9 ಗಂಟೆಯಾದರೂ ಕಾರ್ಯಕ್ರಮದ ಸ್ಥಳದಲ್ಲಿ ಬ್ಯಾನರ್ ಕೂಡ ಅಳವಡಿಸದೆ ಇರುವುದನ್ನು ಗಮನಿಸಿದ ಕನ್ನಡಪರ ಹೋರಾಟಗಾರರಾದ ಸಂತೋಷಗೌಡ ಪಾಟೀಲ, ಬಸಲಿಂಗಪ್ಪ ನರಗುಂದ, ಶಂಬು ಕೇರಿ, ಈರಣ್ಣ ಸಮಗೊಂಡ, ನಾಗರಾಜ ದೇಸಾಯಿ, ರವಿ ಕಡಕೋಳ ಹಾಗೂ ಮಹಿಳಾ ಕನ್ನಡಪರ ಹೋರಾಟಗಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣವರ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ ಸಾಳೊಂಕೆ ಅವರನ್ನು ಪ್ರಶ್ನಿಸಿದ ಹೋರಾಟಗಾರರು, ಕನ್ನಡ ರಾಜ್ಯೋತ್ಸವದಂತಹ ನಾಡಿನ ಹೆಮ್ಮೆಯ ಹಬ್ಬದ ಆಚರಣೆಯಲ್ಲಿಯೇ ಅಧಿಕಾರಿಗಳು ಸಮಯಪ್ರಜ್ಞೆ ಹಾಗೂ ಜವಾಬ್ದಾರಿ ಪ್ರದರ್ಶಿಸದಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಕನ್ನಡ ರಾಜ್ಯೋತ್ಸವದಂತಹ ಮಹತ್ವದ ಕಾರ್ಯಕ್ರಮಗಳಲ್ಲಿ ಸಮಯಪಾಲನೆ ಮತ್ತು ಶಿಸ್ತು ಕಾಪಾಡುವುದು ಅಧಿಕಾರಿಗಳ ಕರ್ತವ್ಯವಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ಲೋಪಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಕನ್ನಡಪರ ಹೋರಾಟಗಾರರು ಒತ್ತಾಯಿಸಿದರು.