ಶ್ರೀರಂಗಪಟ್ಟಣ ತಾಲೂಕಿನ ಮುಂಡುಗದೊರೆ ಗ್ರಾಮದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿ ಸಿಡಿ ಮದ್ದು, ಇಟಾಚಿ ಯಂತ್ರ, ಕಂಪ್ರೆಸರ್, ಜನರೇಟರ್ ವಶ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿ ಬಂಡೆ ಸಿಡಿಸಲು ಬಚ್ಚಿಟ್ಟಿದ್ದ ಸಿಡಿ ಮದ್ದು ಸೇರಿದಂತೆ ಯಂತ್ರಗಳನ್ನು ವಶಪಡಿಸಿಕೊಂಡಿರುವ ಘಟನೆ ತಾಲೂಕಿನ ಮುಂಡುಗದೊರೆ ಗ್ರಾಮದಲ್ಲಿ ನಡೆದಿದೆ.ಅರಣ್ಯ ಹಾಗೂ ಗೋಮಾಳದ ಪ್ರದೇಶದಲ್ಲಿ ಪುನೀತ್ ಸ್ಟೋನ್ ಕ್ರಷರ್ ಹೆಸರಿನಲ್ಲಿ ಸುಮಾರು 5 ಎಕರೆ ಪ್ರದೇಶದಲ್ಲಿ ಅಕ್ರಮ ಕಲ್ಲುಗಣಿಗಾರಿಗೆ ನಡೆಸುತ್ತಿರುವ ಬಗ್ಗೆ ಸ್ಥಳೀಯರು, ರೈತ ಸಂಘಟನೆ ಹಾಗೂ ದಲಿತ ಸಂಘಟನೆಗಳ ಮಾಹಿತಿ ಮೇರೆಗೆ ತಹಸೀಲ್ದಾರ್ ಚೇತನಾ ಯಾದವ್ ನೇತೃತ್ವದಲ್ಲಿ ಕಂದಾಯ ಇಲಾಖೆ, ಪೊಲೀಸ್, ಅರಣ್ಯ ಇಲಾಖೆ ಹಾಗೂ ಗಣಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಈ ವೇಳೆ ಕಲ್ಲುಗಣಿಗಾರಿಕೆಗೆ ಬಳಸುತಿದ್ದ 3 ಇಟಾಚಿ ಯಂತ್ರ, 2 ಕಂಪ್ರೆಸರ್, 1 ಜನರೇಟರ್, ಸಿಡಿಮದ್ದು ಸೇರಿದಂತೆ ಇತರ ಪರಿಕರಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಬಂಧ ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ರೈತ ಮುಖಂಡ ಮಂಜೇಶ್‌ಗೌಡ ಪ್ರತಿಕ್ರಿಯಿಸಿ, ತಾಲೂಕಿನ ಹಂಗರಹಳ್ಳಿ, ಕಾಳೇನಹಳ್ಳಿ, ಸಿದ್ದಾಪುರ, ಮುಂಗುಡದೊರೆ, ಟಿ.ಎಂ ಹೊಸೂರು, ಚನ್ನನಕೆರೆ, ಜಕ್ಕನಹಳ್ಳಿ, ಗಣಂಗೂರು, ನೀಲನಕೊಪ್ಪಲು ಸೇರದಂತೆ ಇತರೆ ಗ್ರಾಮಗಳ ಅರಣ್ಯ ಹಾಗೂ ಗೋಮಾಳಗಳಲ್ಲಿ ಎಗ್ಗಿಲ್ಲದೆ ನಿತ್ಯ ಗಣಿಗಾರಿಕೆ ನಡೆಯುತ್ತಿವೆ. ಅಲ್ಲದೇ ಅಕ್ರಮವಾಗಿ ಗಣಿಗಾರಿಕೆ ನಡೆಸದಂತೆ ನಿಷೇಧಾಜ್ಞೆ ಹೇರಿದ್ದರೂ ಸಹ ಗಣಿಗಾರಿಕೆ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಕ್ರಮ ಗಣಿಗಾರಿಕೆಯಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರು. ನಷ್ಟ ಸಂಭವಿಸುತ್ತಿದೆ. ರಾಜಕಾರಣಿಗಳು ಸೇರಿದಂತೆ ಉಳ್ಳವರು ತಮ್ಮ ಪ್ರಭಾವ ಬಳಸಿ ಅಕ್ರಮ ಗಣಿಗಾರಿಕೆ ನಡೆಸುವ ಮೂಲಕ ಅರಣ್ಯ ಸಂಪತ್ತನ್ನು ನಾಶ ಪಡಿಸುತ್ತಿದ್ದಾರೆ. ನಿತ್ಯ ಭಾರೀ ಗಾತ್ರದ ವಾಹನಗಳ ಮೂಲಕ ಎಂ-ಸ್ಯಾಡ್, ಜಲ್ಲಿ, ಬೋಡ್ರಸ್, ಡಸ್ಟ್ ಸೇರಿದಂತೆ ಗಣಿಗಾರಿಕೆ ಕಚ್ಚಾ ವಸ್ತುಗಳು ಸಾಗಾಟಣೆಯಾಗುತ್ತಿದೆ. ಈ ಎಲ್ಲಾ ಮಾಹಿತಿ ಗೊತ್ತಿದ್ದರೂ ಅಧಿಕಾರಿಗಳು ಅಂತಹವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.