-ಜಿಪಂ ಸಿಇಒ ಲವೀಶ್‌ ಒರಡಿಯಾ ಭೇಟಿ । ಸರ್ಕಾರಿ ಪ್ರೌಢಶಾಲೆ, ಪ್ರಾಥಮಿಕ ಶಾಲೆ, ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಪರೀಶೀಲನೆ

-----

ಕನ್ನಡಪ್ರಭ ವಾರ್ತೆ ಕೆಂಭಾವಿ

ಗ್ರಾಮಗಳಲ್ಲಿ ಕುಡಿಯುವ ನೀರಿನ ಬಗ್ಗೆ ಅಧಿಕಾರಿಗಳು ಹೆಚ್ಚು ಕಾಳಜಿ ವಹಿಸಿ ವಾರಕ್ಕೊಮ್ಮೆ ಕುಡಿಯುವ ನೀರನ್ನು ಪರೀಕ್ಷೆಗೊಳಪಡಿಸಿ ಜನತೆಗೆ ಒದಗಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ ಓರಡಿಯಾ ಸೂಚನೆ ನೀಡಿದರು.

ಮಂಗಳವಾರ ಕೆಂಭಾವಿ ವಲಯದ ಏವೂರ, ಮಲ್ಲಾ ಮತ್ತು ಯಾಳಗಿ ಗ್ರಾಮ ಪಂಚಾಯತ್, ಸರ್ಕಾರಿ ಪ್ರೌಢಶಾಲೆ, ಪ್ರಾಥಮಿಕ ಶಾಲೆ ಮತ್ತು ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಪರೀಶೀಲನೆ ನಡೆಸಿದ ನಂತರ ಮಾತನಾಡಿದ ಅವರು, ಜನತೆಗೆ ಪೂರೈಕೆಯಾಗುತ್ತಿರುವ ಕುಡಿಯುವ ನೀರನ್ನು ಪ್ರತಿ ವಾರಕ್ಕೊಮ್ಮೆ ಪರೀಕ್ಷಿಸಬೇಕು, ಗ್ರಾಮದಲ್ಲಿ ನೈರ್ಮಲ್ಯ ಕಾಪಾಡಲು ಕಸ ವಿಲೇವಾರಿ ಮಾಡುವುದರ ಜೊತೆಗೆ ರಸ್ತೆ, ಚರಂಡಿ ಸ್ವಚ್ಚಗೊಳಿಸಬೇಕು ಎಂದು ತಾಕೀತು ಮಾಡಿದರು. ಯಾವುದೆ ಕಾರಣಕ್ಕೂ ಜನತೆಗೆ ಮಲೀನ ನೀರು ಪೂರೈಕೆಯಾಗದಂತೆ ಕ್ರಮ ವಹಿಸಿಬೇಕು ಎಂದರು.


ಕೆಲವು ಭಾಗಗಳಲ್ಲಿ ಮಳೆಯ ಕೊರತೆಯಿಂದ ನೀರಿನ ಸಮಸ್ಯೆ ಇದ್ದು ಅದಕ್ಕೆ ಪರ್ಯಾಯ ಮಾರ್ಗೋಪಾಯ ಕಂಡುಕೊಳ್ಳಲು ಗ್ರಾಪಂ ಮುಂದಾಗಬೇಕು ಎಂದು ತಿಳಿಸಿದರು.

ಏವೂರ ತಾಂಡಾದಲ್ಲಿ ನಡೆಯುತ್ತಿರುವ ಸರ್ಕಾರಿ ಶಾಲೆಯ ಕಟ್ಟಡ ದುರಸ್ತಿ ವೀಕ್ಷಿಸಿದ ಸಿಇಒ ಅವರು, ಗುಣಮಟ್ಟದ ಕಾಮಗಾರಿ ಮಾಡುವ ಮೂಲಕ ಮಕ್ಕಳಿಗೆ ಅನುಕೂಲ ಕಲ್ಪಿಸಬೇಕು ಯಾವುದೆ ಕಾರಣಕ್ಕೂ ಕಟ್ಟಡಕ್ಕೆ ಧಕ್ಕೆ ಆಗದಂತೆ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಸ್ಥಳದಲ್ಲಿದ್ದ ಇಂಜೀನೀಯರ್‌ಗಳಿಗೆ ಸೂಚನೆ ನೀಡಿದರು.

ನಂತರ ಮಲ್ಲಾ ಮತ್ತು ಯಾಳಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ವಿವಿಧ ವಿಭಾಗಗಳನ್ನು ಪರಿಶೀಲಿಸಿ ಯಾವುದಕ್ಕೆ ಕಾರಣಕ್ಕೂ ಸೂಕ್ಷ್ಮ ಪ್ರಸವ ಸಮಯದಲ್ಲಿ ಮಹಿಳೆಯರನ್ನು ತಮ್ಮ ಆರೋಗ್ಯ ಕೇಂದ್ರದಲ್ಲಿ ಇಟ್ಟುಕೊಳ್ಳದೆ ಜಿಲ್ಲಾ ಕೇಂದ್ರದಲ್ಲಿರುವ ಆರೋಗ್ಯ ಕೇಂದ್ರಕ್ಕೆ ಕಳಿಸಬೇಕೆಂದು ವೈದ್ಯರಿಗೆ ಸೂಚನೆ ನೀಡಿದರು.

ಪ್ರತಿದಿನ ಆರೋಗ್ಯ ಕೇಂದ್ರದಲ್ಲಿ ಆಗುವ ಬಾಣಂತಿಯರ ವಿವರವನ್ನು ತಪ್ಪದೆ ಜಿಲ್ಲಾ ಕೇಂದ್ರಕ್ಕೆ ನೀಡಬೇಕು ಎಂದು ತಿಳಿಸಿದರು.

ತಾಲೂಕಾ ಪಂಚಾಯತ ಇಒ ಬಸವರಾಜ ಸಜ್ಜನ, ಜಿಪಂ ಇಇ ಗಿರೀಶ ಗುಡ್ಡಾ, ಎಇಇ ಎಚ್. ಡಿ. ಪಾಟೀಲ, ಎ.ಇ ರಾಮಚಂದ್ರ, ತಾಪಂ ತಾಂತ್ರಿಕ ಅಧಿಕಾರಿ ಶಿವಯೋಗಿ ಹಿರೇಮಠ, ಏವೂರ ಪಿಡಿಒ ರಾಜಕುಮಾರ ಸುಬೇದಾರ, ಯಾಳಗಿ ಪಿಡಿಒ ಸತೀಶ ಆಲಗೂರ, ತಾಲೂಕಾ ಕಾರ್ಯಕ್ರಮ ವ್ಯವಸ್ಥಾಪಕಿ ಸವಿತಾ ಪಾಲ್ಕಿ ಇದ್ದರು.

ಚಿತ್ರ ೧೪ಕೆಇಎಮ್೧ಎ

ಕೆಂಭಾವಿ ವಲಯದ ಏವೂರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಗೆ ಮಂಗಳವಾರ ಜಿಪಂ ಸಿಇಒ ಲವೀಶ ಓರಡಿಯಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಾಪಂ ಇಒ ಬಸವರಾಜ ಸಜ್ಜನ, ಗಿರೀಶ ಗುಡ್ಡ, ಎಚ್. ಡಿ. ಪಾಟೀಲ ಇದ್ದರು.

---ಚಿತ್ರ ೧೪ಕೆಇಎಮ್೧ಬಿ

ಯಾಳಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಂಗಳವಾರ ಜಿಪಂ ಸಿಇಒ ಲವೀಶ ಓರಡಿಯಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಾಪಂ ಇಒ ಬಸವರಾಜ ಸಜ್ಜನ, ವೈದ್ಯಾಧಿಕಾರಿ ಡಾ. ಚನ್ನಬಸಪ್ಪ, ಪಿಡಿಒ ಸತೀಶ ಆಲಗೂರ ಇದ್ದರು.