ಜನವರಿ 16 ರಿಂದ 22 ರವರೆಗೆ ತುಮಕೂರಿನಲ್ಲಿ ನಡೆಯಲಿರುವ ಕರ್ನಾಟಕ ಒಲಿಂಪಿಕ್ ಕ್ರೀಡಾಕೂಟ ತುಮಕೂರಿನ ಐತಿಹಾಸಿಕ ಕಾರ್ಯಕ್ರಮ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.
ಕನ್ನಡಪ್ರಭ ವಾರ್ತೆ, ತುಮಕೂರುಜನವರಿ 16 ರಿಂದ 22 ರವರೆಗೆ ತುಮಕೂರಿನಲ್ಲಿ ನಡೆಯಲಿರುವ ಕರ್ನಾಟಕ ಒಲಿಂಪಿಕ್ ಕ್ರೀಡಾಕೂಟ ತುಮಕೂರಿನ ಐತಿಹಾಸಿಕ ಕಾರ್ಯಕ್ರಮ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.ಮಂಗಳವಾರ ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಕರ್ನಾಟಕ ಕ್ರೀಡಾಕೂಟದ ಪೂರ್ವೋತ್ಸವ ಹಾಗೂ ಒಳಾಂಗಣ ಕ್ರೀಡಾಂಗಣದ ನಾಮಫಲಕ ಅನಾವರಣ ಹಾಗೂ ನವೀಕೃತ ಕ್ರೀಡಾಂಗಣದ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ತುಮಕೂರಿನಲ್ಲಿ ರಾಜ್ಯ ಮಟ್ಟದ ಕ್ರೀಡಾಕೂಟವನ್ನು ಆಯೋಜಿಸಿರುವುದು ತುಮಕೂರು ಜಿಲ್ಲೆಗೆ ಐತಿಹಾಸಿಕ ಕ್ಷಣವಾಗಿದೆ. ಈ ಹಿಂದೆ ತುಮಕೂರಿನಲ್ಲಿ ರಾಜ್ಯ ಮಟ್ಟದ ಕ್ರೀಡಾಕೂಟ ನಡೆದಿಲ್ಲ, ತುಮಕೂರಿನಲ್ಲಿ ಕ್ರೀಡಾಕೂಟ ಆಯೋಜಿಸಲು ಕರ್ನಾಟಕ ಒಲಿಂಪಿಕ್ ಸಂಸ್ಥೆ ಅಧ್ಯಕ್ಷರನ್ನು ಒಪ್ಪಿಸಿ ಈ ಅವಕಾಶ ಪಡೆದಿದ್ದು, ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಆಗದಂತಹ ಅದ್ದೂರಿ ಕ್ರೀಡಾಕೂಟ ಇದಾಗಲಿದೆ. ಈ ಮೂಲಕ ತುಮಕೂರು ಮತ್ತೊಂದು ಇತಿಹಾಸ ಬರೆಯಲಿದೆ ಎಂದು ಅವರು ಹೇಳಿದರು. ಕರ್ನಾಟಕ ಕ್ರೀಡಾಕೂಟದಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರೀಡಾಪಟುಗಳು ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಲಿದ್ದು, ಜನವರಿ ೧೬ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದಾರೆ. ಜನವರಿ ೨೨ರಂದು ರಾಜ್ಯಪಾಲರು ಸಮಾರೋಪ ಭಾಷಣ ಮಾಡಲಿದ್ದಾರೆ. ಕ್ರೀಡಾಕೂಟ ವಿಜೃಂಭಣೆಯಿಂದ ನಡೆಸಲು ಎಲ್ಲಾ ಪೂರ್ವಸಿದ್ಧತೆಗಳನ್ನು ಮಾಡಲಾಗಿದೆ ಎಂದು ಹೇಳಿದರು. ಪ್ರತಿ ವರ್ಷ 5 ರಿಂದ 10 ಸಾವಿರ ಕ್ರೀಡಾಪಟುಗಳು ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದು, ಏಷ್ಯ ಮಟ್ಟದಲ್ಲಿ 500 ಕ್ರೀಡಾಪಟುಗಳನ್ನು ತಯಾರಿಸಿ ಕ್ರೀಡೆಯಲ್ಲಿ ಸಾಧನೆ ಮಾಡುವ ಗುರಿಯನ್ನು ರಾಜ್ಯ ಒಲಿಂಪಿಕ್ ಸಂಸ್ಥೆ ಹೊಂದಿದೆ. ಈ ನಿಟ್ಟಿನಲ್ಲಿ ತುಮಕೂರು ಜಿಲ್ಲೆಯ ಕ್ರೀಡಾಪಟುಗಳಿಗೆ ಹಾಗೂ ಯುವ ಸಮುದಾಯಕ್ಕೆ ಕ್ರೀಡಾಕ್ಷೇತ್ರದಲ್ಲಿ ಹೊಸ ಶಕೆ ಆರಂಭವಾಗಲಿದೆ ಎಂದು ಹೇಳಿದರು. ತುಮಕೂರು ಜಿಲ್ಲೆಯಲ್ಲಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದ್ದು, ಒಂದು ವರ್ಷದೊಳಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ ಪೂರ್ಣಗೊಳಿಸಿ ಪಂದ್ಯಗಳನ್ನು ನಮ್ಮ ಜಿಲ್ಲೆಯಲ್ಲಿ ರೂಪಿಸುವ ಉದ್ದೇಶವಿದೆ ಎಂದು ಅವರು ಹೇಳಿದರು.
ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷ ಹಾಗೂ ಶಾಸಕ ಡಾ. ಕೆ. ಗೋವಿಂದರಾಜ್, ಕ್ರೀಡಾ ಇಲಾಖೆಯ ಆಯುಕ್ತ ಚೇತನ್ , ಕರ್ನಾಟಕ ಒಲಿಂಪಿಕ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಟಿ. ಅನಂತರಾಜ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.