ಸಾರಾಂಶ
ಬ್ಯಾಡಗಿ: ಬರಗಾಲ ಪರಿಹಾರ ಹಾಗೂ ಬೆಳೆವಿಮೆ ಪರಿಹಾರ ಬಿಡುಗಡೆ ಮಾಡುವಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ, ರಾಜ್ಯ ರೈತಸಂಘ ಮತ್ತು ಹಸಿರುಸೇನೆ ಜಿಲ್ಲಾ ಘಟಕದ ನೇತೃತ್ವದಲ್ಲಿ ಅ. 22ರಂದು ಜಾನುವಾರುಗಳೊಂದಿಗೆ ರಸ್ತೆ ತಡೆ ನಡೆಸಿ, ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಾಗಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಹೇಳಿದರು.
ಈ ಕುರಿತು ಲಿಖಿತ ಮನವಿಯೊಂದನ್ನು ಸಲ್ಲಿಸಿದ ಅವರು, ಜಿಲ್ಲೆಯ ಎಲ್ಲಾ ತಾಲೂಕುಗಳು ಬರಗಾಲ ಎಂದು ಘೋಷಿಸಿದ ಬಳಿಕವೂ ಪರಿಹಾರ ನೀಡಲು ಹಿಂದೆ ಮುಂದು ನೋಡುತ್ತಿದೆ. ರಾಷ್ಟ್ರೀಯ ವಿಪತ್ತು ಪರಿಹಾರ (ಎನ್‌ಡಿಆರ್‌ಎಫ್) ಯೋಜನೆಯಡಿ ರು. 8500 ಮತ್ತು ರಾಜ್ಯ ವಿಪತ್ತು ಪರಿಹಾರ (ಎಸ್‌ಡಿಆರ್‌ಎಫ್) ಯೋಜನೆಯಡಿ ರು. 8500 ಸೇರಿದಂತೆ ಪ್ರತಿ ಹೆಕ್ಟೇರ್ ರು. 17 ಸಾವಿರ ನೀಡಬೇಕು. ಆದರೆ ಇಲ್ಲಿಯವರೆಗೆ ಕೇವಲ ರು. 2 ಸಾವಿರ ನೀಡಿದ್ದು ಇದೀಗ ಪ್ರತಿ ಕುಟುಂಬಕ್ಕೆ ರು. 2760 ನೀಡಲು ಮುಂದಾಗಿದೆ. ಒಂದು ವೇಳೆ ಕುಟುಂಬದಲ್ಲಿ ಮೂರ‍್ನಾಲ್ಕು ಖಾತೆಗಳಿದ್ದಲ್ಲಿ ಪರಿಹಾರದ ಹಣ ಯಾರಿಗೆ ಸೇರಬೇಕು, ಇಂತಹ ಕನಿಷ್ಠ ಜ್ಞಾನವೂ ರಾಜ್ಯ ಸರ್ಕಾರಕ್ಕೆ ಇರದಿರುವುದು ದುರಂತದ ಸಂಗತಿ ಎಂದರು.ವಿಮೆ ಮೊತ್ತಕ್ಕೆ ಬಡ್ಡಿ ಕೊಡಿ:ರೈತ ಸಂಘದ ಕಾರ್ಯಾಧ್ಯಕ್ಷ ಕಿರಣ ಗಡಿಗೋಳ ಮಾತನಾಡಿ, ಸೆಪ್ಟೆಂಬರ್ ಒಳಗೆ ವಿಮಾ ಕಂಪನಿ ಹಣ ನೀಡದಿದ್ದರೇ ಬಡ್ಡಿ ಸಮೇತ ರೈತರಿಗೆ ಹಿಂದಿರುಗಿಸುವಂತೆ ಕೇಂದ್ರ ಕೃಷಿ ಸಚಿವರು ಹೇಳಿಕೆ ನೀಡಿದ್ದಾರೆ. ಸಂಸದ ಬಸವರಾಜ ಬೊಮ್ಮಾಯಿ ಕೂಡಲೇ ಕೇಂದ್ರ ಕೃಷಿ ಸಚಿವರ ಜೊತೆ ಮಾತನಾಡಿ, ಕಳೆದ ವರ್ಷದ ವಿಮೆ ಮೊತ್ತಕ್ಕೆ ಬಡ್ಡಿ ಸಮೇತ ಕೊಡಿಸುವುದೂ ಸೇರಿದಂತೆ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಯೋಜನೆಯಡಿ ರೈತರಿಗೆ ಹಣ ಕೊಡಿಸುವಂತೆ ಆಗ್ರಹಿಸಿದರು. ಈವೇಳೆ ಮುಖಂಡರಾದ ಮಲ್ಲೇಶಪ್ಪ ಡಂಬಳ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಶಿವಯೋಗಿ ಉಕ್ಕುಂದ, ಮಲ್ಲಪ್ಪ ಕೊಪ್ಪದ, ಬಸವರಾಜ ಕಡ್ಡೇರ, ಚಿಕ್ಕಪ್ಪ ಛತ್ರದ, ಮೌನೇಶ ಕಮ್ಮಾರ, ಜಾನ್ ಪುನೀತ್, ನಂಜುಂಡಯ್ಯ ಹಾವೇರಿಮಠ, ಕರಬಸಪ್ಪ ಮರಗಾಲ ಸೇರಿದಂತೆ ಇನ್ನಿತರರಿದ್ದರು.ದೆಹಲಿಯಲ್ಲಿ ನಡೆಸಿದಂತೆ ಹೋರಾಟ: ಬೆಳೆ ವಿಮೆ ಪರಿಹಾರ ಮತ್ತು ಬರಗಾಲ ಪರಿಹಾರ ನೀಡದೇ ಹೋದರೇ, ದೆಹಲಿಯಲ್ಲಿ ರೈತರು ನಡೆಸಿದ ಹೋರಾಟದ ಮಾದರಿಯಲ್ಲೇ ಪ್ರತಿಭಟನೆ ನಡೆಸಿ ಪಡೆದುಕೊಳ್ಳುತ್ತೇವೆ ಎಂದು ರೈತ ಸಂಘದ ಮುಖಂಡರು ಎಚ್ಚರಿಸಿದರು.