ವಿಜಯಪುರ: ನಗರದ ಕೃಷಿ ಮಹಾ ವಿದ್ಯಾಲಯ, ಕೃಷಿ ಇಲಾಖೆ ಹಾಗೂ ಕೃಷಿಕ ಸಮಾಜದ ಸಹಯೋಗದಲ್ಲಿ ಪ್ರತಿ ಎಕರೆಗೆ 100 ಟನ್‌ ಕಬ್ಬು ಬೆಳೆಯುವುದು ಹೇಗೆ ಕುರಿತು ಒಂದು ದಿನದ ತಾಂತ್ರಿಕ ಕಾರ್ಯಾಗಾರ ಏ.30ರಂದು ಬೆಳಗ್ಗೆ 9 ರಿಂದ ಸಂಜೆ 4.30ರ ವರೆಗೆ ಕೃಷಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಜರುಗಲಿದೆ.

ವಿಜಯಪುರ ಜಿಲ್ಲೆ ಹಾಗೂ ಪಕ್ಕದ ಜಿಲ್ಲೆಗಳಲ್ಲಿ ಈಗಾಗಲೇ ಪ್ರತಿ ಎಕರೆಗೆ 100 ಟನ್‌ ಕಬ್ಬು ಬೆಳೆದ ಪ್ರಗತಿಪರ ರೈತರು ನಮ್ಮ ಜಿಲ್ಲೆಯ ರೈತರ ಜತೆ ತಮ್ಮ ಅನುಭವಗಳನ್ನು ಕಾರ್ಯಾಗಾರದಲ್ಲಿ ಹಂಚಿಕೊಳ್ಳಲಿದ್ದಾರೆ. ಕಬ್ಬಿನ ಬೆಳೆಯಲ್ಲಿ ಕೃತಕ ಬುದ್ಧಿಮತ್ತೆ ಬಳಕೆ ಕುರಿತು ತಜ್ಞರಿಂದ ತಾಂತ್ರಿಕ ಮಾಹಿತಿ ನೀಡಲಾಗುವುದು. ಜತೆಗೆ ಕೃಷಿ ಮಹಾವಿದ್ಯಾಲಯ ವಿಜಯಪುರ ಹಾಗೂ ಕೃಷಿ ವಿಶ್ವ ವಿದ್ಯಾಲಯ ಧಾರವಾಡದ ನುರಿತ ವಿಜ್ಞಾನಿಗಳು ಕಬ್ಬು ಬೆಳೆಯ ಕುರಿತು ತಾಂತ್ರಿಕ ಮಾಹಿತಿ ನೀಡಲಿದ್ದಾರೆ.

ಕಾರ್ಯಾಗಾರದಲ್ಲಿ ಮಣ್ಣಿನ ಫಲವತ್ತತೆ, ನೀರಿನ ನಿರ್ವಹಣೆ, ಪೋಷಕಾಂಶಗಳ ನಿರ್ವಹಣೆ, ಕೊಯ್ಲೋತ್ತರ ನಿರ್ವಹಣೆ, ಕೃತಕ ಬುದ್ಧಿಮತ್ತೆ ಅಳವಡಿಕೆ ಕುರಿತು ರೈತರಿಗೆ ಮಾಹಿತಿ ನೀಡಲಾಗುವುದು.‌

ಜಿಲ್ಲಾಧಿಕಾರಿ ಡಾ.ಆನಂದ‌.ಕೆ ಕಾರ್ಯಾಗಾರ ಉದ್ಘಾಟಿಸಲಿದ್ದಾರೆ. ಜಿಪಂ ಸಿಇಒ ಹಾಗೂ ಕೃಷಿಕ ಸಮಾಜದ ಅಧ್ಯಕ್ಷರು ಭಾಗವಹಿಸಲಿದ್ದಾರೆ. ವಿಜಯಪುರ ಜಿಲ್ಲೆಯ ಕಬ್ಬು ಬೆಳೆಯುವ, ಕಬ್ಬು ಬೆಳೆಯಲು ಇಚ್ಛಿಸಿರುವ ರೈತರು ಈ ಕಾರ್ಯಾಗಾರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೃಷಿ ಇಲಾಖೆ ಜಂಟಿ‌ ನಿರ್ದೇಶಕ ಶಿವನಗೌಡ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.