ಸಾರಾಂಶ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಕೊಲ್ಕತ್ತಾದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನನಿರತ ವೈದ್ಯೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವುದನ್ನು ಖಂಡಿಸಿ ರಬಕವಿ-ಬನಹಟ್ಟಿ-ತೇರದಾಳ ಖಾಸಗಿ ಆಸ್ಪತ್ರೆಗಳ ವೈದ್ಯರು ಶನಿವಾರ ಹೊರರೋಗಿ ವಿಭಾಗ(ಒಪಿಡಿ) ಬಂದ್ ಮಾಡಿ ಪ್ರತಿಭಟನೆ ನಡೆಸಿತು. ಇದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಿದರು.ತಾಲೂಕಿನಾದ್ಯಂತ ಖಾಸಗಿ ಆಸ್ಪತ್ರೆಗಳಲ್ಲಿ ಬೆಳಿಗ್ಗೆ ೬ ರಿಂದ ಇಡೀ ದಿನ ಹೊರ ರೋಗಿ ವಿಭಾಗವನ್ನು ಬಂದ್ ಮಾಡಲಾಗಿತ್ತು. ಆದರೆ ತುರ್ತು ಸೇವೆ ಹಾಗೂ ಒಳರೋಗಿಗಳ ಚಿಕಿತ್ಸೆ ಯಥಾ ಪ್ರಕಾರ ನಡೆಯಿತು.
ಮುಷ್ಕರದ ಹಿನ್ನಲೆ ಖಾಸಗಿ ಆಸ್ಪತ್ರೆಗಳು ಒಪಿಡಿ ಬಂದ್ ಮಾಡಿದ ಪರಿಣಾಮ ಪ್ರತಿ ನಿತ್ಯ ಜನರಿಂದ ತುಂಬಿ ತುಳುಕುತ್ತಿದ್ದ ರಬಕವಿಯ ಯಶೋಧ ಕೃಷ್ಣ ಆಸ್ಪತ್ರೆ, ಡಾ.ಡೋರ್ಲೆ ಆಸ್ಪತ್ರೆ, ಡಾ. ದಾನಿಗೊಂಡ ಆಸ್ಪತ್ರೆ, ತ್ರಿಶಲಾದೇವಿ ಕಣ್ಣಿನ ಆಸ್ಪತ್ರೆ, ನದಾಫ್ ಆಸ್ಪತ್ರೆ, ಚಿತ್ತರಗಿ ಆಸ್ಪತ್ರೆ, ಮಾಳಿ ಆಸ್ಪತ್ರೆ, ಮೇತ್ರಿ ಆಸ್ಪತ್ರೆ, ಬನಹಟ್ಟಿಯ ಡಾ.ಶ್ವೇತಾ ಆಸ್ಪತ್ರೆ, ಪ್ರಭುಕಿರಣ ಆಸ್ಪತ್ರೆ, ಸಿದ್ಧೇಶ್ವರ ಆಸ್ಪತ್ರೆ, ಕನಕರಡ್ಡಿ ಆಸ್ಪತ್ರೆ, ಬೆಳಗಲಿ ಆಸ್ಪತ್ರೆ, ಅನುಪ ಆಸ್ಪತ್ರೆ ಸೇರಿದಂತೆ ಕೆಲ ಆಸ್ಪತ್ರೆಗಳಿಗೆ ಬೆಳಿಗ್ಗೆ ರೋಗಿಳು ಧಾವಿಸಿದ ನಂತರ ಚಿಕಿತ್ಸೆಗೆ ವೈದ್ಯರು ದೊರಕದ ಕಾರಣ ನಂತರ ಆಸ್ಪತ್ರೆಗಳ ಮುಂದೆ ಜನರಿಲ್ಲದೆ ಬಣಗುಡುತ್ತಿದ್ದವು.ಮುಷ್ಕರಕ್ಕೆ ಬೆಂಬಲ ನೀಡದ ಸರ್ಕಾರಿ ಸಮುದಾಯ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ದೊರಕಿದ ಕಾರಣ ಸಮಾಧಾನದ ಉಸಿರು ಬಿಡುವಂತಾಯಿತು. ವೈದ್ಯರ ಮುಷ್ಕರಕ್ಕೆ ಸಂಬಂಧಿಸಿದಂತೆ ಐಎಂಎ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಐಎಂಎಗೆ ಬೆಂಬಲಿಸಿದ ಎಎಫ್‌ಐ :ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ನಡೆಸುತ್ತಿರುವ ಹೋರಾಟಕ್ಕೆ ಆಯುಷ್ ಫೆಡರೇಶನ್ ಆಫ್ ಇಂಡಿಯಾ ಬೆಂಬಲಿಸಿದ ಪರಿಣಾಮ ತಾಲೂಕಿನಾದ್ಯಂತ ತಮ್ಮ ಕ್ಲಿನಿಕ್‌ಗಳಲ್ಲಿ ತುರ್ತು ಚಿಕಿತ್ಸೆ ಹೊರತುಪಡಿಸಿ ಎಲ್ಲ ವೈದ್ಯಕೀಯ ಸೇವೆಗಳಿಂದ ದೂರ ಉಳಿದಿದ್ದರು.
ದಾಖಲೆ ಒಪಿಡಿ:ರಬಕವಿ-ಬನಹಟ್ಟಿ ಸಮುದಾಯ ಆಸ್ಪತ್ರೆಯಲ್ಲಿ ಪ್ರತಿ ಶನಿವಾರ ಸಾಮಾನ್ಯವಾಗಿ ೨೦೦ ರಿಂದ ೨೫೦ ಹೊರ ರೋಗಿಗಳ ಚಿಕಿತ್ಸೆ ನಡೆಯುತ್ತಿತ್ತು. ಇಂದು ಎಲ್ಲೆಡೆ ಮುಷ್ಕರ ಕಾರಣ ೩೫೦ ರಿಂದ ೩೮೦ರವರೆಗೆ ಹೊರ ರೋಗಿಗಳು ಚಿಕಿತ್ಸೆ ಪಡೆದಿದ್ದು ದಾಖಲಾಗಿದೆ.