ಸಾರಾಂಶ
ಕಾರವಾರ: ಯಕ್ಷಗಾನ ಕಲೆ, ಜೀವಂತ ಸಮಸ್ಯೆ, ಕಲಾವಿದನ ಸಮಸ್ಯೆಗೆ ಒದಗದ ಮಾಧ್ಯಮಗಳು ಚಿತ್ರನಟಿ ಬಂದು ಯಕ್ಷಗಾನ ವೇಷ ಮಾಡಿದರೆ ಅದನ್ನು ದೊಡ್ಡದು ಮಾಡಿ ಅದನ್ನು ತಾತ್ವಿಕವಾಗಿ ಆಕ್ಷೇಪಿಸಿದವರ ಮೇಲೆ ಬಿದ್ದು ಸಮರ್ಥಿಸಿಕೊಳ್ಳುವುದು ಸೈದ್ಧಾಂತಿಕವಾಗಿ ಪರಮ ಅನ್ಯಾಯ ಎಂದು ಪ್ರಸಿದ್ಧ ತಾಳಮದ್ದಳೆ ಅರ್ಥದಾರಿ, ಸಂಶೋಧಕ, ಯಕ್ಷಗಾನ ಕಲಾವಿದ ಡಾ. ಎಂ. ಪ್ರಭಾಕರ ಜೋಶಿ ಅಭಿಪ್ರಾಯಪಟ್ಟಿದ್ದಾರೆ.
ಚಿತ್ರನಟಿ ಉಮಾಶ್ರೀ ಇತ್ತೀಚೆಗೆ ಹೊನ್ನಾವರಕ್ಕೆ ಆಗಮಿಸಿ ಶ್ರೀರಾಮ ಪಟ್ಟಾಭಿಷೇಕ ಪ್ರಸಂಗದಲ್ಲಿ ಮಂಥರೆಯ ಪಾತ್ರ ಮಾಡಿದ ಬಳಿಕ ಉಂಟಾದ ಚರ್ಚೆ ಹಿನ್ನೆಲೆ ಡಾ. ಎಂ. ಪ್ರಭಾಕರ ಜೋಶಿ ಅವರು ಪ್ರತಿಕ್ರಿಯೆ ನೀಡಿದ್ದು, ಸ್ವತಂತ್ರ ಸಂಘಟನೆಗಳು, ಮಳೆಗಾಲದ ಆಟ, ಕೇವಲ ಹವ್ಯಾಸಿ ಆಟದಲ್ಲಿ ಹೊರಗಿನವರು ಬರುವುದಕ್ಕೂ ವ್ಯವಸಾಯ ಮೇಳಕ್ಕೆ ಸ್ಥಾನ ಬಲದಿಂದ ಬಂದು ಅದನ್ನೇ ದೊಡ್ಡದಾಗಿ ಮಾಡುವುದು ಸರಿಯಲ್ಲ. ನಟ ನಟಿಯರ ಬಗ್ಗೆ ಗೌರವ ಇದೆ. ಎಲ್ಲ ಕಲೆ, ಕಲಾವಿದರ ಬಗ್ಗೆ ಗೌರವ ಇದೆ. ಇದು ಅವರ ಬಗ್ಗೆ ಟೀಕೆ ಅಲ್ಲ ಎಂದರು.ಭಾರತೀಯ ಕಲಾ ಪ್ರಕಾರಗಳ ಪ್ರದರ್ಶನ, ಸಂಶೋಧನೆ, ವಿಶ್ಲೇಷಣೆ ಎಲ್ಲದರ ಮೇಲೆ ಹಸ್ತಕ್ಷೇಪ ಆಗುತ್ತಿದೆ. ಯಕ್ಷಗಾನ, ಮೇಳ, ಕಲಾವಿದರು ಇವುಗಳ ಬಗ್ಗೆ ಮಾಧ್ಯಮಗಳು ಚರ್ಚೆ ಮಾಡದೆ, ಕೇವಲ ಮೆರೆಸಿದರೆ ಕಷ್ಟ. ಇದನ್ನು ರಾಜಕೀಯ ಕ್ಷೇತ್ರ ತಡೆದುಕೊಳ್ಳಬಹುದು. ಏಕೆಂದರೆ ವೈಭವೀಕರಣವೇ ರಾಜಕೀಯಕ್ಕೆ ಜೀವಾಳ. ಆದರೆ ಒಂದು ಪಾಪದ ಕಲೆ ಇದನ್ನು ಸಹಿಸಿಕೊಳ್ಳಲಾರದು ಎಂದಿದ್ದಾರೆ.ಸಿನಿಮಾ ರಂಗದ ಪ್ರಮುಖ ನಟಿ ಬಂದು ಮಂಥರೆಯ ಪಾತ್ರ ಮಾಡಿದರು. ಇದು ದೊಡ್ಡ ಸುದ್ದಿಯಾಯಿತು. ಇದು ಇತಿಹಾಸದಲ್ಲೇ ನಡೆಯದ ಘಟನೆ ಎಂದು ಬಿಂಬಿಸಲಾಯಿತು. ನಂತರ ಈ ಬಗ್ಗೆ ಚರ್ಚೆಯೂ ಆಯಿತು. ಇದರಿಂದ ಆಟ ಮಾಡಿಸಿದವರಿಗೆ ಬೇಜಾರಾಯಿತು. ಕೆಲವರು ಈ ಹಿಂದೆಯೂ ಚಿತ್ರನಟರು ವೇಷ ಮಾಡಿದ್ದಾರೆ ಎಂದು ಸಮರ್ಥಿಸಿಕೊಂಡರು. ಇದು ಸಂವಿಧಾನದತ್ತ ಹಕ್ಕು ಎಂದೂ ಪ್ರತಿಪಾದಿಸಿದರು. ಆದರೆ ಇದು ಸಮರ್ಥನೆ ಅಲ್ಲ ಎಂದರು.ಯಕ್ಷಗಾನಕ್ಕೆ ಸಂಬಂಧಪಡದವರು ಯಕ್ಷಗಾನ ವೇಷ ಮಾಡಿದರೆ ಅದು ದೊಡ್ಡ ಸುದ್ದಿಯಾಗುತ್ತದೆ. ಆದರೆ ಯಕ್ಷಗಾನ ಕಲಾವಿದರ ಸಾಧನೆ ಸುದ್ದಿಯಾಗುವುದೇ ಇಲ್ಲ. ಪ್ರಸಿದ್ಧ ಕಲಾವಿದ ಕೆ. ಗೋವಿಂದ ಭಟ್ ಒಂದೇ ರಾತ್ರಿ ಮೂರು ವೇಷ ಮಾಡಿದರೆ, ನಿರಂತರ 71 ವರ್ಷ ತಿರುಗಾಟ ಮಾಡಿದರೆ ಅದು ಆ ಮಟ್ಟದಲ್ಲಿ ಸುದ್ದಿಯಾಗುವುದೇ ಇಲ್ಲ ಎಂದು ವಿಷಾಧಿಸಿದರು. ಉಮಾಶ್ರೀ ಅವರು ಯಕ್ಷಗಾನಕ್ಕೆ ಬರಬಾರದು ಎಂದೇನಿಲ್ಲ. ಮುಂದೆ ಬೇರೆ ನಟರೂ ಬರಬಹುದು. ಆದರೆ ವ್ಯವಸಾಯ ಮೇಳದಲ್ಲಿ ಯಕ್ಷಗಾನಕ್ಕೆ ಸಂಬಂಧಪಡದ ಒಬ್ಬರನ್ನು ತಂದು ಮೆರೆಸಿದರೆ ಮರುದಿನ ಆಟ ಆಗುವಲ್ಲಿ ನಿನ್ನೆ ಅವರು ಬಂದರಲ್ಲ. ಇಂದು ಯಾಕಿಲ್ಲ ಎಂದು ಕೇಳುತ್ತಾರೆ. ಹೀಗಾದರೆ ಇದು ಮೇಳದ ಸಂಘಟನೆಗೆ ದೊಡ್ಡ ಪೆಟ್ಟು. ಸಿನಿಮಾ ನಟರನ್ನು ಸಮರ್ಥಿಸುವ ಭರದಲ್ಲಿ ಮೇಳದ ವ್ಯವಸ್ಥೆಗೆ ತೊಂದರೆ ಆಗುವುದನ್ನು ಗಮನಿಸುವುದೇ ಇಲ್ಲ ಎಂದು ಕಳವಳ ವ್ಯಕ್ತಪಡಿಸಿದರು.ರಾಜಕಾರಣಿಗಳು, ಶಾಸಕರು ಯಕ್ಷಗಾನ ಮಾಡುತ್ತಾರೆ. ಆದರೆ ಅದು ಬೇರೆ. ವ್ಯವಸಾಯ ಮೇಳದಲ್ಲಿ ಒಬ್ಬರನ್ನು ತಂದು ಮೆರೆಸಿದರೆ ಅದು ಮೇಳದ ಸಂಘಟನೆ ಮೇಲೆ ದೂರಗಾಮಿ ಪರಿಣಾಮ ಬೀರಲಿದೆ. ಸರ್ಕಲ್ ಇನ್ಸ್‌ಪೆಕ್ಟರ್ ಸಂಗೀತ ಎಂದು ಕೆರೆಮನೆ ಶಂಭು ಹೆಗಡೆ ಒಮ್ಮೆ ಹೇಳಿದ್ದರು. ಅದು ಸಂಗೀತವೇ ಆದರೆ ಅಡ್ಡಿಲ್ಲ. ಆದರೆ ಸರ್ಕಲ್ ಇನ್ಸ್‌ಪೆಕ್ಟರ್ ಸಂಗೀತ ಆಗಬಾರದು ಎಂದರು. ಯಕ್ಷಗಾನ ಮೇಳ ಎಂದರೆ ವರ್ಷಕ್ಕೆ180 ಆಟ ಇರಬೇಕೆಂದೇನಿಲ್ಲ. ಸ್ವತಂತ್ರ ರಂಗ ಸಿದ್ಧಾಂತ ಇದ್ದು, ಅದಕ್ಕೆ ಬದ್ಧವಾಗಿದ್ದರೆ ಅದು ಮೇಳವೇ. ಬೇರೆಯವರಿಂದ ಯಕ್ಷಗಾನ ವೇಷ ಮಾಡಿಸಿ ಅದಕ್ಕೆ ಆಕ್ಷೇಪ ಬಂದಾಗ ಹಿಂದೆ ಹೀಗೆ ಆಗಿದೆ. ಬೇರೆ ಕಡೆ ಮಾಡಿದ್ದಾರೆ ಎನ್ನುವುದು ಸಮರ್ಥನೆ ಆಗಲಾರದು. ಇಂತದ್ದು ಮಾಡುವುದರಿಂದ ಯಕ್ಷರಂಗಭೂಮಿಗೆ ನ್ಯಾಯವೇ, ನಷ್ಟವೇ ಯೋಚಿಸಬೇಕು. ಹಾಗಂತ ಪ್ರಯೋಗಗಳಿಗೆ ಆಕ್ಷೇಪಿಸುವುದಿಲ್ಲ. ಕಲೆಯ ವಿಮರ್ಶೆ ದೃಷ್ಟಿಯಿಂದ ಈ ಟ್ರೆಂಡ್ ಒಳ್ಳೆಯದಲ್ಲ ಎಂದು ಎಚ್ಚರಿಸಿದರು.ನಮ್ಮಲ್ಲಿ ಗಂಭೀರವಾದ ವಿಮರ್ಶೆ ಯಾವುದು ಎನ್ನುವ ತಿಳಿವಳಿಕೆ ಇಲ್ಲ. ರಂಜನೆಯೇ ಮುಖ್ಯವಾಗಿದೆ. ಈಗ ಆಡಳಿತಕ್ಕಿಂತ ಡಿನ್ನರ್ ಮೀಟಿಂಗ್ ಮುಖ್ಯವಾಗುತ್ತಿದೆ. ಕಲೆಯ ವಿಮರ್ಶೆ ದೃಷ್ಟಿಯಿಂದ ಈ ಟ್ರೆಂಡ್ ಒಳ್ಳೆಯದಲ್ಲ. ಯಾವುದೇ ನಟ ನಟಿಯ ಬಗ್ಗೆ ಅಗೌರವದಿಂದ ಹೇಳುವುದಲ್ಲ. ಅವರು ಬರಬಾರದು ಎಂದೂ ಅಲ್ಲ. ಕೆರೆಮನೆ ಶಿವಾನಂದ ಹೆಗಡೆ ಹೇಳಿದಂತೆ ದಶರಥ, ರಾಮ ಯಾವುದೂ ಬೇಡ, ಕೇವಲ ಮಂಥರೆ ಮಾತ್ರ ಬೇಕಾಗಿತ್ತಾ ಎಂದು ಡಾ. ಪ್ರಭಾಕರ ಜೋಶಿ ಪ್ರತಿಕ್ರಿಯಿಸಿದ್ದಾರೆ.