ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಎಸ್ಸಿ-ಎಸ್ಟಿ ಅಭಿವೃದ್ಧಿಗೆ ಮೀಸಲಿಟ್ಟಿದ್ದ 11 ಸಾವಿರ ಕೋಟಿ ರು.ಗಳನ್ನು ಬಳಕೆ ಮಾಡಿಕೊಳ್ಳುತ್ತಿರುವುದನ್ನು ಖಂಡಿಸಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.ನಗರದ ಐಜೂರು ವೃತ್ತದಲ್ಲಿ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ವಾಹನಗಳನ್ನು ತಡೆದು ಪ್ರತಿಭಟಿಸಿದ ಕಾರ್ಯಕರ್ತರು ವಿವಿಧ ಭಿತ್ತಿಪತ್ರ ಪ್ರದರ್ಶಿಸಿ ರಾಜ್ಯಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಕ್ಕೆ ಬರಬೇಕು ಎಂಬ ಹಪಾಹಪಿಯಿಂದ ಕಾಂಗ್ರೆಸ್ ಪಕ್ಷ 5 ಉಚಿತ ಗ್ಯಾರಂಟಿಗಳನ್ನು ಘೋಷಿಸಿತ್ತು. ಈಗ ಅಧಿಕಾರಕ್ಕೆ ಬಂದ 9 ತಿಂಗಳಲ್ಲಿ ಯೇ ಸರ್ಕಾರ ದಿವಾಳಿಯಾಗಿದೆ. ಉಚಿತ ಗ್ಯಾರಂಟಿಗಳನ್ನು ಈಡೇರಿಸಲು ಎಸ್ಸಿ-ಎಸ್ಟಿ ವರ್ಗಗಳ ಅಭಿವೃದ್ಧಿಗೆ ಮೀಸಲಾದ ಹಣ ಬಳಸಿಕೊಳ್ಳಲು ಮುಂದಾಗಿರುವುದು ದಲಿತರಿಗೆ ಮಾಡಿರುವ ಮಹಾದ್ರೋಹ ಎಂದು ಕಿಡಿಕಾರಿದರು.ದಲಿತರಿಗೆ ವಿಶೇಷ ಯೋಜನೆ ರೂಪಿಸಿದ್ದೇವೆ. ಸಾವಿರಾರು ಕೋಟಿ ಅನುದಾನ ನೀಡಿದ್ದೇವೆ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಲಿತರ ಹಣವನ್ನು ಅನ್ಯ ಕಾರ್ಯಗಳಿಗೆ ಬಳಕೆ ಮಾಡಿದ್ದರು. ಎಸ್‌ಸಿಎಸ್‌ಪಿ-ಟಿಎಸ್‌ಪಿ ಯೋಜನೆಯಡ 7ಡಿ ಕಾನೂನಿನಡಿ ಅನ್ಯ ಕಾರ್ಯಗಳಿಗೆ ಹಣ ವರ್ಗಾವಣೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದರು.ಎಸ್‌ಸಿಎಸ್‌ಪಿ-ಟಿಎಸ್‌ಪಿ ಅನುದಾನದಲ್ಲಿ ಮುಖ್ಯವಾಗಿ ಶಿಕ್ಷಣಕ್ಕೆ ಆದ್ಯತೆ ಕೊಡಬೇಕು. ಉದ್ಯೋಗ, ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡಬೇಕು. ಆರೋಗ್ಯಕ್ಕೆ ಅನುದಾನ ಕೊಡಬೇಕೆಂಬುದೇ ಸಂವಿಧಾನದ ಆಶಯ. ಬಿಜೆಪಿ ಸರ್ಕಾರ ಇದ್ದಾಗ ಹಿಂದೆಯೂ ಗಂಗಾ ಕಲ್ಯಾಣ ಯೋಜನೆ, ಭೂಮಿ ಖರೀದಿ, ಮನೆಗಳ ನಿರ್ಮಾಣ, ಹಾಸ್ಟೆಲ್‌ಗಳು, ವಸತಿ ಶಾಲೆ ನಿರ್ಮಿಸಲು ಅನುದಾನ ನೀಡಿದ್ದೇವೆ. ಈ ಸರ್ಕಾರ ಹಾಸ್ಟೆಲ್ ನಿರ್ಮಾಣ, ವಸತಿ ಶಾಲೆ ನಿರ್ಮಾಣಕ್ಕೆ ಒಂದೇ ಒಂದು ರುಪಾಯಿ ನೀಡಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ಈ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ದಲಿತ ಪರವೆಂದು ಹೇಳಿಕೊಂಡು ಅಧಿಕಾರಕ್ಕೆ ಬಂದಿತು. ಈಗ ದಲಿತರ ಕಲ್ಯಾಣಕ್ಕೆ ವಿನಿಯೋಗಿಸಬೇಕಿದ್ದ 11ಸಾವಿರ ಕೋಟಿ ರುಪಾಯಿಗಳನ್ನು ಅನ್ಯ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳುತ್ತಿದೆ ಎಂದು ವಾಗ್ದಾಳಿ ನಡೆಸಿದರು.ಸಂವಿಧಾನದ ಆಶಯದಲ್ಲಿ ಕೆಲಸ ಮಾಡಬೇಕಾದ ಕಾಂಗ್ರೆಸ್ ಸರ್ಕಾರ ದಲಿತರ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಅನುದಾನವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ಈ ಕೂಡಲೇ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ವಿಧಾನಸೌಧ ಚಲೋ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ , ರಾಮನಗರ ನಗರ ಮಂಡಲ ಅಧ್ಯಕ್ಷ ಜೆ.ದರ್ಶನ್, ರಾಮನಗರ ಗ್ರಾಮಾಂತರ ಮಂಡಲ ಅಧ್ಯಕ್ಷ ಜಗದೀಶ್ ಪಿಚ್ಚನಗೆರೆ, ಮುಖಂಡರಾದ ರಾಜು, ಎಸ್.ಆರ್.ನಾಗರಾಜು, ರುದ್ರದೇವರು, ಸಿಂಗ್ರಯ್ಯ, ನಾಗೇಶ್ , ಚಂದ್ರು, ಜೆಡಿಎಸ್ ಮುಖಂಡರಾದ ಅಪ್ಪಾಜಪ್ಪ, ಜಯಕುಮಾರ್ ಮತ್ತಿತರರು ಭಾಗವಹಿಸಿದ್ದರು.