ಸಾರಾಂಶ
ಕನ್ನಡಪ್ರಭ ವಾರ್ತೆ ದೇವದುರ್ಗ (ಕನಕಗುರುಪೀಠ)
ಹಿಂದುಳಿದ ಸಮುದಾಯಗಳು ಸಮಾವೇಶಗಳನ್ನು ನಡೆಸಿ ಸಂಘಟಿತರಾಗಿ ಸಂವಿಧಾನದ ಹಕ್ಕುಗಳನ್ನು ಪಡೆಯಲು ಹೋರಾಡಬೇಕು. ಅದರಲ್ಲಿಯೂ ಕುರುಬರು ಎಲ್ಲಾ ರಂಗದಲ್ಲು ಮುಂದೆ ಬರಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.ತಾಲೂಕಿನ ತಿಂಥಣಿ ಬ್ರಿಜ್ ಬಳಿ ಇರುವ ಕಲಬುರಗಿ ವಿಭಾಗೀಯ ಕನಕಗುರುಪೀಠದಲ್ಲಿ 3 ದಿನಗಳ ಕಾಲ ನಡೆಯುತ್ತಿರುವ ಹಾಲುಮತ ಸಾಂಸ್ಕೃತಿಕ ವೈಭವ-2024 ರ ಎರಡನೇ ದಿನವಾದ ಶನಿವಾರ ಆಯೋಜಿಸಿದ್ದ ಸಾಮಾಜಿಕ-ಧಾರ್ಮಿಕ ನ್ಯಾಯ ಚಿಂತನಾ ಗೋಷ್ಠಿ,ವಿದ್ಯಾರ್ಥಿ ನಿಲಯ ಭೂಮಿ ಪೂಜೆ ಹಾಗೂ ಉದ್ಘಾಟನೆ ಮತ್ತು ಪ್ರಶಸ್ತಿ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವೈವಿಧ್ಯತೆ, ಆರ್ಥಿಕ, ಸಾಮಾಜಿಕ ಅಸಮಾನತೆ ಇರುವ ಸಮಾಜದಲ್ಲಿ ನ್ಯಾಯ ಕೊಡದಿದ್ದರೆ ಅನಾಹುತ ಎಂಬುದನ್ನು ಅಂಬೇಡ್ಕರ್ ಸೂಕ್ಷ್ಮವಾಗಿ ಎಚ್ಚರಿಸಿದ್ದಾರೆ. ದೇಶದಲ್ಲಿ ಹಿಂದುಳಿದ, ದಲಿತರ, ಶೋಷಿತರ, ಆರ್ಥಿಕವಾಗಿ ಹಿಂದುಳಿದವರ ಕಲ್ಯಾಣಕ್ಕಾಗಿ ಹಗಲು-ಇರಳು ಶ್ರಮಿಸಿ ಪ್ರಜಾಪ್ರಭುತ್ವ ದೇಶಕ್ಕೆ ಸಂವಿಧಾನ ನೀಡಿರುವ ಅಂಬೇಡ್ಕರ್ ಅವರ ತತ್ವ ಹಾಗೂ ಸಂದೇಶಗಳನ್ನು ನಾವೆಲ್ಲರೂ ಕಡ್ಡಾಯವಾಗಿ ಪಾಲಿಸಬೇಕು ಎಂದು ಹೇಳಿದರು.
ಸಾಮಾಜಿಕ, ರಾಜಕೀಯ ಚಿಂತಕರು ಲೋಹಿಯಾ ಹೇಳಿದಂತೆ ಶೋಷಣೆಗೆ ಒಳಪಟ್ಟವರು, ದೀನ-ದಲಿತರು, ದಮನಿತರು ಸಂಘಟಿತರಾಗಿ ಸಮಾವೇಶ ಮಾಡಿದರೆ ಅದು ಜಾತಿ ಸಮಾವೇಶ ಎಂದು ಕರೆಸಿಕೊಳ್ಳುವದಿಲ್ಲ. ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಪಾಲಕರು ಎಚ್ಚರ ವಹಿಸಬೇಕು. ಶಿಕ್ಷಣ ಪಡೆದರೆ ಮಾತ್ರ ಸ್ವಾಭಿಮಾನದ ಬದುಕು ರೂಪಿಸಿಕೊಳ್ಳಲು ಸಾಧ್ಯ ಎಂದರು.ಬಸವಾದಿ ಶರಣರ ಆಶಯದಂತೆ ಕಾಯಕ ಮತ್ತು ದಾಸೋಹ ಎಂಬ ತತ್ವಗಳ ಮೌಲ್ಯಗಳನ್ನು ಎಲ್ಲರೂ ಪಾಲಿಸಬೇಕಾಗಿದೆ. ಸಮಾವೇಶ, ಸಂಘಟನೆ, ಹೋರಾಟಗಳು ಸಾಮಾನ್ಯ. ಆದರೆ ಸಂವಿಧಾನದ ಹಕ್ಕುಗಳನ್ನು ಪಡೆಯುವ ಪ್ರಯತ್ನಗಳು ಆಗಬೇಕಾಗಿದೆ. ದುಳಿದವರೆಲ್ಲರೂ ವಿದ್ಯಾವಂತರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕಾಗಿದೆ ಎಂದು ಹೇಳಿದರು.
ಕೆಆರ್ ನಗರ ಕನಕಗುರುಪೀಠದ ಶ್ರೀ ಶಿವಾನಂದ ಪುರಿಸ್ವಾಮೀಜಿ, ಸಿಂಧಗಿ ಶ್ರೀ ಅಭಿನವ ಪುಂಡಲಿಂಗ ಮಹಾರಾಜರು, ಶ್ರೀ ಸಿದ್ದರಾಮಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ ಅಧ್ಯಕ್ಷತೆ ವಹಿಸಿದ್ದರು. ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು.ಸಂಸದ ಭಗವಂತ ಖುಬಾ, ಸಚಿವ ಎನ್.ಎಸ್.ಬೋಸರಾಜು, ಶಾಸಕರಾದ ಬಸನಗೌಡ ದದ್ದಲ್, ಬಸನಗೌಡ ತುರ್ವಿಹಾಳ, ರಾಘವೇಂದ್ರ ಹಿಟ್ನಾಳ, ವಿಧಾನ ಪರಿಷತ್ ಸದಸ್ಯ ಶರಣಗೌಡ ಬಯ್ಯಾಪೂರ, ಮಾಜಿ ಶಾಸಕರಾದ ಅಮರೇಗೌಡ ಬಯ್ಯಾಪೂರ, ಡಿ.ಎಸ್.ಹೂಲಗೇರಿ, ವಿಧಾನ ಪರಿಷತ್ ಸದಸ್ಯ ತಿಮ್ಮಣ್ಣಪ್ಪ ಕಮಕನೂರ ಹಾಗೂ ಇತರರು ಇದ್ದರು.ಶೋಷಿತರ ಪರ ಸದಾ ನಿಲ್ಲುತ್ತೇನೆ: ಸಿಎಂ
ಜನರಿಗೆ ಆರ್ಥಿಕ ಹಾಗೂ ಸಾಮಾಜಿಕ ಶಕ್ತಿ ತುಂಬಲು ಸರ್ಕಾರ ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸಿದೆ. ಶಕ್ತಿ ಯೋಜನೆಯಡಿ 130.28 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಗೃಹಲಕ್ಷ್ಮಿ ಯೋಜನೆಯಡಿ 1.17 ಕೋಟಿ ಕುಟುಂಬದ ಯಜಮಾನಿಗೆ ತಲಾ 2000 ರು., 200 ಯೂನಿಟ್ ಉಚಿತ ವಿದ್ಯುತ್, 5 ಕೆ.ಜಿ ಅಕ್ಕಿ ಹಾಗೂ ಯುವನಿಧಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಬೆಲೆ ಏರಿಕೆಯ ಕಾಲಮಾನದಲ್ಲಿ ಜನರಲ್ಲಿ ಕೊಂಡುಕೊಳ್ಳುವ ಶಕ್ತಿ ಹೆಚ್ಚಾಗಬೇಕು. ಆದ್ದರಿಂದ ಸಾರ್ವತ್ರಿಕ ಮೂಲ ಆದಾಯ ತತ್ವವನ್ನಾಧರಿಸಿ ಗ್ಯಾರಂಟಿ ಯೋಜನೆಗಳನ್ನು ನೀಡಲಾಗಿದೆ. ಇಂತಹ ಜನಪರ ಯೋಜನೆಗಳಿಗೆ ಟೀಕೆಗಳು ಬಂದರೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಶೋಷಿತರು, ಬಡವರು, ದೀನದಲಿತರು, ಅಲ್ಪಸಂಖ್ಯಾತರು, ದುರ್ಬಲ ವರ್ಗದವರ ಪರ ನಾನು ಸದಾ ನಿಂತಿರುತ್ತೇನೆ ಎಂದರು.ಪ್ರಶಸ್ತಿ ಪ್ರದಾನ: ರಾಷ್ಟ್ರೀಯ ಚಿಂತಕ ಡಾ.ಕಾಂಚ ಹಿಲಾಯಿ ಶೆಪರ್ಡ್ ಅವರಿಗೆ ಹಾಲುಮತ ಭಾಸ್ಕರ್, ಪತ್ರಕರ್ತೆ ವಿಜಯಕ್ಷ್ಮೀ ಶಿಬರೂರರಿಗೆ ಕನಕರತ್ನ, ಬೊಮ್ಮನ ಮತ್ತು ಬೆಳ್ಳಿಬೊಮ್ಮನ್‌ರಿಗೆ ಸಿದ್ಧಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.