ಯುವಕರಲ್ಲಿ ಪ್ರಾಚ್ಯ ಪ್ರಜ್ಞೆ ಮೂಡಬೇಕಿದೆ: ಬಿಇಓ ತಿಪ್ಪೇಸ್ವಾಮಿ

| Published : Jan 12 2024, 01:46 AM IST

ಸಾರಾಂಶ

ಪ್ರಾಚೀನ ಸ್ಮಾರಕಗಳು ದೇಶದ ಆಸ್ತಿಯಿದ್ದಂತೆ. ಅವು ಮುಂದಿನ ಪೀಳಿಗೆಗೂ ಉಳಿಸಬೇಕಾಗಿದೆ.

ಹಿರಿಯೂರು: ಪ್ರಾಚೀನ ಸ್ಮಾರಕಗಳು ದೇಶದ ಆಸ್ತಿಯಿದ್ದಂತೆ. ಅವು ಮುಂದಿನ ಪೀಳಿಗೆಗೂ ಉಳಿಸಬೇಕಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ.ತಿಪ್ಪೇಸ್ವಾಮಿ ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ನೇತೃತ್ವದಲ್ಲಿ ಆಯೋಜಿಸಿದ್ದ ಪ್ರಾಚ್ಯ ಪ್ರಜ್ಞೆ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಂದು ಪ್ರಾಚ್ಯಪ್ರಜ್ಞೆ ಕಡಿಮೆಯಾಗುತ್ತಿದೆ. ಅನೇಕ ಸ್ಮಾರಕಗಳು ನಶಿಸುತ್ತಿದ್ದು, ಅವುಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ಸಂರಕ್ಷಿಸುವುದು ಆದ್ಯ ಕರ್ತವ್ಯವಾಗಬೇಕು. ಹಿಂದೆ ಹೇಗಿತ್ತು, ಪ್ರಸ್ತುತ ಹೇಗಿದೆ, ಮುಂದೆ ಏನಾಗಬೇಕು ಎಂಬುದನ್ನು ಇತಿಹಾಸ ಅಧ್ಯಯನದಿಂದ ತಿಳಿಯಬಹುದು. 1835ರಿಂದ ಸುಮಾರು 25 ವರ್ಷಗಳ ಕಾಲ ಚಿತ್ರದುರ್ಗ ವಿಭಾಗದ ಸೂಪ್ರೆಡೆಂಟ್‌ ಆಗಿ ಸೇವೆಸಲ್ಲಿಸುತ್ತಿದ್ದ ಮೇಜರ್ ಜನರಲ್ ಆರ್.ಎಸ್.ಡಾಬ್ಸ್ ಹಿರಿಯೂರಿನಲ್ಲಿ ಹಾದು ಹೋಗಿದ್ದ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಬಹುದು ಎಂದು ಗುರುತಿಸಿದ್ದರು. ಅಲ್ಲದೇ ಬ್ರಿಟಿಷ್ ಕಾಲದಲ್ಲಿ ನಿರ್ಮಾಣವಾಗಿದ್ದ ನಗರದ ವೇದಾವತಿ ಸೇತುವೆ ರಾಜ್ಯದ ಅನೇಕ ಸೇತುವೆಗಳ ನಿರ್ಮಾಣಕ್ಕೂ ಮಾದರಿಯಾಗಿದೆ. ಇಂತಹ ಸ್ಥಳೀಯ ಇತಿಹಾಸದ ಮೇಲೆ ಬೆಳಕು ಚೆಲ್ಲುವಂತಹ ಚಾರಿತ್ರಿಕ ಘಟನೆಗಳನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದರು.

ಸಮಾಜ ವಿಜ್ಞಾನ ಸಹಶಿಕ್ಷಕ ಸಿ.ಎಸ್.ರಾಮಚಂದ್ರಪ್ಪ ಮಾತನಾಡಿ, ಐತಿಹಾಸಿಕ ಸ್ಮಾರಕಗಳು ಹಿಂದಿನ ರಾಜಕೀಯ, ಆರ್ಥಿಕ, ಸಾಮಾಜಿಕ, ಧಾರ್ಮಿಕ, ಸಾಹಿತ್ಯ, ವಿಜ್ಞಾನ, ಕಲೆ, ವಾಸ್ತುಶಿಲ್ಪ ಮುಂತಾದವುಗಳ ಮಾಹಿತಿ ತಿಳಿಸುವ ಉದ್ದೇಶದಿಂದ ನಿರ್ಮಿಸಲ್ಪಟ್ಟಿವೆ. ಆದ್ದರಿಂದ ದೇಶದ ಪ್ರಾಚೀನ ಸ್ಮಾರಕಗಳನ್ನು ರಕ್ಷಿಸಬೇಕು ಎಂದರು.

ಉಪಪ್ರಾಂಶುಪಾಲ ಸಿ.ಎಸ್.ರಾಮಚಂದ್ರಪ್ಪ, ಸಮಾಜ ವಿಜ್ಞಾನ ಕ್ಲಬ್ ಅಧ್ಯಕ್ಷ ಹನುಮಂತಪ್ಪ, ಕ್ಷೇತ್ರ ಸಮನ್ವಯಾಧಿಕಾರಿ ಇ.ತಿಪ್ಪೇರುದ್ರಪ್ಪ, ಶಿಕ್ಷಣ ಸಂಯೋಜಕ ಕೆ.ಜಿ.ಹರೀಶ್, ಬಿಆರ್‌ಪಿ ಚಿದಾನಂದ, ಇತಿಹಾಸ ಉಪನ್ಯಾಸಕ ಯೋಗಿರಾಜ್, ಈ.ಪ್ರಕಾಶ್, ಲೀಲಾವತಿ ಮುಂತಾದವರು ಹಾಜರಿದ್ದರು.