ಸಾರಾಂಶ
ಚಿಕ್ಕೋಡಿ: ಚಿಕ್ಕೋಡಿ ಪಟ್ಟಣದ ಕೆಎಲ್ಇ ಸಂಸ್ಥೆಯ ಬಸಪ್ರಭು ಕೋರೆ ಪಿಯು ಕಾಲೇಜಿನಲ್ಲಿ ಚಿಕ್ಕೋಡಿ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ವಿಜ್ಞಾನ ಪ್ರದರ್ಶನ ಮೇಳ ಯಶಸ್ವಿಯಾಗಿ ಜರುಗಿತು.
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ
ಚಿಕ್ಕೋಡಿ ಪಟ್ಟಣದ ಕೆಎಲ್ಇ ಸಂಸ್ಥೆಯ ಬಸಪ್ರಭು ಕೋರೆ ಪಿಯು ಕಾಲೇಜಿನಲ್ಲಿ ಚಿಕ್ಕೋಡಿ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ವಿಜ್ಞಾನ ಪ್ರದರ್ಶನ ಮೇಳ ಯಶಸ್ವಿಯಾಗಿ ಜರುಗಿತು.ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ 91 ಶಾಲೆಗಳ ತಂಡಗಳು ವಿಜ್ಞಾನ ಮೇಳದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಮೆರೆದರು. ಡಾ.ಜಿ ಪಿ ಯಳವತ್ತಿಮಠ (ಜೀವಶಾಸ್ತ್ರ), ಡಾ.ಆರ್ .ಕೆ ಪಾಟೀಲ (ರಸಾಯನ ಶಾಸ್ತ್ರ), ಡಾ.ಸಿದ್ಧಲಿಂಗ ಮಟ್ಟೆಪ್ಪನವರ (ಭೌತಶಾಸ್ತ್ರ) ನಿರ್ಣಾಯಕರಾಗಿ ಮಕ್ಕಳ ಪ್ರತಿಭೆ ಗುರುತಿಸಿ ಬಹುಮಾನ ಘೋಷಿಸಿದರು.
ಪ್ರಥಮ ಸ್ಥಾನವನ್ನು ಮೂಡಲಗಿಯ ಚೈತನ್ಯ ಕನ್ನಡ ಮಾಧ್ಯಮ ಪ್ರೌಢಶಾಲೆ ಹಾಗೂ ಚಿಕ್ಕೋಡಿಯ ಕೆಎಲ್‌ಇ ಶಾಲೆ, ದ್ವಿತೀಯ ಸ್ಥಾನವನ್ನು ಕೊಗನೋಳಿಯ ಕೊಗನೋಳಿ ಪ್ರೌಢಶಾಲೆ ಮತ್ತು ಮೂಡಲಗಿಯ ಚೈತನ್ಯ ಆಂಗ್ಲ ಮಾಧ್ಯಮ ಪ್ರೌಢಶಾಲೆ, ತೃತೀಯ ಬಹುಮಾನವನ್ನು ಕಾರದಗಾ ಡಿ.ಎಸ್. ನಾಡಗೆ ಪ್ರೌಢಶಾಲೆ ಹಾಗೂ ಚಾಂದಶಿರದವಾಡದ ಸರ್ಕಾರಿ ಪ್ರೌಢಶಾಲೆಗಳು ಪಡೆದುಕೊಂಡಿವೆ.ಕೆಎಲ್‌ಇಯ ಶಾರದಾದೇವಿ ಪ್ರೌಢಶಾಲೆ, ಕೆಎಸ್‌ಪಿಎಸ್ ಪ್ರೌಢಶಾಲೆ, ಎಸ್.ಡಿ ಪ್ರೌಢಶಾಲೆ, ಎಪಿಜಿ ಪ್ರೌಢ ಶಾಲೆ ಚಿಂಚಣಿ ,ಅಬ್ದುಲ್ ಕಲಾಂ ಫ್ರೌಢ ಶಾಲೆ ಅಥಣಿ ಸಮಾಧಾನಕರ ಬಹುಮಾನ ಪಡೆದುಕೊಂಡಿವೆ.
ವಿಜೇತ ತಂಡಗಳಿಗೆ ನಿವೃತ್ತ ಪ್ರಾಚಾರ್ಯ ಡಾ. ಎಂ.ಟಿ. ಕುರಣಿ ಅಧ್ಯಕ್ಷತೆಯಲ್ಲಿ ಬಹುಮಾನ ವಿತರಿಸಲಾಯಿತು. ನಿರ್ದೇಶಕ ಬಸವರಾಜ ಪಾಟೀಲ, ಎನ್.ಎಸ್.ವಂಟಮುತ್ತೆ, ಎಸ್.ಎಸ್. ಕವಲಾಪೂರೆ ಉಪಸ್ಥಿತರಿದ್ದರು.