ಉಗ್ರರ ಕೃತ್ಯಕ್ಕೆ ನಮ್ಮ ಸೇನೆಯಿಂದ ತಕ್ಕ ಪ್ರತ್ಯುತ್ತರ: ಎಚ್.ಕೆ.ಪಾಟೀಲ

| Published : May 08 2025, 12:32 AM IST

ಸಾರಾಂಶ

ದೇಶದ ಮೇಲೆ ನಡೆಯುವ ಯಾವುದೇ ಉಗ್ರರ ಕೃತ್ಯ ನಾವು ಸಹಿಸುವುದಿಲ್ಲ ಎನ್ನುವುದಕ್ಕೆ ತಕ್ಕ ಪ್ರತೀಕಾರವಾಗಿ ಭಾರತದ ಸೇನೆ 9 ಉಗ್ರರ ನೆಲೆಗಳ ಮೇಲೆ ಯಶಸ್ವಿ ದಾಳಿ ನಡೆಸಿ ಉಗ್ರರ ನೆಲೆಗಳನ್ನು ನಾಶ ಮಾಡಿದ್ದಾರೆ.

ಗದಗ: ದೇಶದ ಅಮಾಯಕರ ಮೇಲೆ ಉಗ್ರರರು ನಡೆಸಿದ ಕೃತ್ಯಕ್ಕೆ ನಮ್ಮ ಸೈನಿಕರು ತಕ್ಕ ಪ್ರತ್ಯುತ್ತರ ನೀಡಿದ್ದಾರೆ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಹೇಳಿದರು.

ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದ ಮೇಲೆ ನಡೆಯುವ ಯಾವುದೇ ಉಗ್ರರ ಕೃತ್ಯ ನಾವು ಸಹಿಸುವುದಿಲ್ಲ ಎನ್ನುವುದಕ್ಕೆ ತಕ್ಕ ಪ್ರತೀಕಾರವಾಗಿ ಭಾರತದ ಸೇನೆ 9 ಉಗ್ರರ ನೆಲೆಗಳ ಮೇಲೆ ಯಶಸ್ವಿ ದಾಳಿ ನಡೆಸಿ ಉಗ್ರರ ನೆಲೆಗಳನ್ನು ನಾಶ ಮಾಡಿದ್ದಾರೆ. ಇದು ದೇಶದ ಜನರಲ್ಲಿ ವಿಶ್ವಾಸ ಹಾಗೂ ಸಮಾಧಾನ ಮೂಡಿಸಿದೆ ಎಂದರು.

ನಮ್ಮ ದೇಶ ಶಾಂತಿಯ ಹಾದಿಯಲ್ಲಿ ಸಾಗುತ್ತಿದ್ದರೂ ಅದನ್ನು ಕೆಣಕಿದರೆ ತಕ್ಕ ಶಿಕ್ಷೆ ಕೊಡಲಾಗುತ್ತದೆ ಎಂಬ ಬಲಿಷ್ಠ ಸಂದೇಶ ಈ ದಾಳಿಯಿಂದ ಗಡಿಯಾಚೆಗಿನಿಂದ ನಡೆಸುವ ಕುಕೃತ್ಯಗಳಿಗೆ ತಕ್ಕ ಉತ್ತರವಾಗಿದೆ. ಯುದ್ಧ ಎಂದರೆ ಯಾರೋ ಗಡಿಯಲ್ಲಿ ನಡೆಸುವುದಲ್ಲ, ದೇಶದ 140 ಕೋಟಿ ಜನರು ಒಗ್ಗಟ್ಟಾಗಿ ಅದನ್ನು ಎದುರಿಸಬೇಕು. ಎಲ್ಲದಕ್ಕೂ ನಾವು ಸರ್ವ ಸನ್ನದ್ಧವಾಗಿರಬೇಕು.

ದೇಶದ ಸೈನ್ಯ ನಡೆಸುವ ಎಲ್ಲ ಕಾರ್ಯಾಚರಣೆಗೂ ಪ್ರತಿಯೊಬ್ಬ ಭಾರತೀಯ ಬೆಂಬಲವಾಗಿ ನಿಲ್ಲಬೇಕು. ನಿಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತ ಪಡಿಸಿದ ಅವರು, ಭಾರತದ ಸೈನ್ಯ ತನ್ನ ಧೈರ್ಯದಿಂದ ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ನೀಡಿದೆ. ಆದರೆ ನಾವು ಶಾಂತಿಯಿಂದ ಇರುತ್ತೇವೆ ಎಂದರೆ ಅದು ನಮ್ಮ ದೌರ್ಬಲ್ಯವಲ್ಲ ಎನ್ನುವುದನ್ನು ವೈರಿ ರಾಷ್ಟ್ರಗಳಿಗೆ ಹೇಳುವುದರೊಟ್ಟಿಗೆ ಈ ರೀತಿಯ ಭಯೋತ್ಪಾದನೆ ನಡೆಸುವವರಿಗೆ ತಕ್ಕ ಶಾಸ್ತಿಯಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಬಸಲಿಂಗಪ್ಪ, ಬಿ.ಬಿ. ಅಸೂಟಿ, ಅಶೋಕ ಮಂದಾಲಿ, ಉಮರ್ ಫಾರೂಕ್ ಹುಬ್ಬಳ್ಳಿ, ಜಿಪಂ ಮಾಜಿ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ, ಪ್ರಭು ಬುರಬುರೆ ಮುಂತಾದವರು ಹಾಜರಿದ್ದರು.

ಇಂದು ವಿಶೇಷ ಸಭೆ

ದೇಶದಲ್ಲಿ ಯುದ್ಧದ ಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ಜನತೆಯನ್ನು ಜಾಗೃತಗೊಳಿಸುವ ಉದ್ದೇಶದಿಂದ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮತ್ತು ಮಾಜಿ ಸೈನಿಕರೊಂದಿಗೆ ಗದಗ ಜಿಲ್ಲಾಡಳಿತದ ಆಡಿಟೋರಿಯಂ ಹಾಲ್ ನಲ್ಲಿ ಮೇ.8 ರಂದು ಬೆಳಗ್ಗೆ 10.30 ಕ್ಕೆ ವಿಶೇಷ ಸಭೆ ಆಯೋಜಿಸಲಾಗಿದ್ದು, ಸಭೆಯಲ್ಲಿ ಜನರು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು.