8 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ದೊಡ್ಡ ಗ್ರಾಮವಾದ ಕೋಟುಮಚಗಿಯಲ್ಲಿ ಕಳೆದ ಎರಡು ತಿಂಗಳಿಂದ ಕುಡಿಯುವ ನೀರಿನ ಪೂರೈಕೆ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.

ಗದಗ: ತಾಲೂಕಿನ ರೋಣ ವಿಧಾನಸಭಾ ವ್ಯಾಪ್ತಿಯ ಕೋಟುಮಚಗಿ ಗ್ರಾಮದಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಕೆ ಮಾಡುವಂತೆ ಆಗ್ರಹಿಸಿ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆ ಗುರುವಾರ ಗ್ರಾಮಸ್ಥರು ಗ್ರಾಪಂ ಕಚೇರಿಗೆ ಮುಳ್ಳುಕಂಟಿ ಇಟ್ಟು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ ಸಮಸ್ಯೆ ಬಗೆಹರಿಸುವವರೆಗೂ ಯಾವೊಬ್ಬ ಅಧಿಕಾರಿಗಳಿಗೂ ಕಾರ್ಯನಿರ್ವಹಿಸಲು ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.

8 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ದೊಡ್ಡ ಗ್ರಾಮವಾದ ಕೋಟುಮಚಗಿಯಲ್ಲಿ ಕಳೆದ ಎರಡು ತಿಂಗಳಿಂದ ಕುಡಿಯುವ ನೀರಿನ ಪೂರೈಕೆ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ತುಂಗಭದ್ರಾ ನದಿಯಿಂದ ಗ್ರಾಮಕ್ಕೆ ನೀರು ಪೂರೈಕೆಯಾಗುತ್ತಿದ್ದರೂ ಅದನ್ನು ಸಮರ್ಪಕವಾಗಿ ವಿತರಣೆ ಮಾಡುವಲ್ಲಿ ಗ್ರಾಪಂ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.

ಈ ಗಂಭೀರ ಸಮಸ್ಯೆ ಕಳೆದ ಎರಡು ತಿಂಗಳಿಂದ ಇದ್ದರೂ ಗ್ರಾಪಂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿಂದೆಯೂ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದೇವೆ. ಮೌಖಿಕವಾಗಿ ಪಿಡಿಒಗಳಿಗೆ ತಿಳಿಸಿದ್ದರೂ ಸಮಸ್ಯೆ ಪರಿಹಾರವಾಗಿಲ್ಲ. ಹೀಗಾಗಿ ಜಿಲ್ಲಾಧಿಕಾರಿಗಳು ಖುದ್ದಾಗಿ ಗ್ರಾಮಕ್ಕೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿಯನ್ನು ಕಂಡು ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವವರೆಗೂ ಪಂಚಾಯಿತಿ ಕಚೇರಿ ಬಾಗಿಲಿಗೆ ಹಚ್ಚಿರುವ ಮುಳ್ಳನ್ನು ಯಾವುದೇ ಕಾರಣಕ್ಕೂ ತೆಗೆಯುವುದಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮಸ್ಥರ ಈ ವರ್ತನೆಯಿಂದಾಗಿ ಗ್ರಾಪಂ ಅಧಿಕಾರಿಗಳು ಕಕ್ಕಾಬಿಕ್ಕಿಯಾದರೂ ಏನೇ ಹೇಳಿದರೂ ನೀರಿನ ಸಮಸ್ಯೆ ಬಗೆಹರಿಸುವುದಿದ್ದರೆ ಮಾತ್ರ ಮಾತನಾಡಿ. ಇಲ್ಲವಾದಲ್ಲಿ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವರೆಗೂ ನಾವ್ಯಾರೂ ಇಲ್ಲಿಂದ ಕದಲುವುದಿಲ್ಲ ಎಂದು ಅಲ್ಲಿದ್ದವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಸಂಜೆ ವೇಳೆ ಗ್ರಾಮಕ್ಕೆ ಆಗಮಿಸಿದ ತಾಪಂ ಇಒ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು, ಪೊಲೀಸರು ಜನರ ಸಮಸ್ಯೆ ಆಲಿಸಿ, ನೀರು ಪೂರೈಕೆಯಲ್ಲಿರುವ ಸಮಸ್ಯೆಯನ್ನು ಗ್ರಾಮಸ್ಥರ ಜತೆಗೂಡಿ ವೀಕ್ಷಿಸಿ, ವಾರದಲ್ಲಿ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸುವ ಭರವಸೆ ನೀಡಿದ ಹಿನ್ನೆಲೆ ಗ್ರಾಮಸ್ಥರು ಪ್ರತಿಭಟನೆಯನ್ನು ಹಿಂಪಡೆದರು.

ವಾರದಲ್ಲಿ ಇತ್ಯರ್ಥ: ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದ್ದು, ಸಣ್ಣ ಸಮಸ್ಯೆಗಳಿದ್ದದ್ದು ನಿಜ. ಅದನ್ನು ಸರಿಪಡಿಸಲಾಗಿದೆ. ನೀರು ಪೂರೈಕೆ ಪೈಪ್ಲೈನ್ ಗಳಲ್ಲಿ ಸಾಕಷ್ಟು ಲೀಕೇಜ್ ಗಳಿದ್ದು, ಅವುಗಳನ್ನು ಸರಿಪಡಿಸಲು ಹೆಚ್ಚುವರಿ ಸಿಬ್ಬಂದಿಯನ್ನು ನಿಯುಕ್ತಿ ಮಾಡಿಕೊಳ್ಳಲಾಗಿದೆ. ಒಂದು ವಾರದಲ್ಲಿ ಸಮಸ್ಯೆಯನ್ನು ಬಗೆಹರಿಸಲಾಗುವುದು. ಶಾಶ್ವತ ಪರಿಹಾರಕ್ಕಾಗಿ ವಿಶೇಷ ಯೋಜನೆಯನ್ನು ರೂಪಿಸಲಾಗಿದ್ದು, ಶಾಸಕರೊಂದಿಗೆ ಚರ್ಚಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಾಪಂ ಇಒ ಡಾ. ಜಿನಗಾ ತಿಳಿಸಿದರು.