ಗಣೇಶ ವಿಸರ್ಜನೆಯ ಮೆರವಣಿಗೆ ಅಡ್ಡಿಗೆ ಆಕ್ರೋಶ

| Published : Sep 10 2024, 01:37 AM IST

ಗಣೇಶ ವಿಸರ್ಜನೆಯ ಮೆರವಣಿಗೆ ಅಡ್ಡಿಗೆ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಪೊಲೀಸ್ ಇಲಾಖೆ ಈದ್ ಇ ಮಿಲಾದ್ ಹಬ್ಬದ ದಿನದ ನೆಪವೊಡ್ಡಿ ಗಣೇಶ ವಿಸರ್ಜನಾ ಮೆರಣಿಗೆಗೆ ಅಡ್ಡಿಪಡಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಸಾರ್ವಜನಿಕ ಗಣೇಶೋತ್ಸವ ಆಚರಣಾ ಸಮಿತಿಗಳ ಒಕ್ಕೂಟದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ರಾಮನಗರ: ಪೊಲೀಸ್ ಇಲಾಖೆ ಈದ್ ಇ ಮಿಲಾದ್ ಹಬ್ಬದ ದಿನದ ನೆಪವೊಡ್ಡಿ ಗಣೇಶ ವಿಸರ್ಜನಾ ಮೆರಣಿಗೆಗೆ ಅಡ್ಡಿಪಡಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಸಾರ್ವಜನಿಕ ಗಣೇಶೋತ್ಸವ ಆಚರಣಾ ಸಮಿತಿಗಳ ಒಕ್ಕೂಟದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಒಕ್ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರು ಪೊಲೀಸರು ಹಾಗೂ ಶಾಸಕ ಇಕ್ಬಾಲ್ ಹುಸೇನ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಸಂಘಟನೆ ಮುಖಂಡ ಅನಿಲ್ ಬಾಬು ಮಾತನಾಡಿ, ಸ್ವಾತಂತ್ರ್ಯಪೂರ್ವದಲ್ಲಿ ಬಾಲಗಂಗಾಧರ ತಿಲಕ ಅವರು ಹಿಂದೂಗಳನ್ನು ಒಗ್ಗೂಡಿಸುವ ಸಲುವಾಗಿ ಸಾರ್ವಜನಿಕ ಗಣೇಶೋತ್ಸವನ್ನು ಜಾರಿಗೆ ತಂದರು. ಈ ವೇಳೆ ಮನೆಯ ಹಬ್ಬಕ್ಕೆ ಸೀಮಿತವಾಗಿದ್ದ ಉತ್ಸವನ್ನು ಸಾರ್ವಜನಿಕಗೊಳಿಸಿ ಯುವಕರಲ್ಲಿ ದೇಶಾಭಿಮಾನ ಬೆಳೆಸಿದರು. ಆದರೆ, ರಾಮನಗರದಲ್ಲಿ ಈಗ ಈದ್ ಮಿಲಾದ್ ಹಬ್ಬದ ನೆಪದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆಗೆ ಅಡ್ಡಿಪಡಿಸುತ್ತಿರುವುದು ಸರಿಯಲ್ಲ ಎಂದು ಖಂಡಿಸಿದರು.

ರಾಮನಗರದಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ತನ್ನದೇ ಆದ ಇತಿಹಾಸ ಇದೆ. ಗಣೇಶೋತ್ಸವ ಸಮಿತಿಯು ಯುವಕರಲ್ಲಿ ಧಾರ್ಮಿಕ ಮನೋಭಾವನೆಯನ್ನು ಬೆಳೆಸುತ್ತಿದ್ದು, ಯುವಜನತೆಯನ್ನು ಬೆಸೆಯುತ್ತಿದೆ. ಆದರೆ, ಪೊಲೀಸ್ ಇಲಾಖೆಯ ನಡೆಯಿಂದ ಪ್ರಸ್ತುತ ಗಣೇಶೋತ್ಸವ ಆಚರಣೆ ಮಾಡಲು ಮಂಡಳಿ ಯೋಚಿಸಬೇಕಾದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಬ್ಬಗಳ ಹಿನ್ನೆಲೆ ಕಳೆದ ವಾರ ಪೊಲೀಸ್ ಇಲಾಖೆ ನಡೆಸಿದ ಶಾಂತಿ ಸಭೆಯಲ್ಲಿ ಗಣೇಶೋತ್ಸವ ಆಚರಣೆಗೆ ಮಾಡಲು ನಾನಾ ಷರತ್ತು ವಿಧಿಸಲಾಗಿದ್ದು, ಇದು ಉತ್ಸವ ಆಚರಣೆ ಮಾಡದಂತೆ ತಡೆಯುವಂತಿದೆ. ಇದರ ಜತೆಗೆ, ಆಚರಣೆ ಕುರಿತು ಬಾಂಡ್ ಪೇಪರ್‌ನಲ್ಲಿ ಬರೆದುಕೊಡಬೇಕು. ಸಮಾಜಘಾತಕರು ಹಾಗೂ ರೌಡಿಗಳ ಬಳಿ ಪೊಲೀಸ್ ಇಲಾಖೆ ಬಾಂಡ್ ಪೇಪರ್ ಬರೆಸಿಕೊಳ್ಳದೆ ಸಾರ್ವಜನಿಕ ಗಣೇಶೋತ್ಸವ ಆಚರಿಸುವ ಮಂಡಳಿಗಳಿಂದ ಬಾಂಡ್‌ ಪೇಪರ್ ಬರೆಸಿಕೊಳ್ಳುತ್ತಿದೆ, ಇದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಸಮಾಜದ ಸಾಮರಸ್ಯ ಸಾರುವ ಗಣೇಶೋತ್ಸವವನ್ನು ಬಾಂಡ್ ಪೇಪರ್ ನೀಡಿ ಆಚರಣೆ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಸಾಮರಸ್ಯಕ್ಕೆ ಹೆಸರಾಗಿರುವ ರಾಮನಗರ ಜಿಲ್ಲೆಯು ಈದ್ ಮಿಲಾದ್ ಹಬ್ಬ ಇದೆ ಎಂಬ ಕಾರಣಕ್ಕೆ ಮೂರು ದಿನಗಳ ಗಣೇಶೋತ್ಸವ ಮೆರವಣಿಗೆಯನ್ನು ತಡೆಯಲಾಗುತ್ತಿದೆ. ಎಲ್ಲಾ ಧರ್ಮದವರು ಸಹೋದರ ರೀತಿಯಲ್ಲಿ ಬದುಕು ಸಾಗಿಸುತ್ತಿದ್ದಾರೆ. ಈ ನಡುವೆ ಜಿಲ್ಲಾಡಳಿತ ಧರ್ಮಗಳ ವಿರುದ್ಧ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.

ಯಾವುದೇ ಆಧಾರ ಇಲ್ಲದೆ ಪೊಲೀಸ್ ಇಲಾಖೆ ಸ್ವ ಇಚ್ಛೆಯಿಂದ ಈದ್ ಮಿಲಾದ್ ಹಬ್ಬದ ಮೂರು ದಿನ ಸಾರ್ವಜನಿಕ ಗಣೇಶೋತ್ಸವ ಮೆರವಣಿಗೆ ನಿಷೇಧಿಸಿದೆ. ಆ ಮೂಲಕ ಜಿಲ್ಲಾಡಳಿತ ತುಘಲಕ್ ಆಡಳಿತ ನಡೆಸುತ್ತಿದ್ದು, ಈ ನಿರ್ಧಾರವನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.

ಈ ವೇಳೆ ಒಕ್ಕೂಟದ ಪದಾಧಿಕಾರಿಗಳಾದ ಚಂದ್ರಶೇಖರ್ ರೆಡ್ಡಿ, ಚನ್ನಪ್ಪ, ಕಾಳಯ್ಯ, ಗೂಳಿಕುಮಾರ್ ಇತರರಿದ್ದರು.

ಪೊಟೋ೯ಸಿಪಿಟಿ೧:

ನಗರದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕಚೇರಿ ಮುಂಭಾಗ ಸಾರ್ವಜನಿಕ ಗಣೇಶೋತ್ಸವ ಆಚರಣಾ ಸಮಿತಿಗಳ ಒಕ್ಕೂಟದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.