ಸಾರಾಂಶ
ನಗರ ಸಂಚಾರ ಪೊಲೀಸರು ತಲೆಗೆ ಕಡ್ಡಾಯವಾಗಿ ಪೊಲೀಸ್ ಟೋಪಿ ಧರಿಸಿಯೇ ಕರ್ತವ್ಯ ನಿರ್ವಹಿಸಬೇಕು ಎಂದು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ಸೂಚನೆ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರ ಸಂಚಾರ ಪೊಲೀಸರು ತಲೆಗೆ ಕಡ್ಡಾಯವಾಗಿ ಪೊಲೀಸ್ ಟೋಪಿ ಧರಿಸಿಯೇ ಕರ್ತವ್ಯ ನಿರ್ವಹಿಸಬೇಕು ಎಂಬುದು ಸೇರಿದಂತೆ ಹಲವು ಸೂಚನೆಗಳನ್ನು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ನೀಡಿದ್ದಾರೆ.ಇತ್ತೀಚೆಗೆ ನಡೆದ ನಗರ ಸಂಚಾರ ಪೊಲೀಸರ ಸಭೆಯಲ್ಲಿ ಜಂಟಿ ಪೊಲೀಸ್ ಆಯುಕ್ತರು ಸಂಚಾರ ಪೊಲೀಸ್ ಠಾಣೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಕರ್ತವ್ಯ ನಿರ್ವಹಣೆ ಸಮಯದಲ್ಲಿ ಶಿಸ್ತು ಪಾಲಿಸುವ ನಿಟ್ಟಿನಲ್ಲಿ ಕೆಲವು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ.
ಪ್ರತಿ ದಿನ ಸಂಜೆ 5 ಗಂಟೆ ಬಳಿಕ ಎಲ್ಲ ಪಿಎಸ್‌ಐ, ಎಎಸ್‌ಐ ಹಾಗೂ ಸಿಬ್ಬಂದಿ ರಿಫ್ಲೆಕ್ಟಿವ್ ಜಾಕೆಟ್ ಧರಿಸಿ ಕರ್ತವ್ಯ ನಿರ್ವಹಿಸಬೇಕು. ಸಂಚಾರ ಠಾಣೆ ಪಿಎಸ್‌ಐಗಳು ಪ್ರತಿ ದಿನ 8 ಗಂಟೆಗೆ ಟ್ಯಾಬ್ ಆನ್ ಮಾಡಿಕೊಂಡು ಕರ್ತವ್ಯ ನಿರ್ವಹಿಸಬೇಕು. ಪಿಎಸ್ಐ ಹಾಗೂ ಎಎಸ್‌ಐಗಳು ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸುವಾಗ ದ್ವಿಚಕ್ರ ವಾಹನದ ಮೇಲೆ ಕುಳಿತು ಪ್ರಕರಣ ದಾಖಲಿಸುವಂತಿಲ್ಲ. ಕ್ಯಾಪ್ ಧರಿಸಿಕೊಂಡು ಪ್ರಕರಣ ದಾಖಲಿಸಬೇಕು.ಎಲ್ಲಾ ಸಿಬ್ಬಂದಿ ಕರ್ತವ್ಯ ನಿರ್ವಹಣೆ ವೇಳೆ ದ್ವಿಚಕ್ರ ವಾಹನದ ಮೇಲೆ ಅಥವಾ ಕಾಲುಮೇಲೆ ಕಾಲು ಹಾಕಿಕೊಂಡು ಕುಳಿತುಕೊಳ್ಳಬಾರದು. ಒಂದು ವೇಳೆ ಕರ್ತವ್ಯದ ಸಮಯದಲ್ಲಿ ದ್ವಿಚಕ್ರ ವಾಹನದ ಮೇಲೆ ಕುಳಿತುಕೊಂಡಿರುವುದು ಮೇಲಾಧಿಕಾರಿಗಳ ಗಮನಕ್ಕೆ ಬಂದಲ್ಲಿ ಶಿಸ್ತು ಕ್ರಮ ಜರುಗಿಸುವುದಾಗಿ ಖಡಕ್ ಸೂಚನೆ ನೀಡಿದ್ದಾರೆ.