ಹೊರಗಿನವ್ರು ಬರ್ತಾರೆ, ಇಲ್ಲೇ ಉಂಡು, ಸೆರೆ ಕುಡಿದು ಮಲಗ್ತಾರೆ

| Published : Jan 20 2025, 01:30 AM IST

ಹೊರಗಿನವ್ರು ಬರ್ತಾರೆ, ಇಲ್ಲೇ ಉಂಡು, ಸೆರೆ ಕುಡಿದು ಮಲಗ್ತಾರೆ
Share this Article
  • FB
  • TW
  • Linkdin
  • Email

ಸಾರಾಂಶ

ಹೊರಗಿನ ಕೆಲವರು ಹಾಸ್ಟೆಲ್‌ ಒಳಗೆ ಬಂದು ಊಟ ಮಾಡ್ತಾರೆ. ರಾತ್ರಿ ಹಾಸ್ಟೆಲ್‌ನಲ್ಲೇ ಮಲಗ್ತಾರೆ.

ಬಳ್ಳಾರಿ: ಹೊರಗಿನ ಕೆಲವರು ಹಾಸ್ಟೆಲ್‌ ಒಳಗೆ ಬಂದು ಊಟ ಮಾಡ್ತಾರೆ. ರಾತ್ರಿ ಹಾಸ್ಟೆಲ್‌ನಲ್ಲೇ ಮಲಗ್ತಾರೆ. ಮದ್ಯದ ಬಾಟಲ್ ಹಿಡ್ಕೊಂಡು ಬರ್ತಾರೆ. ಹಾಸ್ಟೆಲ್ ಆವರಣದಲ್ಲೇ ಕುಡಿಯುತ್ತಾರೆ. ಬಳಿಕ ಬಾಟಲ್ ಒಡೆದು ಹಾಕುತ್ತಾರೆ. ನಾವೇನು ಪ್ರಶ್ನೆ ಮಾಡುವಂತಿಲ್ಲ. ಪ್ರಶ್ನಿಸಿದರೆ ನಮ್ಮನ್ನೇ ಹೊಡೆಯುತ್ತಾರೆ ಸರ್‌...

ನಗರದ ಮಯೂರ ಹೋಟೆಲ್ ಹಿಂಭಾಗದ ಸಮಾಜ ಕಲ್ಯಾಣ ಇಲಾಖೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸರ್ಕಾರಿ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಬಾಲಕರ ವಸತಿನಿಲಯಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ವೇಳೆ ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ ಮುಂದೆ ವಿದ್ಯಾರ್ಥಿಗಳು ಹೀಗೆ ಅಳಲು ತೋಡಿಕೊಂಡರು.

ನಿತ್ಯವೂ ಹೊರಗಿನವರು ಬಂದು ಇಲ್ಲಿಯೇ ಉಂಡು, ಇಲ್ಲಿಯೇ ಮಲಗುತ್ತಾರೆ. ರಾತ್ರಿ ವೇಳೆ ಮದ್ಯ ಕುಡಿದು ಗಲಾಟೆ ಮಾಡುತ್ತಾರೆ. ನಮಗೆ ಓದಿಕೊಳ್ಳಲಾಗುತ್ತಿಲ್ಲ. ಊಟದಲ್ಲಿ ಹುಳು ಬರುತ್ತವೆ. ಕೇಳಿದರೂ ಸ್ಪಂದಿಸುವುದಿಲ್ಲ. ಆಹಾರ ಗುಣಮಟ್ಟ ಇರುವುದಿಲ್ಲ. ಮಾಂಸ ಸರಿಯಾಗಿ ಬೇಯಿಸುವುದಿಲ್ಲ. ಪ್ರತಿ ಬುಧವಾರ ಹೊರಗಡೆ ಹೋಗಿ ಊಟ ಮಾಡ್ತೀವಿ. ಚಳಿಗಾಲದಲ್ಲಿ ತಣ್ಣೀರು ಸ್ನಾನ ಮಾಡಬೇಕು. ಬಟ್ಟೆ ಒಣಗಿ ಹಾಕಲು ವ್ಯವಸ್ಥೆಯಿಲ್ಲ. ನಮ್ಮ ಕೋಣೆಗಳಲ್ಲಿಯೇ ಬಟ್ಟೆ ಒಣಗಾಗಿಕೊಳ್ಳುತ್ತೇವೆ. ಶುದ್ಧವಾದ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಡೈನಿಂಗ್ ಹಾಲ್ ಇಲ್ಲ. ರೂಂಗೆ ತೆಗೆದುಕೊಂಡು ಹೋಗಿ ಊಟ ಮಾಡುತ್ತೇವೆ. ಚಾಟ್ ಪ್ರಕಾರ ಊಟ ಕೊಡೋದಿಲ್ಲ. ವಾರ್ಡನ್ ವಾರಕ್ಕೊಮ್ಮೆ ಬರುತ್ತಾರೆ. ಊಟದ ಗುಣಮಟ್ಟ ಕುರಿತು ನಾವು ಏನೂ ಪ್ರಶ್ನೆ ಮಾಡುವಂತಿಲ್ಲ. ಮಾಡಿದರೆ ನಮಗೆ ತೊಂದರೆ ಕೊಡುತ್ತಾರೆ ಎಂದು ನಿತ್ಯದ ಸಮಸ್ಯೆಗಳನ್ನು ಉಪ ಲೋಕಾಯುಕ್ತರ ಮುಂದೆ ಹೇಳಿಕೊಂಡ ವಿದ್ಯಾರ್ಥಿಗಳು, ನೀವು ಬರ್ತಾ ಇದ್ದೀರಿ ಅಂತ ಕಳೆದ ಎರಡು ದಿನದಿಂದ ಒಳ್ಳೇ ಊಟ ಕೊಡುತ್ತಿದ್ದಾರೆ ಎಂದು ವಿವರಿಸಿದರು.

ಅನ್‌ಫಿಟ್ ಈತ, ಮೊದಲು ಸಸ್ಪೆಂಡ್ ಮಾಡ್ರಿ:

ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ಗಳಲ್ಲಿನ ಅವ್ಯವಸ್ಥೆ ಕುರಿತು ವಿದ್ಯಾರ್ಥಿಗಳ ಅಳಲು ಆಲಿಸಿದ ನ್ಯಾ.ಬಿ.ವೀರಪ್ಪ ವಾರ್ಡನ್ ನನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ಸೇವೆಯಿಂದ ಅಮಾನತು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಹೊರಗಿನವರು ನಿತ್ಯ ಬಂದು ಹಾಸ್ಟೆಲ್‌ನಲ್ಲಿಯೇ ಉಂಡು, ಮಲಗುತ್ತಾರೆ. ಮಕ್ಕಳನ್ನು ಹೊಡೆಯುತ್ತಾರೆ ಎಂದಾದರೆ ನೀವೇನು ಮಾಡುತ್ತಿದ್ದೀರಿ? ಬಡವರ ಮಕ್ಕಳು ಎಂಬ ಕಾರಣಕ್ಕೆ ಹೀಗೆ ಮಾಡುತ್ತಿದ್ದೀರಾ? ಅವರು ಬಡವರಲ್ಲ, ನೀವು ಹೀನ ಮನಸ್ಥಿತಿಯವರು. ಮಕ್ಕಳಿಗೆ ಕನಿಷ್ಠ ಮೂಲ ಸೌಕರ್ಯ ಕೊಡಲು ನಿಮ್ಮಂದಾಗುತ್ತಿಲ್ಲವೇ? ಜಿಲ್ಲಾ ಮಟ್ಟದ ಅಧಿಕಾರಿಗಳು ಏನು ಮಾಡುತ್ತೀರಿ? ಹಾಸ್ಟೆಲ್‌ಗಳಿಗೆ ಬಂದು ಪರಿಶೀಲನೆ ಮಾಡುತ್ತಿಲ್ಲವೇಕೆ? ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಈ ಮಕ್ಕಳು ದೇಶದ ಬುನಾದಿಯಾಗಬೇಕು. ನೀವು ಮಕ್ಕಳ ಬುಡವನ್ನೇ ಕಿತ್ತು ಹಾಕಿದ್ದೀರಿ. ಬಟ್ಟೆಗಳನ್ನು ಕೋಣೆಯಲ್ಲಿಯೇ ಒಣಗಿ ಹಾಕಿಕೊಳ್ಳಬೇಕು ಎಂದು ಮಕ್ಕಳು ಹೇಳುತ್ತಿದ್ದಾರೆ. ಹಾಸ್ಟೆಲ್ ಮೇಲೆ ಕಂಬಿ ನಿರ್ಮಿಸಿ ವ್ಯವಸ್ಥೆ ಕಲ್ಪಿಸಲು ನಿಮ್ಮಂದಾಗುತ್ತಿಲ್ಲವೇ ? ಎಂದು ತರಾಟೆಗೆ ತೆಗೆದುಕೊಂಡರು.

ಇದೇ ಸಮುದಾಯದಲ್ಲಿ ಹುಟ್ಟಿ ಇದೇ ಸಮುದಾಯದ ಮಕ್ಕಳಿಗೆ ಅನ್ಯಾಯ ಮಾಡುತ್ತಿದ್ದೀರಿ. ನಿಮಗೆ ಒಂಚೂರು ಮಾನವೀಯತೆ ಇಲ್ಲವಾ? ನೀವು ಇದೇ ರೀತಿ ಮನೆಯಲ್ಲಿ ಮಲಗುತ್ತೀರಾ? ನಿತ್ಯ ಸೊಳ್ಳೆ ಕಡಿಸಿಕೊಂಡೇ ನಿದ್ರೆ ಮಾಡುತ್ತೀರಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಹಾಸ್ಟೆಲ್ ವಾರ್ಡನ್ ಶೇಕಣ್ಣ ಎಂಬಾತನನ್ನು ಸೇವೆಯಿಂದ ಅಮಾನತು ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ವೇಳೆ ಲೋಕಾಯುಕ್ತದ ಅಪರ ನಿಬಂಧಕ ಕೆ.ಎಂ.ರಾಜಶೇಖರ್, ಸಹಾಯಕ ನಿಬಂಧಕ ಶುಭವೀರ್ ಜೈನ್.ಬಿ., ಉಪ ನಿಬಂಧಕ ಅರವಿಂದ ಎನ್.ವಿ., ಬಳ್ಳಾರಿ ಲೋಕಾಯುಕ್ತ ಎಸ್ಪಿ ಸಿದ್ದರಾಜು, ಡಿವೈಎಸ್ಪಿ ವಸಂತಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ಇದ್ದರು.