ಸಾರಾಂಶ
-ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು ಮಾಹಿತಿ । ಕೆಕೆಆರ್‌ಡಿಬಿ 10.60 ಕೋಟಿ ₹ ವೆಚ್ಚದ ಹತ್ತು ಕಾಮಗಾರಿಗೆ ಶಂಕುಸ್ಥಾಪನೆ, ಉದ್ಘಾಟನೆ
-------ಕನ್ನಡಪ್ರಭ ವಾರ್ತೆ ಯಾದಗಿರಿ
ಮುಖ್ಯಮಂತ್ರಿ ಅಮೃತ ನಗರೋತ್ಥಾನ (ಮುನಿಸಿಪಾಲಿಟಿ) ಯೋಜನೆ ಹಂತ -4ರಡಿ ಸುಮಾರು 5 ಕೋಟಿ ರು.ಗಳ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನಗರಸಭೆ ಕಟ್ಟಡದ ಉದ್ಘಾಟನೆ ಸೋಮವಾರ ಬೆಳಿಗ್ಗೆ 11ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು ಹೇಳಿದರು.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ನಗರಸಭೆ ಕಚೇರಿ ಆವರಣದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪೌರಾಡಳಿತ ಸಚಿವ ರಹೀಂ ಖಾನ್ ನೂತನ ಕಟ್ಟಡ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮ ತಮ್ಮ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಸಚಿವ ರಹೀಂಖಾನ್ ಅವರು ಸುಮಾರು 10.60 ಕೋಟಿ ರು.ಗಳು ವೆಚ್ಚದ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲಿದ್ದಾರೆ.
2024- 25 ನೇ ಸಾಲಿನ ಕೆಕೆಆರ್ ಡಿಬಿ ಮೈಕ್ರೋ, ಸಿಎಂಡಿಕ್ಯೂ ಯೋಜನೆಯಡಿ ಮಂಜೂರಾದ ಒಟ್ಟು ಎಂಟು ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಒಂದು ಕಾಮಗಾರಿಯ ಉದ್ಘಾಟನೆ ಮತ್ತು ಒಂದು ಕೋಟಿ ರು.ಗಳ ವೆಚ್ಚದ ನಗರ ವ್ಯಾಪ್ತಿಯ ಮುಖ್ಯ ರಸ್ತೆಗಳ ಡಿವೈಡರ್ ನಡುವೆ ಇರುವ ವಿದ್ಯುತ್ ದೀಪಗಳ ಕಂಬಗಳಿಗೆ ಎಲ್ಇಡಿ, ಸ್ಟ್ರೀಟ್ ಲೈಟ್ ಗಳ ಅಳವಡಿಸಿರುವ ಕಾಮಗಾರಿಯನ್ನು ಸಚಿವರು ಉದ್ಘಾಟಿಸಲಿದ್ದಾರೆ ಹಾಗೂ ಉಳಿದಂತೆಯೇ ನಗರದ ವಿವಿಧಡೆ 9.60 ಕೋಟಿ ರು.ಗಳ ವೆಚ್ಚದ ರಸ್ತೆ, ಚರಂಡಿ, ಸ್ಟೋನ್ ಡಿವೈಡರ ಅಳವಡಿಸುವ ಹಾಗೂ ಇತ್ಯಾದಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಲಿದ್ದಾರೆಂದು ಶಾಸಕರು ತಿಳಿಸಿದರು.ಅದರಂತೆ, ಯಾದಗಿರಿ ನಗರ ವ್ಯಾಪ್ತಿಯ ಮುಖ್ಯ ರಸ್ತೆಗಳ ನಡುವೆ ಬರುವ ಸುಮಾರು 300 ವಿದ್ಯುತ್ ಕಂಬಗಳಿಗೆ ಒಂದು ಕೋಟಿ ರು.ಗಳ ವೆಚ್ಚದಲ್ಲಿ ಅಳವಡಿಸಿರುವ ಎಲ್ ಇಡಿ ದೀಪಗಳು ಹಾಗೂ ಸ್ಟ್ರೀಟ್ ಲೈಟ್ ಕಾಮಗಾರಿಯನ್ನು ಸಚಿವ ರಹೀಂ ಖಾನ್ ಅವರು ಉದ್ಘಾಟನೆ ಮಾಡಲಿದ್ದಾರೆ ಎಂದ ಶಾಸಕರು, ಇದೇ ತರಹ ನಗರದ ಎಲ್ಲಡೆ ಇರುವ ಕಂಬಗಳಿಗೆ ಇನ್ನೂ ಎರಡು ಕೋಟಿ ರು.ಗಳ ಅನುದಾನದಲ್ಲಿ ಈ ವ್ಯವಸ್ಥೆ ಮಾಡಲಾಗುವುದೆಂದು ಅವರು ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ, ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ, ಸಂಸದ ಜಿ. ಕುಮಾರನಾಯಕ, ಎಂಎಲ್ ಸಿಗಳಾದ ಬಿ.ಜಿ. ಪಾಟೀಲ್, ಡಾ. ಚಂದ್ರಶೇಖರ ಪಾಟೀಲ್, ಶಶೀಲ್ ನಮೋಶಿ, ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ, ಸೇರಿದಂತೆಯೇ ಜಿಲ್ಲಾಮಟ್ಟದ ಅಧಿಕಾರಿಗಳು, ನಗರಸಭೆ ಸದಸ್ಯರು, ಪೌರಾಯುಕ್ತರು ಇತರರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.ಸುಮಾರು ಎಂಟು ಸಾವಿರ ಚದುರ ಅಡಿ ಜಾಗದಲ್ಲಿ ನಿರ್ಮಿಸಿರುವ ಈ ಕಟ್ಟಡದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ಪೌರಾಯುಕ್ತರ ಕೋಣೆಗಳು ಹಾಗೂ ಸಿಬ್ಬಂದಿ ಕೋಣೆಗಳು, ಸುಸಜ್ಜಿತ ಸಭಾಂಗಣ ಮತ್ತು ಲಿಫ್ಟ್ ವ್ಯವಸ್ಥೆ ಇದೆ. ನೆಲಮಹಡಿಯಲ್ಲಿ ಪಾರ್ಕಿಂಗಗಾಗಿ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು. ಜಿಲ್ಲೆಯಲ್ಲಿ ಅತ್ಯಂತ ಸುಸಜ್ಜಿತ ಮತ್ತು ಹೈಟೆಕ್ ಕಟ್ಟಡ ಇದಾಗಿದೆ ಎಂದು ಶಾಸಕರು ಹೇಳಿದರು.
------19ವೈಡಿಆರ್3: ಯಾದಗಿರಿ ನಗರದಲ್ಲಿ 5 ಕೋಟಿ ರು.ಗಳ ವೆಚ್ಚದ ನಗರಸಭೆ ನೂತನ ಕಟ್ಟಡ.
-----19ವೈಡಿಆರ್1: ಚೆನ್ನಾರೆಡ್ಡಿ ಪಾಟೀಲ್ ತುನ್ನೂರು, ಶಾಸಕರು, ಯಾದಗಿರಿ.
-----19ವೈಡಿಆರ್2: ಯಾದಗಿರಿ ನಗರ ರಸ್ತೆಯಲ್ಲಿ ವಿದ್ಯುತ್ ಕಂಬಗಳಿಗೆ ಅಳವಡಿಸಿರುವ ಎಲ್ ಇಡಿ ದೀಪಗಳು.