ಪಿ.ಜೆ. ಬಡಾವಣೆ ವಕ್ಫ್ ದಾಖಲೆ ರದ್ದುಪಡಿಸಿ

| Published : Nov 18 2024, 12:00 AM IST

ಸಾರಾಂಶ

ವಕ್ಫ್ ಮಂಡಳಿಯು ಪಿ.ಜೆ. ಬಡಾವಣೆಯ 4.13 ಎಕರೆ ಜಾಗವನ್ನು ವಕ್ಫ್ ಆಸ್ತಿಯೆಂದು ಪಹಣಿ ತಿದ್ದುಪಡಿ ಮಾಡಿ, ವ್ಯವಸ್ಥಿತವಾಗಿ ಕಬಳಿಸುವ ಹುನ್ನಾರ ನಡೆಸಿದೆ. ಕಾಂಗ್ರೆಸ್ಸಿಗೆ ಜನರ ಬಗ್ಗೆ ನಿಜವಾದ ಕಳಕಳಿ ಇದ್ದರೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಪಹಣಿ, ಮುಟೇಷನ್‌ ಇತರೆ ಸರ್ಕಾರಿ ದಾಖಲೆಗಳಲ್ಲಿ ವಕ್ಫ್ ಮಂಡಳಿ ಎಂದು ನಮೂದಾಗಿರೋದನ್ನು ರದ್ದುಪಡಿಸಿ, ನಿರ್ಣಯ ಕೈಗೊಳ್ಳಲಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಒತ್ತಾಯಿಸಿದ್ದಾರೆ.

- ಸಚಿವ ಸಂಪುಟದಲ್ಲಿ ಪಹಣಿ, ಮುಟೇಷನ್ ಇತರೆ ದಾಖಲೆಯಲ್ಲಿ ವಕ್ಫ್ ಆಸ್ತಿ ಎಂಬುದು ರದ್ದುಪಡಿಸಲಿ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ವಕ್ಫ್ ಮಂಡಳಿಯು ಪಿ.ಜೆ. ಬಡಾವಣೆಯ 4.13 ಎಕರೆ ಜಾಗವನ್ನು ವಕ್ಫ್ ಆಸ್ತಿಯೆಂದು ಪಹಣಿ ತಿದ್ದುಪಡಿ ಮಾಡಿ, ವ್ಯವಸ್ಥಿತವಾಗಿ ಕಬಳಿಸುವ ಹುನ್ನಾರ ನಡೆಸಿದೆ. ಕಾಂಗ್ರೆಸ್ಸಿಗೆ ಜನರ ಬಗ್ಗೆ ನಿಜವಾದ ಕಳಕಳಿ ಇದ್ದರೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಪಹಣಿ, ಮುಟೇಷನ್‌ ಇತರೆ ಸರ್ಕಾರಿ ದಾಖಲೆಗಳಲ್ಲಿ ವಕ್ಫ್ ಮಂಡಳಿ ಎಂದು ನಮೂದಾಗಿರೋದನ್ನು ರದ್ದುಪಡಿಸಿ, ನಿರ್ಣಯ ಕೈಗೊಳ್ಳಲಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಒತ್ತಾಯಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿ.ಜೆ. ಬಡಾವಣೆಯ 4.13 ಎಕರೆ ಜಾಗವನ್ನು ವಕ್ಫ್ ಮಂಡಳಿಗೆ ವ್ಯವಸ್ಥಿತವಾಗಿ ಕಬಳಿಸುವ ಹುನ್ನಾರವಾಗಿದೆ. ಪಿ.ಜೆ. ಬಡಾವಣೆ ವಕ್ಫ್ ವಿವಾದಕ್ಕೆ ಬಿಜೆಪಿ ನೇರ ಹೊಣೆ ಎಂದು ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಆರೋಪ ಮಾಡಿದ್ದಾರೆ. ಅವರು ದಾಖಲೆಗಳ ಸಮೇತ ಸಾಬೀತುಪಡಿಸಬೇಕು. ಇಲ್ಲವಾದರೆ, ಮಹಾಜನತೆ ಮುಂದೆ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದರು.

ಶ್ರೀರಾಮಂ ಮಂದಿರದಲ್ಲಿ ಶನಿವಾರ ತಹಸೀಲ್ದಾರ್‌ ಡಾ.ಅಶ್ವಥ್, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ನೇತೃತ್ವದ ಸಭೆ ನಡೆಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಜನರ ಬಗ್ಗೆ ಕಾಳಜಿ ಇದ್ದಿದ್ದರೆ ಸ್ವತಃ ಖುದ್ದಾಗಿ ಸಭೆಯಲ್ಲಿ ಪಾಲ್ಗೊಂಡು, ಜನರ ಪರ ಧ್ವನಿ ಎತ್ತಬೇಕಿತ್ತು. ಆದರೆ, ಕಾಂಗ್ರೆಸ್ ಜನರ ಕಣ್ಣೊರೆಸುವ ತಂತ್ರ ಮಾಡಿದೆಯಷ್ಟೇ ಎಂದು ಟೀಕಿಸಿದರು.

ಈಗಾಗಲೇ 1987ರಲ್ಲೇ ಜಾಗವನ್ನು ಅಂದಿನ ಕಂದಾಯ ಅಧಿಕಾರಿಗಳು ಖಬರಸ್ತಾನ ಎಂದು ನಮೂದಿಸಿದ್ದಾರೆಂದು ದಾಖಲೆಯಲ್ಲೇ ಉಲ್ಲೇಖವಿದೆ. ತಹಸೀಲ್ದಾರರು ಸಹ ಸಭೆಯಲ್ಲಿ ಜನರ ಕಣ್ಣೊರೆಸುವಂತಹ ಹೇಳಿಕೆ ನೀಡಿದ್ದಾರೆ. ಸ್ಥಳೀಯ ನಿವಾಸಿಗಳು ಅದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಘಟನೆಯೂ ನಡೆದಿದೆ. ವಾಸ್ತವ ಹೀಗಿದ್ದರೂ ಬಿಜೆಪಿ ಮೇಲೆ ದಿನೇಶ ಶೆಟ್ಟಿ ಮಾಡಿರುವ ಆರೋಪ ನಾವು ಸಹಿಸುವುದಿಲ್ಲ ಎಂದರು.

ಪಹಣಿಯಲ್ಲಿ ವಕ್ಫ್ ಹೆಸರನ್ನು ರದ್ದುಪಡಿಸಲು ಕಾಂಗ್ರೆಸ್ ಸರ್ಕಾರ ಮುಂದಾಗಬೇಕು. ಇಲ್ಲವಾದರೆ, ಬಿಜೆಪಿಯಿಂದ "ರಕ್ತ ಕೊಟ್ಟೇವು, ಭೂಮಿ ಬಿಡೆವು " ಘೋಷಣೆಯೊಂದಿಗೆ ರಾಜ್ಯಾದ್ಯಂತ ಹೋರಾಟ ನಡೆಸಬೇಕಾದೀತು ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ವಕೀಲರ ಪ್ರಕೋಷ್ಟದ ರವಿಕುಮಾರ ಕರ್ಜಗಿ, ಕಲ್ಲಪ್ಪ, ಪಿ.ಸಿ.ಶ್ರೀನಿವಾಸ ಭಟ್, ಬಿ.ಎಂ.ಸತೀಶ ಕೊಳೇನಹಳ್ಳಿ, ಕೊಟ್ರೇಶ ಗೌಡ, ಎಚ್.ಪಿ.ವಿಶ್ವಾಸ್ ಇತರರು ಇದ್ದರು.

- - -

ಬಾಕ್ಸ್‌ * ಕಾನೂನು ಹೋರಾಟ ಪರಿಸ್ಥಿತಿ ದಾವಣಗರೆ: ವಕ್ಫ್‌ ಮಂಡಳಿಯು 1995ರ ವಕ್ಫ್ ಕಾಯ್ದೆ ಪ್ರಕಾರ ಯಾವುದೇ ಜಾಗವನ್ನು ತನ್ನದೆಂದು ಪರಭಾರೆ ಮಾಡಿಕೊಳ್ಳಲು ಹಕ್ಕು ನೀಡಿದ್ದು, ಹಾಗೊಂದು ವೇಳೆ ವಕ್ಫ್ ಮಂಡಳಿ ಯಾವುದೇ ಜಾಗವನ್ನು. ಯಾವುದೇ ದಾಖಲೆ ನೀಡದಿದ್ದರೂ ತನ್ನದಾಗಿಸಿಕೊಳ್ಳುವ ಅವಕಾಶ ಹೊಂದಿದೆ ಎಂದು ಬಿಜೆಪಿ ಕಾನೂನು ಪ್ರಕೋಷ್ಟದ ರವಿಕುಮಾರ ಕರ್ಜಗಿ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಒಂದು ವೇಳೆ ಜನಸಾಮಾನ್ಯರು, ರೈತರು, ಮಠಗಳು, ದೇವಾಲಯಗಳಿಗೆ ಸೇರಿದ್ದ ಜಾಗವಾಗಿದ್ದರೂ ಎಲ್ಲ ದಾಖಲೆಗಳ ಸಮೇತ ಕಾನೂನಾತ್ಮಕವಾಗಿ ತಮ್ಮ ಆಸ್ತಿ ಉಳಿಸಿಕೊಳ್ಳಲು ಹೋರಾಟ ಮಾಡಬೇಕಾಗುತ್ತದೆ. ಅದೂ ವಕ್ಫ್ ನ್ಯಾಯ ಮಂಡಳಿಯಲ್ಲೇ ಎಂದರು.

ಕಾಂಗ್ರೆಸ್ ಅವಧಿಯಲ್ಲೇ ನಡೆದಿರುವ ತಿದ್ದುಪಡಿ ಇದಾಗಿದೆ. ದಾವಣಗೆರೆ ಪಿ.ಜೆ. ಬಡಾವಣೆಯ ರಿ.ಸ. ನಂ.53 ಸಹ 1962ರಲ್ಲಿ ಸರ್ಕಾರಿ ಸ್ವಾಧೀನಕ್ಕೆ ಒಳಪಟ್ಟಿದೆ ಎಂಬುದು ಸ್ಪಷ್ಟವಾಗಿದೆ. ಈ ಜಾಗ ಬೀರದೇವರ ಪೂಜಾರಿ ಸಿದ್ದಪ್ಪನವರಿಗೆ ಸೇರಿದ ಜಾಗ ಎಂದು ದಾಖಲೆಯಲ್ಲಿ ತಿಳಿಸಲಾಗಿದೆ. ಆದರೆ, ಇದ್ದಕ್ಕಿದ್ದಂತೆ 1987ರಲ್ಲಿ ವಕ್ಫ್‌ ಖಬರಸ್ಥಾನಕ್ಕೆ ಸೇರಿದ ಜಾಗವೆಂದು ಅಂದಿನ ಕಂದಾಯಾಧಿಕಾರಿಗಳು ದಾಖಲೆ ಸೃಷ್ಟಿಸಿದ್ದಾರೆ. 2014-2015ರ ಪಹಣಿಯಲ್ಲಿ ಜಾಗ ವಕ್ಫ್ ಸಂಸ್ಥೆಗೆ ಸೇರಿದೆಯೆಂಬುದು ಸ್ಪಷ್ಟವಾಗಿ ದಾಖಲಿಸಲಾಗಿದೆ ಎಂದು ಹೇಳಿದರು.

- - -

ಟಾಪ್‌ ಕೋಟ್‌ ಕಾಂಗ್ರೆಸ್ ಪಕ್ಷಕ್ಕೆ ಜಮೀರ್ ಅಹಮದ್ ಕ್ಯಾನ್ಸರ್ ಇದ್ದಂತೆ. ಜಮೀರ್‌ಗೆ ತಿದ್ದದಿದ್ದರೆ ಕಾಂಗ್ರೆಸ್ ಪಕ್ಷವೇ ಸರ್ವನಾಶವಾಗಲಿದೆ. ಒಂದುವೇಳೆ ಕಾಂಗ್ರೆಸ್ಸಿನ ವರಿಷ್ಠರಿಗೆ ರಾಷ್ಟ್ರೀಯ ಭಾವನೆಗಳಿದ್ದರೆ ಮೊದಲು ಜಮೀರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ರಾಜ್ಯದ ಜನತೆ ಕಾಂಗ್ರೆಸ್ಸಿಗೆ ತಕ್ಕ ಪಾಠ ಕಲಿಸುವ ದಿನಗಳೂ ದೂರವಿಲ್ಲ

- ಎನ್.ರಾಜಶೇಖರ ನಾಗಪ್ಪ, ಜಿಲ್ಲಾಧ್ಯಕ್ಷ, ಬಿಜೆಪಿ

- - - -17ಕೆಡಿವಿಜಿ2:

ದಾವಣಗೆರೆಯಲ್ಲಿ ಭಾನುವಾರ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಕಾನೂನು ಪ್ರಕೋಷ್ಟದ ರವಿಕುಮಾರ ಕರ್ಜಗಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.