ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ: ಸಿದ್ದರಾಮೇಶ್ವರ ಶ್ರೀ

| Published : Nov 18 2024, 12:00 AM IST

ಸಾರಾಂಶ

Give high priority to education: Siddarameshwar Shri

-ರಾಜ್ಯೋತ್ಸವ ಹಾಗೂ ಸುವರ್ಣ ಮಹೋತ್ಸವ ಪ್ರಶಸ್ತಿ ಪುರಸ್ಕೃತರ ಅಭಿನಂದನಾ ಸಮಾರಂಭ

----

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಮುಂದಿನ ಯುಗ ಜ್ಞಾನ ವಿಜ್ಞಾನಗಳ ಯುಗವಾಗುತ್ತದೆ. ಆದ್ದರಿಂದ, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಜಗದ್ಗುರು ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.

ನಗರದ ಹೊರವಲಯದ ಭೋವಿ ಗುರುಪೀಠದಲ್ಲಿ ಆಯೋಜಿಸಿದ್ದ ರಾಜ್ಯೋತ್ಸವ ಹಾಗೂ ಸುವರ್ಣ ಮಹೋತ್ಸವ ಪ್ರಶಸ್ತಿ ಪುರಸ್ಕೃತರ ಅಭಿನಂದನಾ ಸಮಾರಂಭದ ಸಾನಿಧ್ಯವಹಿಸಿ ಅವರು ಮಾತನಾಡಿದರು.

ಸರ್ಕಾರ ನಿಮ್ಮ ಸೇವೆಯನ್ನು ಪರಿಗಣಿಸಿ ರಾಜ್ಯೋತ್ಸವ ಹಾಗೂ ಸುವರ್ಣ ಮಹೋತ್ಸವ ಪ್ರಶಸ್ತಿ ನೀಡಿದೆ. ಇದು ಕರ್ನಾಟಕದ ಎರಡನೇ ಬಹುದೊಡ್ಡ ಪ್ರಶಸ್ತಿಯಾಗಿದೆ ಎಂದರು.

ಪ್ರಶಸ್ತಿಗೆ ಆಯ್ಕೆಯಾದವರು ಯಾರು ಕೂಡ ಅರ್ಜಿ ಹಾಕಿಲ್ಲ. ಇವರ ಸೇವೆಯನ್ನು ಪರಗಣಿಸಿ ಸರ್ಕಾರ ಪ್ರಶಸ್ತಿ ನೀಡಿದೆ. ಇದು ಸಂತೋಷಕರ ವಿಚಾರ. ಶಿಕ್ಷಣದ ಜೊತೆ ಸಂಸ್ಕಾರ ಬೆರೆತರೆ ವ್ಯಕ್ತಿಗಳು ಉನ್ನತ ಸ್ಥಾನಗಳಿಗೆ ತಲುಪುತ್ತಾರೆ. ಧರ್ಮದಲ್ಲಿರುವ ಕಂದಾಚಾರ, ಮೂಡನಂಬಿಕೆ ಹೊರಗಿಟ್ಟು ನಾವುಗಳು ವೈಜ್ಞಾನಿಕ ವೈಚಾರಿಕತೆ ಹಾಗೂ ಆಚರಣೆ, ಧರ್ಮಗಳಲ್ಲಿ ವಿಜ್ಞಾನ ಅಳವಡಿಸಿಕೊಳ್ಳಬೇಕು. ಹಾಗಾದಲ್ಲಿ ಮಾತ್ರ ಭವಿಷ್ಯ ಸುಗಮ. ಜೊತೆಗೆ ಸಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ.

ಇಂತಹ ವ್ಯಕ್ತಿಗಳಿಗೆ ಪ್ರಶಸ್ತಿ ನೀಡಿರುವುದರಿಂದ ಪ್ರಶಸ್ತಿಯ ಮೌಲ್ಯ ಹೆಚ್ಚಾಗುತ್ತದೆ. ಈ ಪ್ರಶಸ್ತಿ ಅರ್ಹರಿಗೆ ಸಿಕ್ಕಿರುವುದರಿಂದ ಮುಂದಿನ ಪೀಳಿಗೆಯ ಯುವಕರಿಗೆ ಸ್ಫೂರ್ತಿ ತರಲಿದೆ ಎಂದು ಹೇಳಿದರು.

ಶಾಸಕ ಡಾ.ಎಂ. ಚಂದ್ರಪ್ಪ ಮಾತನಾಡಿ, ಅರ್ಹ ವ್ಯಕ್ತಿಗಳನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ಸಂತೋಷಕರ ವಿಚಾರ. ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ನಾವು ಪ್ರಶಸ್ತಿ ಪಡೆದವರಿಗೆ ಪ್ರೋತ್ಸಾಹ ನೀಡಬೇಕು, ಮನುಷ್ಯ ಹುಟ್ಟಿನಿಂದ ಸಾರ್ಥಕತೆಯ ಜೀವನ ಕಟ್ಟಿಕೊಂಡು ಸಮಾಜದ ಋಣ ತೀರಿಸಬೇಕು ಎಂದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹುಲಿಕಲ್ ನಟರಾಜ್ ಮಾತನಾಡಿ, ಸಾಮಾಜಿಕ ಜಾಲತಾಣದಿಂದ ಮಕ್ಕಳು ತಪ್ಪು ದಾರಿಗೆ ಹೋಗುತ್ತಿದ್ದಾರೆ. ಮಕ್ಕಳ ಕೈಗೆ ಮೊಬೈಲ್ ಕೊಡಬೇಡಿ. ದೇಶದಲ್ಲಿ ವಿದ್ಯಾವಂತರ ಕೊರತೆ ಇಲ್ಲ, ಪ್ರಜ್ಞಾವಂತರ ಕೊರತೆ ಇದೆ. ಧರ್ಮ ಎನ್ನುವುದು ಮಾರುಕಟ್ಟೆಯ ಸರಕು ಆಗಬಾರದು.

ವಿದ್ಯಾಭ್ಯಾಸ ಮಾಡಿ ಉದ್ಯೋಗ ಪಡೆಯಲು ವರ್ಷಗಳ ಕಾಲ ಓದಬೇಕು, ಕೆಲವರು ಬಟ್ಟೆ ಬದಲಾಯಿಸಿದರೆ ಸಾಕು ಜೀವನ ಕಟ್ಟಿಕೊಳ್ಳುತ್ತಿದ್ದಾರೆ, ಇಂತಹ ಸಮಾಜಘಾತಕರ ವಿರುದ್ಧ ಹೋರಾಡಬೇಕಿದೆ ಎಂದರು.

ಎಲ್ಲಾ ಧರ್ಮದವರನ್ನು ಪ್ರೀತಿಸಬೇಕು, ಆಗ ಮಾತ್ರ ಸಮಾಜದಲ್ಲಿ ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ, ಬುದ್ಧ, ಅಂಬೇಡ್ಕರ್. ಬಸವಣ್ಣ ಅವರ ಸಿದ್ಧಾಂತಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ರಾಜ್ಯೋತ್ಸವ ಪ್ರಶಸ್ತಿ ಪಡೆದ ಡಾ. ಟಿ ದಿಲೀಪ್ ಕುಮಾರ್, ಡಾ. ವಿ. ಕಮಲಮ್ಮ, ಹುಲಿಕಲ್ ನಟರಾಜ್, ಟಿ.ಸೋಮೇಶ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಹಾವೇರಿ ಭೋವಿ ಜನಾಂಗದ ಜಿಲ್ಲಾಧ್ಯಕ್ಷ ರವಿ ಪೂಜಾರಿ, ಚಿತ್ರದುರ್ಗ ಭೋವಿ ಜನಾಂಗದ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ, ದಾವಣಗೆರೆ ಮಾಜಿ ರೇಷ್ಮೆ ಮಂಡಳಿ ಅಧ್ಯಕ್ಷ ಬಸವರಾಜ್, ಭೀಮಪ್ಪ, ಮೋಹನ್, ತಿಮ್ಮಣ್ಣ, ಭೋವಿ ಗುರುಪೀಠದ ಸಿಇಒ ಗೌನಹಳ್ಳಿ ಗೋವಿಂದಪ್ಪ ಸೇರಿದಂತೆ ಭೋವಿ ಸಮಾಜದ ಮುಖಂಡರು ಹಾಜರಿದ್ದರು.

----

ಫೋಟೋ: ನಗರದ ಹೊರವಲಯದ ಭೋವಿ ಗುರುಪೀಠದಲ್ಲಿ ರಾಜ್ಯೋತ್ಸವ ಹಾಗೂ ಸುವರ್ಣ ಮಹೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿತ್ತು.