ಕುಂದಗೋಳ:
ಪಟ್ಟಣದ ಐತಿಹಾಸಿಕ ಪಂಚಗ್ರಹ ಹಿರೇಮಠದ ಆಸ್ತಿ ಮಾರಾಟಕ್ಕೆ ಸಂಬಂಧಿಸಿದಂತೆ ಉದ್ಭವಿಸಿರುವ ವಿವಾದಗಳಿಗೆ ಮೇ 8ರಂದು ತೆರೆ ಬೀಳಲಿದೆ. ಅಂದು ಪಂಚಪೀಠಾಧೀಶ್ವರರ ಸಮ್ಮುಖದಲ್ಲಿ ನಿರ್ಣಾಯಕ ಸಮಾಲೋಚನಾ ಸಭೆ ಜರುಗಲಿದೆ ಎಂದು ಶ್ರೀಮಠದ ಭಕ್ತರು ಹಾಗೂ ಮುಖಂಡರು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕ ಮಲ್ಲಿಕಾರ್ಜುನ ಅಕ್ಕಿ ಹಾಗೂ ಮುಖಂಡ ಶಿವಾನಂದ ಬೆಂತೂರ, ಶ್ರೀಮಠಕ್ಕೆ ದಾನವಾಗಿ ಬಂದಿದ್ದ ನೂರಾರು ಎಕರೆ ಜಮೀನನ್ನು ಈಗಿನ ಶ್ರೀಗಳಾದ ಶಿಥಿಕಂಠೇಶ್ವರ ಶ್ರೀಗಳು ಏಕಪಕ್ಷೀಯವಾಗಿ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದರು.
ಪ್ರಸ್ತುತ ಉಳಿದಿರುವ 53 ಎಕರೆ ಜಮೀನನ್ನು ಕೂಡ ಭೂಪರಿವರ್ತನೆ ಮಾಡಿಸಿ ಡೆವಲಪರ್ಸ್‌ಗಳಿಗೆ ಮಾರಾಟ ಮಾಡಲು ಮುಂದಾಗಿರುವ ವಿಷಯ ತಿಳಿದು ಕಾಶೀ ಪೀಠದ ಶ್ರೀ ಹಾಗೂ ರಂಭಾಪುರಿ ಶ್ರೀಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಠದ ಆಸ್ತಿ ಪರಭಾರೆ ಆಗುವುದನ್ನು ತಡೆಯಲು ಮತ್ತು ಭಕ್ತರ ಹಿತ ಕಾಪಾಡಲು ಎರಡೂ ಪೀಠದ ಶ್ರೀಗಳು ಮೇ 8ರಂದು ಬೆಳಗ್ಗೆ 10 ಗಂಟೆಗೆ ಶ್ರೀಮಠಕ್ಕೆ ಆಗಮಿಸಿ ಸಮಾಲೋಚನೆ ನಡೆಸಲಿದ್ದಾರೆ ಎಂದರು.ಮುಖಂಡರಾದ ಎ.ಬಿ. ಉಪ್ಪಿನ ಹಾಗೂ ಸೋಮರಾವ್ ದೇಸಾಯಿ ಮಾತನಾಡಿ, ಶ್ರೀಮಠವು ಶಿಷ್ಯ ಪರಂಪರೆಯ ಇತಿಹಾಸ ಹೊಂದಿದ್ದು, ಇಲ್ಲಿನ ಆಸ್ತಿಯು ಭಕ್ತರು ನೀಡಿದ ಅತ್ಯಮೂಲ್ಯ ಕೊಡುಗೆಯಾಗಿದೆ. ಮಠದ ಧಾರ್ಮಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಿ ವ್ಯವಸ್ಥೆಗಳನ್ನು ಸರಿಪಡಿಸಿಕೊಳ್ಳುವಂತೆ ಸೂಚಿಸಿದರೂ ಶ್ರೀಗಳು ಸ್ಪಂದಿಸುತ್ತಿಲ್ಲ. ಹೀಗಾಗಿ ಪಂಚಪೀಠದ ಶ್ರೀಗಳು ನೇರವಾಗಿ ಆಗಮಿಸಿ ಮುಂದಿನ ನಡೆಯ ಬಗ್ಗೆ ಭಕ್ತರೊಂದಿಗೆ ಚರ್ಚಿಸಲಿದ್ದಾರೆ ಎಂದು ಹೇಳಿದರು.
ಮೇ 8ರಂದು ಬೆಳಗ್ಗೆ 10 ಗಂಟೆಗೆ ಜರುಗುವ ಈ ಮಹತ್ವದ ಸಮಾಲೋಚನಾ ಸಭೆಗೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮಠದ ಆಸ್ತಿ ರಕ್ಷಣೆಗೆ ಕೈಜೋಡಿಸಬೇಕೆಂದು ಮುಖಂಡರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ನಾಗರಾಜ ದೇಶಪಾಂಡೆ, ರಮೇಶ ಕೊಪ್ಪದ, ಶಂಕರಗೌಡ ದೊಡಮನಿ, ಸುರೇಶ ಸವಣೂರ, ಫಕ್ಕೀರೇಶ ನಾವಳ್ಳಿ ಮಠ, ಅಜ್ಜು ಬಂಡಿವಾಡ, ಸಿದ್ದಪ್ಪ ಇಂಗಳಳ್ಳಿ, ಬಸನಗೌಡ ಉಮಚಗಿ ಸೇರಿದಂತೆ ಹಲವರಿದ್ದರು.