ನವಲಗುಂದ:
ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲೂಕಿನಲ್ಲಿ ಕುಡಿಯುವ ನೀರು ಹಾಗೂ ಬಿತ್ತನೆಗೆ ಬೀಜ, ರಸಗೊಬ್ಬರದ ಸಮಸ್ಯೆಯಾಗದಂತೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕೆಂದು ಶಾಸಕ ಎನ್.ಎಚ್. ಕೋನರಡ್ಡಿ ಸೂಚಿಸಿದರು.ವಾಲ್ಮೀಕಿ ಭವನದಲ್ಲಿ ಜರುಗಿದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ (ಕೆಡಿಪಿ) ಮಾತನಾಡಿದ ಅವರು, ರೈತರಿಗೆ ಬಿತ್ತನೆ ಅವಧಿಯಲ್ಲಿ ಯಾವುದೇ ಕಾರಣಕ್ಕೂ ಬಿತ್ತನೆ ಬೀಜಗಳ ಕೊರತೆ ಉಂಟಾಗದಂತೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು. ರಸಗೊಬ್ಬರದ ದಾಸ್ತಾನು, ಬೇಡಿಕೆ ಹಾಗೂ ಹಂಚಿಕೆ ಕುರಿತು ಗಮನ ಹರಿಸಿ ಸಕಾಲಕ್ಕೆ ರೈತರಿಗೆ ವಿತರಿಸಬೇಕೆಂದು ಕಟ್ಟುನಿಟ್ಟಾಗಿ ಸೂಚಿಸಿದರು.
ಕ್ಷೇತ್ರದಲ್ಲಿ 300 ಕಿಲೋ ಮೀಟರ್‌ಗಿಂತ ಹೆಚ್ಚು ಚಕ್ಕಡಿ ರಸ್ತೆ ಅಗಲೀಕರಣ ಮಾಡಿ ಅಭಿವೃದ್ಧಿ ಹಾಗೂ ಲೋಕೋಪಯೋಗಿ ಇಲಾಖೆಯಿಂದ ₹160 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಪಡಿಸಲಾಗಿದೆ ಎಂದರು.ಡಾಂಬರ್ ಬೆಲೆ ಮಾರುಕಟ್ಟೆಯಲ್ಲಿ ಹೆಚ್ಚಳವಾದ ಪರಿಣಾಮ ಗುತ್ತಿಗೆದಾರರು ಕಾಮಗಾರಿ ಬಾಕಿ ಉಳಿಸಿದ್ದು ಶೀಘ್ರದಲ್ಲಿಯೇ ಮುಗಿಸಲಿದ್ದಾರೆ ಎಂದ ಅವರು, ಬೆಣ್ಣಿಹಳ್ಳ ಪ್ರವಾಹ ನಿಯಂತ್ರಣ ಕಾಮಗಾರಿ ಪ್ರಾರಂಭವಾಗಿದೆ ಎಂದು ಹೇಳಿದರು. ಪ್ರಗತಿಯಲ್ಲಿರುವ ಕಾಮಗಾರಿಗಳಿಗೆ ಅಧಿಕಾರಿಗಳು ವೇಗ ನೀಡುವ ಜತೆಗೆ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳುವಂತೆ ನೋಡಿಕೊಳ್ಳಬೇಕೆಂದು ತಾಕೀತು ಮಾಡಿದರು.
ಇದೇ ವೇಳೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದ ವಿದ್ಯಾರ್ಥಿಗಳು ಹಾಗೂ ನಿವೃತ್ತರಾದ ಡಿಡಿಪಿಐ ಎಸ್.ಎಸ್. ಕೆಳದಿಮಠ ಅವರನ್ನು ಸನ್ಮಾನಿಸಲಾಯಿತು.
ತಹಸೀಲ್ದಾರ್‌ಗಳಾದ ಸುಧೀರ ಸಾಹುಕಾರ, ಮಂಜುನಾಥ ದಾಸಪ್ಪನವರ, ಜೆ.ಬಿ. ಮಜ್ಜಗಿ, ತಾಪಂ ಇಒ ರವೀಂದ್ರಗೌಡ ಪಾಟೀಲ, ಆರ್.ಎಂ. ಹೊಸಮನಿ, ಸಿಪಿಐ ರವಿ ಕಪ್ಪತ್ತನವರ, ಗ್ಯಾರಂಟಿ ಸಮಿತಿ ಅಧ್ಯಕ್ಷ ವರ್ಧಮಾನಗೌಡ ಹಿರೇಗೌಡ್ರ, ಶಿವಾನಂದ ಭೂಮಣ್ಣವರ, ಡಿಡಿಪಿಐ ಉಮೇಶ ಬೊಮ್ಮಕ್ಕನವರ, ಸೋಮನಗೌಡ ಪಾಟೀಲ, ರಾಘವೇಂದ್ರ ಜಾಲಗಾರ, ಮನೋಹರ ದ್ಯಾಬೇರಿ, ಗಾಯತ್ರಿ ಪಾಟೀಲ, ಡಾ. ಎನ್.ಬಿ. ಕಾಲವಾಡ, ಎಸ್.ಎಸ್. ಲಂಗೂಟಿ, ಎಸ್.ಪಿ. ಪೂಜಾರ ಸೇರಿದಂತೆ ಹಲವರಿದ್ದರು.