ವೀರಶೈವ-ಲಿಂಗಾಯತ ಸಮುದಾಯದ ಬಹುಸಂಖ್ಯಾತ ಪಂಚಮಸಾಲಿ ಸಮಾಜದ ಮಹತ್ವಾಕಾಂಕ್ಷೆಯ ಹರಿಹರ ಪಂಚಮಸಾಲಿ ಪೀಠದಲ್ಲಿ ಈಚೆಗೆ ನಡೆಯುತ್ತಿರುವ ಘಟನೆ, ಬೆಳವಣಿಗೆಗಳು ಸಹಜವಾಗಿಯೇ ಸಮಾಜ ಬಾಂಧವರಲ್ಲಿ ತೀವ್ರ ಆತಂಕವನ್ನು ತಂದೊಡ್ಡಿವೆ.
ಕನ್ನಡಪ್ರಭ ವಾರ್ತೆ ದಾವಣಗೆರೆ
ವೀರಶೈವ-ಲಿಂಗಾಯತ ಸಮುದಾಯದ ಬಹುಸಂಖ್ಯಾತ ಪಂಚಮಸಾಲಿ ಸಮಾಜದ ಮಹತ್ವಾಕಾಂಕ್ಷೆಯ ಹರಿಹರ ಪಂಚಮಸಾಲಿ ಪೀಠದಲ್ಲಿ ಈಚೆಗೆ ನಡೆಯುತ್ತಿರುವ ಘಟನೆ, ಬೆಳವಣಿಗೆಗಳು ಸಹಜವಾಗಿಯೇ ಸಮಾಜ ಬಾಂಧವರಲ್ಲಿ ತೀವ್ರ ಆತಂಕವನ್ನು ತಂದೊಡ್ಡಿವೆ.ರಾಜ್ಯದಲ್ಲಿ ಪಂಚಮಸಾಲಿ ಸಮಾಜದ ಹಿರಿಯರು, ಮುಖಂಡರು 1994ರಿಂದ ನಡೆಸಿದ ಪ್ರಯತ್ನದ ಫಲವಾಗಿ 2008ರಲ್ಲಿ ಹರಿಹರ ಪಂಚಮಸಾಲಿ ಪೀಠ ಸ್ಥಾಪನೆಯಾಗಿತ್ತು. 2016ರಲ್ಲಿ ಪೀಠಕ್ಕೆ ಬೆಂಗಳೂರಿನ ಶ್ವಾಸ ಪೀಠದ ಶ್ರೀ ವಚನಾನಂದ ಸ್ವಾಮೀಜಿ ನೂತನ ಪೀಠಾಧಿಪತಿಯಾಗಿ ಆಯ್ಕೆ ಆಗುವುದರೊಂದಿಗೆ ಸಮಾಜದಲ್ಲಿ ಹೊಸ ಉತ್ಸಾಹವನ್ನೂ ಮೂಡಿಸಿತ್ತು. ಆದರೆ, ಶ್ರೀಮಠದ ಇತ್ತೀಚಿನ ಕೆಲವು ಬೆಳವಣಿಗೆಗಳು ಸಮಾಜ ಬಾಂಧವರಲ್ಲಿ ಗೊಂದಲಕ್ಕೆ ಕಾರಣವಾಗುತ್ತಿವೆ.
ಶ್ರೀಮಠದ ಟ್ರಸ್ಟಿಗಳು ಮಾ.10ರಂದು ಮಠದಲ್ಲಿ ನಡೆಸಿದ ಸಭೆಯಲ್ಲಿ ಆದ ಮಾತುಕತೆ, ಗಲಾಟೆಯ ವೀಡಿಯೋ ಇದೀಗ ವೈರಲ್ ಆಗಿದೆ. ಸಭೆಯಲ್ಲಿ ಲೆಕ್ಕಪತ್ರ ವಿಚಾರಕ್ಕೆ ಸಂಬಂಧಿಸಿದಂತೆ ತೀವ್ರ ಮಾತಿನ ಚಕಮಕಿ ನಡೆದಿತ್ತು. ಸರ್ಕಾರರಿಂದ ಶ್ರೀ ಪೀಠಕ್ಕೆ ಬಂದಿದ್ದ ₹11 ಕೋಟಿ ಅನುದಾನ ದುರುಪಯೋಗ ಆಗಿದೆ ಎಂಬುದಾಗಿ ಟ್ರಸ್ಟಿಗಳ ಸಭೆಯಲ್ಲಿ ಕೆಲವರು ಮಾಡಿದ್ದ ಆರೋಪದಿಂದ ಗಲಾಟೆಯಾಗಿತ್ತು.ಇದೀಗ ಪೀಠದ ಟ್ರಸ್ಟಿಗಳಲ್ಲೇ ಎರಡು ಬಣಗಳು ಸೃಷ್ಟಿಯಾಗಿದ್ದು, ಮಠದ ಆಡಳಿತಾಧಿಕಾರಿ ಡಾ.ಎಚ್.ಪಿ.ರಾಜಕುಮಾರ, ಸೋಮಣ್ಣ ಬೇವಿನಮರದ ಹಾಗೂ ಧರ್ಮದರ್ಶಿ ಬಾವಿ ಬೆಟ್ಟಪ್ಪ, ಬಿ.ಸಿ.ಉಮಾಪತಿ ಗುಂಪುಗಳ ಮಧ್ಯೆ ಆರೋಪ, ಪ್ರತ್ಯಾರೋಪ ನಡೆದಿತ್ತು. ಮಠದಲ್ಲಿ ಹಣಕಾಸು ಅವ್ಯವಹಾರ ಆದ ಬಗ್ಗೆ ಡಾ.ರಾಜಕುಮಾರ, ಸೋಮಣ್ಣ ಬೇವಿನಮರದ ಗುಂಪು ಆರೋಪಿಸಿದರೆ, ಶ್ರೀ ವಚನಾನಂದ ಸ್ವಾಮೀಜಿ ಶ್ವಾಸಗುರು ಪೀಠ ತೊರೆದು, ಪಂಚಮಸಾಲಿ ಮಠದಲ್ಲೇ ಮುಂದುವರಿಯಲಿ ಎಂಬುದು ಬಾವಿ ಬೆಟ್ಟಪ್ಪ, ಬಿ.ಸಿ.ಉಮಾಪತಿ ಮತ್ತು ತಂಡದ ಪಟ್ಟಾಗಿದೆ.
ಆಡಳಿತಾಧಿಕಾರಿ ಡಾ.ರಾಜಕುಮಾರ, ಸೋಮಣ್ಣ ಬೇವಿನಮರದ, ಮಠದಲ್ಲೇ ಸುದ್ದಿಗೋಷ್ಠಿ ಮಾಡಿ, ಕೆಲವರ ವಿರುದ್ಧ ಹಣಕಾಸು ಆರೋಪ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ದಾವಣಗೆರೆಯಲ್ಲಿ ಪಂಚಮಸಾಲಿ ಸಮಾಜದ ಸಭೆಯಲ್ಲಿ ಬಾವಿ ಬೆಟ್ಟಪ್ಪ, ಬಸವರಾಜ ದಿಂಡೂರು, ಬಿ.ಸಿ.ಉಮಾಪತಿ, ಜ್ಯೋತಿ ಪ್ರಕಾಶ, ಚಂದ್ರಶೇಖರ ಪೂಜಾರ ತಮ್ಮ ವಿರುದ್ಧದ ಆರೋಪಗಳಿಗೆ ಮಠದ ಟ್ರಸ್ಟ್‌ನ ನಡವಳಿ, ಲೆಕ್ಕಪತ್ರಗಳ ಸಮೇತ ತಿರುಗೇಟು ನೀಡಿದರು. ಅಲ್ಲದೇ, ಮಠದಲ್ಲಿ ನಯಾಪೈಸೆ ದುರ್ಬಳಕೆಯಾಗಿಲ್ಲ. ಯಾವುದೇ ಭೂಮಿಯೂ ದುರ್ಬಳಕೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ.ಸಿ.ಉಮಾಪತಿ, ಇನ್ನೂ ಕಾಲ ಮಿಂಚಿಲ್ಲ. ಮಠದ ಧಾರ್ಮಿಕ ಆಚರಣೆ, ಅನುಷ್ಠಾನ, ಪರಂಪರೆ ಉಳಿಸಿಕೊಂಡು, ಸಮಾಜವನ್ನು ಮುನ್ನಡೆಸುವ ಆಯ್ಕೆಯನ್ನು ವಚನಾನಂದ ಸ್ವಾಮೀಜಿಯವರಿಗೆ ಬಿಟ್ಟಿದ್ದೇವೆ. ಶ್ರೀಮಠವು ಮಠವಾಗಿರಬೇಕೇ ಹೊರತು, ಗೆಸ್ಟ್ ಹೌಸ್ ರೀತಿ ಆಗಬಾರದು. ಪಂಚಮಸಾಲಿ ಆಚಾರ, ವಿಚಾರ, ಸಂಪ್ರದಾಯಗಳನ್ನು ಮುನ್ನಡೆಸಿಕೊಂಡು ಹೋಗುವ ಕೆಲಸ ಶ್ರೀಗಳಿಂದ ಆಗಬೇಕು. ಯಾವುದನ್ನು ಮಾಡಬೇಕೆಂಬ ಆಯ್ಕೆ ಸ್ವಾಮೀಜಿಗಳಿಂದ ಆಗಲಿ ಎಂದು ಸ್ಪಷ್ಟವಾಗಿ ತಿಳಿಸಿದ್ದರು.
ಸ್ವಾಮೀಜಿಗಳನ್ನು ಪೀಠದಿಂದ ತೆಗೆಯುವುದಲ್ಲ, ತಿದ್ದುವ ಕೆಲಸವಾಗಬೇಕಾಗಿದೆ. ಇತರ ಮಠಗಳಂತೆ ನಮ್ಮ ಮಠ, ಸಮಾಜವನ್ನೂ ಶ್ರೀಗಳು ಮುನ್ನಡೆಸಿಕೊಂಡು ಹೋಗಬೇಕು. ಆದರೆ, ಮಾ.24ರಂದು ಶ್ರೀಗಳನ್ನು ಪೀಠದಿಂದ ತೆಗೆಯಲು ಸಭೆ ಕರೆದಿದ್ದಾರೆಂದು ಸುಳ್ಳು ಸುದ್ದಿ ಹರಡಿ, ಗದ್ದಲವನ್ನು ಎಬ್ಬಿಸುವುದು ಸರಿಯಲ್ಲ. ಮಠದಲ್ಲಿ ನಯಾಪೈಸೆ ವ್ಯತ್ಯಾಸವಾಗಿಲ್ಲ. ಪೀಠ ನಮ್ಮಂತಹ ಲಕ್ಷಾಂತರ ಜನರ ಕನಸು. ಸಮಾಜದ ಋಣ ತೀರಿಸಲು ನಾವೆಲ್ಲರೂ ಕೆಲಸ ಮಾಡುತ್ತಿದ್ದೇವೆ. ನಮ್ಮದು ರಾಜಕೀಯವಾಗಲಿ, ಸ್ವಾರ್ಥದ ಕೆಲಸವಾಗಲಿ ಅಲ್ಲ. ಈ ಸಮಾಜದಲ್ಲಿ ಹುಟ್ಟಿದ್ದೇವೆ. ಈ ಸಮಾಜದ ಋಣ ತೀರಿಸುವ ಕೆಲಸ ಎಂಬುದಾಗಿ ಬಾವಿ ಬೆಟ್ಟಪ್ಪ, ಬಸವರಾಜ ದಿಂಡೂರು, ಜ್ಯೋತಿ ಪ್ರಕಾಶ, ಪಿ.ಡಿ.ಶಿರೂರು, ಕಳಸನಗೌಡ, ನಾಗಣ್ಣ ಚಿತ್ರದುರ್ಗ, ಹಾವೇರಿ ಮಹೇಶ, ನಿಡೋಣಿ, ಬಾಬಣ್ಣ, ಪರಮೇಶ ಪಟ್ಟಣಶೆಟ್ಟಿ, ವಸಂತ, ಪುಷ್ಪಾ ಹುಲ್ಲತ್ತಿ, ರಶ್ಮಿ ಕುಂಕೋದ್ ಇತರರು ಸ್ಪಷ್ಪಪಡಿಸಿದ್ದರು. ಟ್ರಸ್ಟಿಗಳ ಸಭೆ ದಿನವೇ ಪೂರ್ವಭಾವಿ ಸಭೆ!ವಾದ-ವಿವಾದದ ಮಧ್ಯೆ ಮಾ.24ರಂದು ಹರಿಹರದ ಪಂಚಮಸಾಲಿ ಪೀಠದಲ್ಲಿ ಟ್ರಸ್ಟಿಗಳ ಸಭೆ ನಡೆಯಲಿದೆ. ಮತ್ತೊಂದು ಕಡೆ ಪೂರ್ವಭಾವಿ ಸಭೆಯ ಹೆಸರಿನಲ್ಲಿ ಭಕ್ತರ ಸಭೆಗೆ ಆಹ್ವಾನಿಸಲಾಗುತ್ತಿದೆ.