- ಬಿಎನ್‌ಎಸ್‌ಎಸ್ ಕಲಂ 126ರಡಿ ಮುಂಜಾಗ್ರತಾ ಕ್ರಮವಾಗಿ ಗ್ರಾಮಾಂತರ ಠಾಣೆ ಪೊಲೀಸರಿಂದ ಪ್ರಕರಣ ದಾಖಲು
- - -ಕನ್ನಡಪ್ರಭ ವಾರ್ತೆ ಹರಿಹರ
ಪಂಚಮಸಾಲಿ ಪೀಠದ ವಿವಾದವು ಅಂತಿಮವಾಗಿ ಪೊಲೀಸ್ ಮೆಟ್ಟಿಲೇರಿದ್ದು, ಮಠದ ಆವರಣದಲ್ಲಿ ಶಾಂತಿಭಂಗ ಉಂಟಾಗುವ ಮುನ್ಸೂಚನೆ ಹಿನ್ನೆಲೆಯಲ್ಲಿ ಗ್ರಾಮಾಂತರ ಠಾಣೆಯ ಪೊಲೀಸರು ಏ.22 ರಂದು ಉಭಯ ಬಣಗಳ ಒಟ್ಟು 20 ಮುಖಂಡರ ವಿರುದ್ಧ ಬಿಎನ್‌ಎಸ್‌ಎಸ್ ಕಲಂ 126ರಡಿ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲಿಸಿದ್ದಾರೆ.ಸ್ವಾಮೀಜಿ ಗುಂಪಿನ ವಿರುದ್ಧದ ಪ್ರಕರಣ:
ಏ.24ರಂದು ಮಠದಲ್ಲಿ ಬಸವ ಜಯಂತಿ ಹಾಗೂ ರಾಜ್ಯ ಸಮಾವೇಶ ಆಯೋಜಿಸಲು ಮುಂದಾಗಿದ್ದ ಬಣದ ಮುಖಂಡರಿಂದ ಶಾಂತಿ ಕದಡುವ ಆತಂಕವಿರುವ ಬಗ್ಗೆ ಮುಂಜಾಗ್ರತಾ ಕ್ರಮದ ವರದಿಯಲ್ಲಿ ಸ್ವಾಮೀಜಿ ಗುಂಪಿನ 10 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮನೋಹರ ತಂದೆ ಪ್ರಭು, ಹರಿಹರ, ಶಂಕ್ರಪ್ಪ ತಂದೆ ರುದ್ರಗೌಡ, ಹರಿಹರ, ಆನಂದ ತಂದೆ ನಂಜುಡಪ್ಪ, ದಾವಣಗೆರೆ, ಕೊಟ್ರೇಶಗೌಡ ತಂದೆ ಚಂದ್ರಪ್ಪ ಕೆಂಚನಗೌಡ, ಹೊಳೆ ಸಿರಿಗೆರೆ, ಕರಿಬಸಪ್ಪ ತಂದೆ ಸದಾಶಿವಪ್ಪ, ಮಲೇಬೆನ್ನೂರು, ನಟರಾಜ ತಂದೆ ಶೇಖರಪ್ಪ, ಬನ್ನಿಕೊಡು, ಅಜೇಯ್ ಪಾಟೀಲ್ ತಂದೆ ಹೇಮಚಂದ್ರ, ಬನ್ನಿಕೋಡು, ಸುರೇಶ ತಂದೆ ಪ್ರಭುದೇವ, ಕೆ.ಬೇವಿನಹಳ್ಳಿ, ನವೀನ ತಂದೆ ಎಚ್.ಎಂ. ನಿಂಗಪ್ಪ, ಬಾನುವಳ್ಳಿ ಮತ್ತು ಮಹೇಶ ತಂದೆ ಮಲ್ಲಪ್ಪ, ಬನ್ನಿಕೊಡು ಅವರ ಹೆಸರನ್ನು ಉಲ್ಲೇಖಿಸಿದ್ದಾರೆ.
ಟ್ರಸ್ಟ್ ವಿರುದ್ಧದ ಪ್ರಕರಣ:
ಅದೇ ರೀತಿ, ಮಠವು ಟ್ರಸ್ಟ್‌ನ ಒಡೆತನದಲ್ಲಿದ್ದು, ಟ್ರಸ್ಟ್‌ನ ಒಪ್ಪಿಗೆ ಇಲ್ಲದೆ ಕಾರ್ಯಕ್ರಮ ನಡೆಸಬಾರದು ಎಂದು ಮಠದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಿಸುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಟ್ರಸ್ಟ್ ಪರವಾದ ಇನ್ನೊಂದು ಗುಂಪಿನ 10 ಜನರ ವಿರುದ್ಧವೂ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ. ನಿರಂಜನ ತಂದೆ ಶಿವಪ್ಪ, ದೀಟೂರು, ಹರೀಶ ತಂದೆ ಕೊಟ್ರಬಸಪ್ಪ, ದೀಟೂರು, ಶಿವಣ್ಣ ಬಂಕಾಪುರ ತಂದೆ ಗದಿಗೆಪ್ಪ, ದಾವಣಗೆರೆ, ಚಂದ್ರು ಪಾಟೀಲ್ ತಂದೆ ಮಲ್ಲಿಕಾರ್ಜುನ, ಹರಿಹರ, ರಾಜು ದೊಡ್ಡಮನಿ ತಂದೆ ಸೋಮಶೇಖರಪ್ಪ, ಹರಿಹರ, ಕರಿಬಸಪ್ಪ ಚಿರಸ್ತರಹಳ್ಳಿ ತಂದೆ ರುದ್ರಪ್ಪ, ಗುತ್ತೂರು, ಎಚ್.ಡಿ. ಪ್ರಶಾಂತ ತಂದೆ ಬಸವರಾಜಪ್ಪ, ಹೊನ್ನಾಳಿ, ಪಲ್ಲವಿರಾಜ್ ತಂದೆ ಚಂದ್ರಪ್ಪ, ಹೊನ್ನಾಳಿ, ಹಾಲೇಶಪ್ಪ ತಂದೆ ಮಹದೇವಪ್ಪ, ಹೊನ್ನಾಳಿ ಮತ್ತು ಬಾತಿ ರವಿ ತಂದೆ ವೀರಪ್ಪ, ದಾವಣಗೆರೆ ಅವರ ಹೆಸರುಗಳಿವೆ.ಮುನ್ನೆಚ್ಚರಿಕೆ ಕ್ರಮವಾಗಿ ಈ ಎರಡೂ ಗುಂಪುಗಳ ವಿರುದ್ಧ ಪೊಲೀಸರು ಕ್ರಮ ಕೈಗೊಂಡು ವರದಿಯನ್ನು ಕಾರ್ಯನಿರ್ವಾಹಕ ದಂಡಾಧಿಕಾರಿಗಳಿಗೆ (ತಹಸೀಲ್ದಾರ್) ಸಲ್ಲಿಸಿದ್ದಾರೆ.
ಮುಂದಿನ ಪ್ರಕ್ರಿಯೆ:ಇದರ ಮುಂದಿನ ಪ್ರಕ್ರಿಯೆಯಾಗಿ ತಹಸೀಲ್ದಾರರು ಈ ಎಲ್ಲ ವ್ಯಕ್ತಿಗಳಿಗೆ ''''ಕಾರಣ ಕೇಳುವ ನೋಟಿಸ್'''' ನೀಡಲಿದ್ದಾರೆ. ನಂತರ ಸಾರ್ವಜನಿಕ ಶಾಂತಿ ಕದಡದಂತೆ ಏಕೆ ಮುಚ್ಚಳಿಕೆ ಪತ್ರ ಬರೆಯಿಸಬಾರದು ಎಂಬ ಬಗ್ಗೆ ದಂಡಾಧಿಕಾರಿಗಳು ಈ ವ್ಯಕ್ತಿಗಳ ವಿಚಾರಣೆ ನಡೆಸಲಿದ್ದಾರೆ.
ವಿಚಾರಣೆ ವೇಳೆ ಶಾಂತಿಭಂಗವಾಗುವ ಭೀತಿ ಬಗ್ಗೆ ದಂಡಾಧಿಕಾರಿಗಳಿಗೆ ಮನವರಿಕೆಯಾದಲ್ಲಿ, ಗರಿಷ್ಠ 1 ವರ್ಷದ ಅವಧಿಗೆ ಶಾಂತಿ ಪಾಲನೆಯ ಬಾಂಡ್ ಅನ್ನು ಶ್ಯೂರಿಟಿ ಸಮೇತ ಅಥವಾ ಇಲ್ಲದೆಯೇ ಬರೆಯಿಸಿಕೊಳ್ಳಲಾಗುತ್ತದೆ. ಒಂದುವೇಳೆ ಈ ಅವಧಿಯಲ್ಲಿ ಶಾಂತಿ ಪಾಲನೆಯಲ್ಲಿ ವೈಫಲ್ಯ ಉಂಟಾದಲ್ಲಿ, ಬರೆಯಿಸಿಕೊಂಡ ಬಾಂಡ್ ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳಲು ಅಥವಾ ಕಾನೂನು ರೀತ್ಯಾ ಶಿಕ್ಷಿಸಲು ಅವಕಾಶವಿದೆ.- - -
