ವೀರಶೈವ ಲಿಂಗಾಯತ ಏಕತಾ ಸಮಾವೇಶಕ್ಕೆ ಪಂಚಪೀಠಾಧೀಶರರು: ರಂಭಾಪುರಿ ಶ್ರೀ

| Published : Sep 13 2025, 02:04 AM IST

ವೀರಶೈವ ಲಿಂಗಾಯತ ಏಕತಾ ಸಮಾವೇಶಕ್ಕೆ ಪಂಚಪೀಠಾಧೀಶರರು: ರಂಭಾಪುರಿ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಮಹಾಸಭೆ ವಿರುದ್ಧವಾಗಿ ಕೆಲವರು ನಡೆದುಕೊಳ್ಳುತ್ತಿರುವುದು ಒಳ್ಳೆಯದಲ್ಲ. ಜಾತಿ ಜನಗಣತಿ ಹಿನ್ನೆಲೆ ವೀರಶೈವ ಲಿಂಗಾಯತ ಬೇರೆ ಬೇರೆ ಎಂದು ಕೆಲವರು ಹೇಳುತ್ತಿರುವುದು ನೋವಿನ ಸಂಗತಿ.

ಹಾವೇರಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಆಶ್ರಯದಲ್ಲಿ ಹುಬ್ಬಳ್ಳಿಯಲ್ಲಿ ಸೆ. 19ರಂದು ಜರುಗಲಿರುವ ವೀರಶೈವ ಲಿಂಗಾಯತ ಏಕತಾ ಸಮಾವೇಶದಲ್ಲಿ ಪಂಚಪೀಠಾಧೀಶರರು ಪಾಲ್ಗೊಳ್ಳುವರೆಂದು ಬಾಳೆಹೊನ್ನೂರು ರಂಭಾಪುರಿ ಡಾ. ವೀರಸೋಮೇಶ್ವರ ಸ್ವಾಮೀಜಿ ತಿಳಿಸಿದ್ದಾರೆ.ಶುಕ್ರವಾರ ನಗರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿ, ವೀರಶೈವ ಧರ್ಮ ಬಹುಪ್ರಾಚೀನವಾಗಿದ್ದು, ಸಕಲ ಜೀವಾತ್ಮರಿಗೆ ಒಳಿತನ್ನೆ ಬಯಸುತ್ತಾ ಬಂದಿದೆ. ಲಿಂ. ಹಾನಗಲ್ಲ ಕುಮಾರಸ್ವಾಮಿಗಳು ಸ್ಥಾಪಿಸಿದ ಅಖಿಲ ಭಾರತ ವೀರಶೈವ ಮಹಾಸಭೆಯ ಮೊದಲ ಅಧಿವೇಶನದಲ್ಲಿನ ನಿರ್ಣಯಗಳಂತೆ ನಡೆದುಕೊಂಡು ಬರುತ್ತಿದೆ.

ಮಹಾಸಭೆ ವಿರುದ್ಧವಾಗಿ ಕೆಲವರು ನಡೆದುಕೊಳ್ಳುತ್ತಿರುವುದು ಒಳ್ಳೆಯದಲ್ಲ. ಜಾತಿ ಜನಗಣತಿ ಹಿನ್ನೆಲೆ ವೀರಶೈವ ಲಿಂಗಾಯತ ಬೇರೆ ಬೇರೆ ಎಂದು ಕೆಲವರು ಹೇಳುತ್ತಿರುವುದು ನೋವಿನ ಸಂಗತಿ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸಮುದಾಯದ ಮಠಾಧೀಶರ ಮತ್ತು ಗಣ್ಯರ ಜತೆ ಸಮಾಲೋಚಿಸಿ ವೀರಶೈವ ಲಿಂಗಾಯತ ಇವೆರಡೂ ಒಂದೇ ಎಂದು ಸ್ಪಷ್ಟವಾಗಿ ಹೇಳಿದೆ. ಆದರೂ ಕೆಲವರು ಒಡಕಿನತ್ತ ಹೊರಟಿರುವುದನ್ನು ಕಂಡು ಹುಬ್ಬಳ್ಳಿಯಲ್ಲಿ ಸೆ. 19ರಂದು ನೆಹರು ಮೈದಾನದಲ್ಲಿ ಬೃಹತ್ ವೀರಶೈವ ಲಿಂಗಾಯತ ಏಕತಾ ಸಮಾವೇಶ ಸಂಯೋಜಿಸಿದ್ದಾರೆ.

ಈ ಸಮಾರಂಭದಲ್ಲಿ ಪಂಚಪೀಠದ ಜಗದ್ಗುರುಗಳು ವಿರಕ್ತಮಠಾಧೀಶರು ಹಾಗೂ ಶರಣ ಪರಂಪರೆಯ ಗಣ್ಯರು ಪಾಲ್ಗೊಳ್ಳಲಿದ್ದಾರೆ. ನಾಡಿನೆಲ್ಲೆಡೆಯಿಂದ ಈ ಬೃಹತ್ ಸಮಾವೇಶಕ್ಕೆ ವೀರಶೈವ ಲಿಂಗಾಯತ ಸಮಾಜದವರು ಪಾಲ್ಗೊಳ್ಳಬೇಕೆಂದು ಶ್ರೀಗಳು ಕರೆ ನೀಡಿದ್ದಾರೆ ಎಂದರು.

ಸಮಾರಂಭದಲ್ಲಿ ಹಾವೇರಿ ಗೌರಿಮಠದ ಮತ್ತು ಬಣ್ಣದ ಮಠದ ಶ್ರೀಗಳು ಉಪಸ್ಥಿತರಿದ್ದರು.