ಕನ್ನಡಪ್ರಭ ವಾರ್ತೆ ಗದಗ
ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಗೀಳಿನಿಂದ ಮಾನಸಿಕ ಹಾಗೂ ದೈಹಿಕ ಜಡತ್ವಕ್ಕೆ ಒಳಗಾಗುತ್ತಿರುವ ಮಕ್ಕಳನ್ನು ಅದರಿಂದ ಮುಕ್ತಗೊಳಿಸಿ, ಅವರಲ್ಲಿ ಸೃಜನಶೀಲತೆ ಬೆಳೆಸಲು ಸಾಂಪ್ರದಾಯಿಕ ಕಾಗದ ಕತ್ತರಿ ಕಲೆ (ಪೇಪರ್ ಕಟಿಂಗ್ ಆರ್ಟ್) ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ರಾಷ್ಟ್ರಮಟ್ಟದ ಖ್ಯಾತ ಕಲಾವಿದ ಮೈಸೂರಿನ ಎಸ್.ಎಫ್. ಹುಸೇನಿ ಅಭಿಪ್ರಾಯಪಟ್ಟರು.ಗದಗ ತಾಲೂಕಿನ ಕುರ್ತಕೋಟಿ ಗ್ರಾಮದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 1ರಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಒಂದು ದಿನದ ಕಾಗದ ಕತ್ತರಿ ಕಲೆ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳಿಗೆ ಬಿಡುವಿನ ವೇಳೆ ಸಿಕ್ಕರೆ ಸಾಕು ಮೊಬೈಲ್ ಪರದೆಯಲ್ಲೇ ಕಳೆದುಹೋಗುತ್ತಿದ್ದು, ಮೈದಾನದ ಆಟಗಳು, ಸಹಪಠ್ಯ ಚಟುವಟಿಕೆಗಳು ಹಾಗೂ ಓದುವ ಹವ್ಯಾಸಗಳಿಂದ ಸಂಪೂರ್ಣ ವಿಮುಖರಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೈಬೆರಳುಗಳ ಸ್ನಾಯುಗಳಿಗೆ ವ್ಯಾಯಾಮ ನೀಡುವ ಹಾಗೂ ಕಲ್ಪನಾಶಕ್ತಿಯನ್ನು ಜಾಗೃತಗೊಳಿಸುವ ಕರಕುಶಲ ಕಲೆಗಳು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯಶಿಕ್ಷಕಿ ಎನ್.ಎನ್. ಕುರ್ತಕೋಟಿ ಮಾತನಾಡಿ, ವಿದ್ಯಾರ್ಥಿ ದೆಸೆಯಲ್ಲಿ ಇಂತಹ ಆಕರ್ಷಕ ಕಲಾ ಪ್ರಕಾರಗಳನ್ನು ಕಲಿಯುವುದರಿಂದ ಮನಸ್ಸಿಗೆ ಮುದ ಸಿಗುವುದರೊಂದಿಗೆ ಬಿಡುವಿನ ವೇಳೆಯ ಸದುಪಯೋಗವಾಗುತ್ತದೆ. ಮಕ್ಕಳು ಮೊಬೈಲ್ ಪರದೆಗಳಿಂದ ದೂರವಿದ್ದು ಸೃಜನಶೀಲ ಚಟುವಟಿಕೆಗಳಲ್ಲಿ ಹೆಚ್ಚು ಪಾಲ್ಗೊಳ್ಳಬೇಕು ಎಂದರು.ಉದ್ಘಾಟನೆಯ ಬಳಿಕ ನಡೆದ ಪ್ರಾಯೋಗಿಕ ತರಬೇತಿಯಲ್ಲಿ ಕಲಾವಿದ ಎಸ್.ಎಫ್. ಹುಸೇನಿ ಅವರು ಬಣ್ಣಬಣ್ಣದ ಕಾಗದಗಳನ್ನು ಕ್ಷಣಮಾತ್ರದಲ್ಲಿ ಕತ್ತರಿಸಿ ಚಿತ್ತಾಕರ್ಷಕ ಬೊಂಬೆಗಳು, ವಿಘ್ನವಿನಾಶಕ ಗಣೇಶ, ತಮಾಷೆಯ ಜೋಕರ್, ಆಕಾಶಬುಟ್ಟಿ, ಗಾಳಿಪಟ ಹಾಗೂ ಬೃಹತ್ ರಂಗೋಲಿ ಚಿತ್ತಾರಗಳನ್ನು ಸೃಷ್ಟಿಸುವ ಪ್ರಾತ್ಯಕ್ಷಿಕೆ ನೀಡಿ ವಿದ್ಯಾರ್ಥಿಗಳನ್ನು ಬೆರಗುಗೊಳಿಸಿದರು. ವಿದ್ಯಾರ್ಥಿಗಳು ಕೂಡ ಉತ್ಸಾಹದಿಂದ ಕಾಗದಗಳನ್ನು ವಿವಿಧ ವಿನ್ಯಾಸಗಳಲ್ಲಿ ಕತ್ತರಿಸಿ ತಮ್ಮದೇ ಕಲಾಕೃತಿಗಳನ್ನು ರಚಿಸಿ ಸಂಭ್ರಮಿಸಿದರು. ಕಾರ್ಯಾಗಾರವನ್ನು ಸಂಘಟಿಸಿದ್ದ ಶಾಲೆಯ ಶಿಕ್ಷಕ ಶಾಂತಗೌಡ ಮರಿಗೌಡರ ಕಾರ್ಯಕ್ರಮ ನಿರ್ವಹಿಸಿದರು.ಕಾಗದ ಮತ್ತು ಕತ್ತರಿ ಕೇವಲ ವಸ್ತುಗಳಲ್ಲ; ಅವು ಮಕ್ಕಳ ಸುಪ್ತ ಪ್ರತಿಭೆಯನ್ನು ಅರಳಿಸುವ ಮಾಂತ್ರಿಕ ಸಾಧನಗಳು. ಪುಟಾಣಿ ಕೈಗಳು ಕಾಗದವನ್ನು ಮಡಿಚಿ ಕತ್ತರಿಸುವಾಗ ಅವರಲ್ಲಿ ಏಕಾಗ್ರತೆ, ತಾಳ್ಮೆ ಹಾಗೂ ಸೃಜನಶೀಲ ಚಿಂತನೆ ಗರಿಗೆದರುತ್ತದೆ. ಮೊಬೈಲ್ನ ಕೃತಕ ಜಗತ್ತಿನಿಂದ ಮಕ್ಕಳನ್ನು ಹೊರತಂದು ಜೀವಂತ ಕಲೆಯ ಕಡೆಗೆ ಸೆಳೆಯುವುದೇ ನಮ್ಮ ಮುಖ್ಯ ಉದ್ದೇಶ.
ಎಸ್.ಎಫ್. ಹುಸೇನಿ, ರಾಷ್ಟ್ರಮಟ್ಟದ ಕಾಗದ ಕತ್ತರಿ ಕಲಾವಿದ