ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ಗುರುವಿಗೂ, ಸ್ನೇಹಕ್ಕೂ ಬೆಲೆ ಕಟ್ಟಲಾಗದು. ಇವರು ಸದಾ ಆತ್ಮಸ್ಥೈರ್ಯ ನಿಡುತ್ತಾರೆ. ಸ್ನೇಹಿತರಿಲ್ಲದ ಜೀವನ ಜೀವನವೇ ಅಲ್ಲ ಎಂದು ನಗರದ ಕಂದ ಆಸ್ಪತ್ರೆಯ ಮಕ್ಕಳ ತಜ್ಞರಾದ ಡಾ. ರಾಘವೇಂದ್ರರೆಡ್ಡಿ ಕೂಲೂರು ನುಡಿದರು.ವಿಶ್ವ ಸ್ನೇಹಿತರ ದಿನಾಚರಣೆ ಪ್ರಯುಕ್ತ ಚಂದ್ರಶೇಖರ್ ವಿದ್ಯಾಸಂಸ್ಥೆಯ ನ್ಯೂ ಕನ್ನಡ ಕಾಲೇಜಿನ 2006ರ ಪಿಯುಸಿ ಕಲಾ ವಿಭಾಗದ ಗೆಳೆಯರ ಬಳಗದ ವತಿಯಿಂದ ನಗರದ ಲುಂಬಿನಿ ವನದಲ್ಲಿ ನಡೆದ ಗುರುವಂದನಾ ಹಾಗೂ ಸ್ನೇಹಿತರ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಕಾರ್ಯಕ್ರಮದ ಸವಿನೆನಪಿಗಾಗಿ ಗೆಳೆಯರ ಬಳಗದಿಂದ ಸಸಿ ನೆಡುವ ಮೂಲಕ ಪರಿಸರ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ. ಪರಿಸರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಉತ್ತಮ ಪರಿಸರದಿಂದ ಮಾತ್ರ ಮನುಷ್ಯ ಆರೋಗ್ಯವಾಗಿರಲು ಸಾಧ್ಯ. ನಿಮ್ಮೆಲ್ಲರ ಸಮಾಜಮುಖಿ ಕಾರ್ಯಗಳಿಗೆ ವೈಯಕ್ತಿಕವಾಗಿ ನನ್ನ ಸಹಕಾರವು ಇರುತ್ತದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನ್ಯೂ ಕನ್ನಡ ಕಾಲೇಜಿನ ಪಿಯುಸಿ ವಿಭಾಗದ ಪ್ರಾಚಾರ್ಯ ಮಲ್ಲಿಕಾರ್ಜುನ್ ಎಸ್. ಅಂಗಡಿ ಮಾತನಾಡಿ, ಗುರು-ಶಿಷ್ಯರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ತಮ್ಮ ಏಳಿಗೆಯಲ್ಲಿ ಗುರುವಿನ ಪಾತ್ರ ಅತ್ಯಂತ ಮುಖ್ಯವಾಗಿರುತ್ತದೆ. ವಿದ್ಯೆ ಕಲಿಸಿದ ಗುರುಗಳನ್ನು ಹಾಗೂ ತಮ್ಮ ಸಹಪಾಠಿಗಳನ್ನು ನೆನಪಿಸಿಕೊಂಡು ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಏರ್ಪಡಿಸಿದ್ದು, ತುಂಬಾ ಸಂತಸದ ವಿಷಯ ಎಂದರು.
ಸಂತ, ಶರಣರ ಹಾಗೂ ಸ್ವಾತಂತ್ರ ಹೋರಾಟಗಾರರ ತತ್ವಾದರ್ಶಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡು ಒಗ್ಗಟ್ಟಾಗಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕೆಂದರು.ಕಾರ್ಯಕ್ರಮದಲ್ಲಿ ಗುರುಗಳಿಗೆ ಗೌರವಿಸಿ, ಸನ್ಮಾನಿಸಲಾಯಿತು. ತದನಂತರ ಲುಂಬಿನಿ ವನದಲ್ಲಿ 50ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಯಿತು. ಇದಕ್ಕೂ ಮುನ್ನ ಮಾಜಿ ಶಾಸಕ ವೀರಬಸಂತರೆಡ್ಡಿ ಮುದ್ನಾಳ, ಮರಿಗೌಡ ಹುಲಕಲ್ ಹಾಗೂ ಪಿಎಸ್ಐ ಪರಶುರಾಮ್ ಅವರಿಗೆ ಎರಡು ನಿಮಿಷಗಳು ಮೌನಾಚರಣೆ ಮಾಡಿ ನುಡಿನಮನ ಸಲ್ಲಿಸಲಾಯಿತು.
ಉಪನ್ಯಾಸಕರಾದ ಡಾ. ಎಸ್ ಎಸ್. ನಾಯಕ್, ಪ್ರಕಾಶ್ ರೆಡ್ಡಿ ಕುರುಕುಂದಿ, ಎಲ್.ಎನ್. ರೆಡ್ಡಿ, ಶರಣಗೌಡ ಅಲ್ಲಿಪುರ, ಕನ್ನಡ ಪರ ಸಂಘಟನೆಯ ಮುಖಂಡರಾದ ಸೋಪಣ್ಣ, ರವಿ, ಗೆಳೆಯರ ಬಳಗದ ಮುಖ್ಯಸ್ಥೆ ರುದ್ರಾಂಬಿಕ ಆರ್. ಪಾಟೀಲ್ ಸೇರಿದಂತೆ ಇತರರಿದ್ದರು. ಲಕ್ಷ್ಮಿದೇವಿ ಸ್ವಾಗತಿಸಿದರು. ಬಸವರಾಜ ಕುರುಕುಂದಿ ನಿರೂಪಿಸಿದರು. ಕಾಶಿಂ ಪಟೇಲ ಟಿ. ವಡಗೇರಾ ವಂದಿಸಿದರು.