ಇಂದು ಮಹಾಲಕ್ಷ್ಮಿ ಯದುಗಿರಿನಾಯಕಿ ಅಮ್ಮನವರ ವರ್ಧಂತ್ಯುತ್ಸವ

| Published : Aug 07 2024, 01:03 AM IST

ಸಾರಾಂಶ

ವರ್ಧಂತಿಯಂದು ವೇದ ನಾದ ದಿವ್ಯಪ್ರಬಂಧ ಪಾರಾಯಣಗಳ ವಿಶೇಷದೊಂದಿಗೆ ಕಲ್ಯಾಣನಾಯಕಿ ಅಮ್ಮನವರಿಗೆ ಬೆಳಗ್ಗೆ ಶೇಷವಾಹನೋತ್ಸವ, ರಾತ್ರಿ ಚೆಲುವನಾರಾಯಣಸ್ವಾಮಿಯವರೊಂದಿಗೆ ಬಂಗಾರದ ಪುಷ್ಪಪಲ್ಲಕ್ಕಿ ಉತ್ಸವ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಮಹಾಲಕ್ಷ್ಮಿ ಯದುಗಿರಿನಾಯಕಿ ಅಮ್ಮನವರ ವರ್ಧಂತ್ಯುತ್ಸವ ಆಗಸ್ಟ್ 7ರಂದು ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ವೈಭವದಿಂದ ನಡೆಯಲಿದೆ.

ಮಹೋತ್ಸವದ ಅಂಗವಾಗಿ ಕಲ್ಯಾಣನಾಯಕಿ ಅಮ್ಮನವರಿಗೆ ಮಂಗಳವಾರ ಸಂಜೆ ಚಿಕ್ಕಶೇಷಾಲಂಕಾರದ ಉತ್ಸವ ವೈಭವದಿಂದ ನಡೆಯಿತು.

ವರ್ಧಂತಿಯಂದು ವೇದ ನಾದ ದಿವ್ಯಪ್ರಬಂಧ ಪಾರಾಯಣಗಳ ವಿಶೇಷದೊಂದಿಗೆ ಕಲ್ಯಾಣನಾಯಕಿ ಅಮ್ಮನವರಿಗೆ ಬೆಳಗ್ಗೆ ಶೇಷವಾಹನೋತ್ಸವ, ರಾತ್ರಿ ಚೆಲುವನಾರಾಯಣಸ್ವಾಮಿಯವರೊಂದಿಗೆ ಬಂಗಾರದ ಪುಷ್ಪಪಲ್ಲಕ್ಕಿ ಉತ್ಸವ ನಡೆಯಲಿದೆ.

ಬೆಳಗ್ಗೆ ಶೇಷವಾಹನೋತ್ಸವದ ನಂತರ ಅಮ್ಮನವರಿಗೆ ಅಭಿಷೇಕ ಮಹಾಶಾತ್ತುಮೊರೈ ಕಾರ್ಯಕ್ರಮಗಳು ನಡೆಯಲಿದೆ. ಶ್ರೀವೈಷ್ಣದ ದೇವತೆ ಆಂಡಾಳ್ ಅವತಾರದ ದಿನದ ಅಂಗವಾಗಿ ನಾಡಿನೆಲ್ಲೆಡೆ ತಿರುವಾಡಿಪ್ಪೂರಂ ನಡೆದರೆ ಚೆಲುವನಾರಾಯಣ ಸ್ವಾಮಿಯ ದಿವ್ಯಸನ್ನಿಧಿಯಲ್ಲಿ ಆಂಡಾಳ್ ಅವತಾರ ಉತ್ಸವ ಅಮ್ಮನವರ ವರ್ಧಂತಿಯಾಗಿ ಆಚರಿಸಲಾಗುತ್ತದೆ.

ಮಹೋತ್ಸವದ ಅಂಗವಾಗಿ ಅಮ್ಮನವರ ಸನ್ನಿಧಿಯ ಆವರಣವನ್ನು ತಳಿರು ತೋರಣ ಹಾಗೂ ವಿಶೇಷ ಪುಷ್ಪಗಳಿಂದ ಅಲಂಕಾರ ಮಾಡಲಾಗಿದೆ. ಮೂರನೇ ಸ್ಥಾನೀಕರಾದ ಕೋವಿಲ್ ನಂಬಿ ಮುಕುಂದನ್ ಹಾಗೂ ಪ್ರಸನ್ನ ಅಮ್ಮನವರ ವರ್ಧಂತಿ ಮಹೋತ್ಸವಕ್ಕೆ ಕಾಳಜಿವಹಿಸಿ ವಿಶೇಷ ವ್ಯವಸ್ಥೆ ಮಾಡಲು ಶ್ರಮಿಸಿದ್ದಾರೆ.