ಸಾರಾಂಶ
ಹುಬ್ಬಳ್ಳಿ: ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕೇವಲ ಧಾರ್ಮಿಕ ಕಾರ್ಯಕ್ರಮ ಅಷ್ಟೇ ಅಲ್ಲ. ಅದೊಂದು ಭಾರತೀಯರ ಅಸ್ಮಿತೆ, ಭವ್ಯ ಭಾರತದ ಭವಿಷ್ಯ. ಹೀಗಾಗಿ ಆ ಕ್ಷಣವನ್ನು ಕಣ್ತುಂಬಿಕೊಳ್ಳುವುದೇ ಅದ್ಭುತ ಹಾಗೂ ರೋಮಾಂಚನ. ಆ ಕ್ಷಣಕ್ಕೆ ಸಾಕ್ಷಿಯಾದ ನಮ್ಮ ಜೀವನವೇ ಧನ್ಯ ಎಂದು ಉದ್ಯಮಿ, ಸ್ವರ್ಣಾ ಗ್ರೂಪ್ ಆಫ್ ಕಂಪನೀಸ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಸಿ.ಎಚ್. ವಿಎಸ್‌ವಿ ಪ್ರಸಾದ ತಿಳಿಸಿದರು.
ಅಯೋಧ್ಯೆ ಶ್ರೀರಾಮ ಮಂದಿರ ಟ್ರಸ್ಟ್‌ನ ಆಹ್ವಾನದ ಮೇರೆಗೆ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ಕನ್ನಡಪ್ರಭದೊಂದಿಗೆ ಮನಬಿಚ್ಚಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನನ್ನಲ್ಲಿ ಧನ್ಯತಾ ಭಾವ ಮೂಡಿತು.500 ವರ್ಷಗಳ ನಂತರ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಪುನರ್ ನಿರ್ಮಾಣವಾಗಿದೆ. ಇದು ದೇಶದ 140 ಕೋಟಿ ಜನರ ಕನಸು ನನಸಾದ ಸುದಿನ. ಇದಕ್ಕೆ ಭಾರತೀಯರಷ್ಟೇ ಅಲ್ಲದೇ ಇಡೀ ಪ್ರಪಂಚ ಹೆಮ್ಮೆ ಪಡುತ್ತಿದೆ. ಇದನ್ನು ಸಾಕಾರಗೊಳಿಸುವಲ್ಲಿ ಅವಿರತ ಶ್ರಮ ಹಾಗೂ ಹೋರಾಟ ಮಾಡಿದವರಿಗೆ ಹೃದಯ ತುಂಬಿ ಬಂದಿರುವ ಕ್ಷಣವನ್ನು ಕಣ್ಣಾರೆ ಕಂಡು ಪುಳುಕಿತನಾಗಿದ್ದೇನೆ ಎಂದರು.
ಶ್ರೀರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನೆ ವಿಧಿ ವಿಧಾನಗಳು ಪೂರ್ಣಗೊಂಡ ನಂತರ ನಾನೂ ಶ್ರೀರಾಮನ ದರ್ಶನ ಪಡೆದುಕೊಂಡು ಪಾವನನಾದೆ. ಹುಬ್ಬಳ್ಳಿ- ಧಾರವಾಡ ಜನರ ಪರವಾಗಿ ಎಲ್ಲರಿಗೂ ಒಳಿತಾಗಲಿ ಎಂದು ಪ್ರಾರ್ಥಿಸಿದ್ದೇನೆ. ಅಯೋಧ್ಯೆ ತಲುಪಲು ಸಾಕಷ್ಟುಅಡೆತಡೆಗಳು ಇದ್ದಾಗಲೂ ಅವೆಲ್ಲವನ್ನು ದಾಟಿ ಶ್ರೀರಾಮನ ದರ್ಶನ ಪಡೆದಿರುವುದು ನನ್ನ ಪೂರ್ವಜನ್ಮದ ಪುಣ್ಯ ಎಂದು ಭಾವಿಸಿದ್ದೇನೆ ಎಂದು ಭಾವುಕರಾಗಿ ನುಡಿಯುತ್ತಾರೆ.ಅಯೋಧ್ಯೆಯಿಂದ ಮರಳಿದವರಿಗೆ ಅದ್ಧೂರಿ ಸ್ವಾಗತಅಯೋಧ್ಯೆಯ ಶ್ರೀರಾಮ ಮಂದಿರದ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹುಬ್ಬಳ್ಳಿಗೆ ಆಗಮಿಸಿದ ಉದ್ಯಮಿ, ಸ್ವರ್ಣಾ ಸಮೂಹ ಸಂಸ್ಥೆಯ ಮಾಲೀಕ ಡಾ. ಸಿಎಚ್ ವಿ.ಎಚ್.ವಿ. ಪ್ರಸಾದ ಹಾಗೂ ಮಜೇಥಿಯಾ ಫೌಂಡೇಶನ್‌ನ ಸಂಸ್ಥಾಪಕ ಜೀತೇಂದ್ರ ಮಜೇಥಿಯಾ ಅವರನ್ನು ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.ಈ ವೇಳೆ ಸುಭಾಸಸಿಂಗ ಜಮಾದಾರ, ಪ್ರಸಾದ ಕರನಂದಿ, ಅಭಿಷೇಕ ಮೆಹ್ತಾ, ವಿಜಯ ಕ್ಷೀರಸಾಗರ, ಮಣಿಕಂಠ ಕಳಸ, ಗಿರೀಶ ಚವರ್ಗಿ, ವಿಶ್ವನಾಥ ಹಳ್ಯಾಳಕರ, ಕಶ್ಯಪ ಮಜೇಥಿಯಾ, ನಂದಿನಿ ಮಜೇಥಿಯಾ, ದೂದಾಬಾಯಿ ಚೌದರ, ತೋಟಪ್ಪಾ ನಿಡಗುಂದಿ, ಜಮತಾರಾಮ ಪಟೇಲ, ಗೋಪಾಲ ಪುರೋಹಿತ ಸೇರಿದಂತೆ ಹಲವರಿದ್ದರು.