ಸಾರಾಂಶ
ಕೊಪ್ಪಳ: ಇಲ್ಲಿನ ಕೊಪ್ಪಳ ಲೋಕಸಭೆ ಕ್ಷೇತ್ರ ವ್ಯಾಪ್ತಿ ಎರಡು ಅವಧಿಯಲ್ಲಿ ಹೆದ್ದಾರಿ, ರೈಲ್ವೆ ಅಭಿವೃದ್ಧಿ ಪಡಿಸಲಾಗಿದ್ದು, ಮುಂದಿನ ಅವಧಿಯಲ್ಲಿ ರಾಜ್ಯದಲ್ಲಿಯೇ ಕೊಪ್ಪಳ ಲೋಕಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸುವೆ ಎಂದು ಸಂಸದ ಕರಡಿ ಹೇಳಿದರು.ಸಿಂಧನೂರು ತಾಲೂಕಿನ ಬೂದಿಹಾಳ ಕ್ಯಾಂಪ್‌ನಲ್ಲಿ ಮಂಗಳವಾರ ಜರುಗಿದ ರಾಷ್ಟ್ರೀಯ ಹೆದ್ದಾರಿ 150ಎ ವೆಂಕಟೇಶ್ವರ ಕ್ಯಾಂಪ್ ದಿಂದ ದಢೇಸ್ಗೂರು ಕ್ಯಾಂಪ್ ವರೆಗೆ ರಸ್ತೆ ಅಗಲೀಕರಣ ಮತ್ತು ಸೇತುವೆ ನಿರ್ಮಾಣ ಕಾಮಗಾರಿ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.ವೆಂಕಟೇಶ್ವರ ಕ್ಯಾಂಪ್ ದಿಂದ ದಢೇಸ್ಗೂರು ಕ್ಯಾಂಪ್ ವರೆಗೆ 14 ಕಿ.ಮೀ. ಇದ್ದು, ಅರ್ಧ ಕಿ.ಮೀ. ಸೇತುವೆ ನಿರ್ಮಾಣವಾಗಬೇಕಿದೆ. ಇದಕ್ಕಾಗಿ ಬರೋಬ್ಬರೀ ₹83 ಕೋಟಿ ಅನುದಾನ ಮೀಸಲಿಡಲಾಗಿದೆ. ಕಾಲಮಿತಿಯಲ್ಲಿ ಗುಣಮಟ್ಟದ ಕಾಮಗಾರಿ ನಡೆಸಬೇಕು ಎಂದರು.ಒಂದು ಗ್ರಾಮ, ಹೋಬಳಿ, ತಾಲೂಕು, ಜಿಲ್ಲೆ, ರಾಜ್ಯ ಅಭಿವೃದ್ಧಿ ಆಗಬೇಕಾದರೆ ರಸ್ತೆ ಹಾಗೂ ಮೂಲಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸರಕು ಸಾಗಣೆ ಸೇರಿ ಮತ್ತಿತರೆ ಕಾರ್ಯಗಳಿಗೆ ರಸ್ತೆ ಅಭಿವೃದ್ಧಿ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರದಿಂದ ಅನುದಾನ ತಂದು ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಹೆದ್ದಾರಿ ಅಭಿವೃದ್ಧಿ ಪಡಿಸಲಾಗಿದೆ ಎಂದರು.ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಬಂದ ಬಳಿಕ ಹಿಂದೆಂದೂ ಕಾಣದಂತಹ ರಸ್ತೆ, ಹೆದ್ದಾರಿಗಳ ಅಭಿವೃದ್ಧಿಯಾಗಿದೆ. ರಾಜ್ಯದಲ್ಲೂ ಬಿಜೆಪಿ ಅವಧಿಯಲ್ಲಿ ನೀರಾವರಿಗೆ ಆದ್ಯತೆ ನೀಡಿ ಲಕ್ಷಾಂತರ ಹೆಕ್ಟೇರ್ ಜಮೀನಿಗೆ ನೀರುಣಿಸಲಾಗಿದೆ. ರಾಜ್ಯ ಸರ್ಕಾರ ರಸ್ತೆ, ಮೂಲಸೌಕರ್ಯ, ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.ಶಾಸಕ ಬಾದರ್ಲಿ ಹಂಪನಗೌಡರು, ಮಾಜಿ ಶಾಸಕ ವೆಂಕಟರಾವ್ ನಾಡಗೌಡ್ರು, ಪ್ರತಾಪ್ ಗೌಡ್ರು ಪಾಟೀಲ್, ಬಸವರಾಜ ದಡೆಸುಗೂರು, ಗ್ರಾಪಂ ಅಧ್ಯಕ್ಷೆ ರೇಣುಕಮ್ಮ, ಉಪಾಧ್ಯಕ್ಷ ನಾಗೇಶ್ವರರಾವ್, ಮುಖಂಡ ಕೆ.ಕರಿಯಪ್ಪ ಇತರರಿದ್ದರು.
ಕೇಂದ್ರದ ಬಜೆಟ್ ಅಧಿವೇಶನ ಬಳಿಕ ಸಿಂಧನೂರುವರೆಗೆ ರೈಲು ಸಂಚಾರ ನಡೆಸಲಾಗುವುದು. ಸಿಂಧನೂರಿನಲ್ಲಿ ಶೀಘ್ರವೇ ಕೇಂದ್ರೀಯ ವಿಶ್ವವಿದ್ಯಾಲಯ ನಿರ್ಮಿಸಲಾಗುವುದು. ಮೆಡಿಕಲ್ ಕಾಲೇಜು ಸೇರಿ ಜಿಲ್ಲೆ ಕೇಂದ್ರದಲ್ಲಿರುವ ಎಲ್ಲ ಸೌಲಭ್ಯಗಳನ್ನು ಸಿಂಧನೂರಿಗೆ ತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎನ್ನುತ್ತಾರೆ ಸಂಸದ ಸಂಗಣ್ಣ ಕರಡಿ.