ಸಾರಾಂಶ
ಪುರಸಭೆ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸದಸ್ಯರಿಂದ ಆಗ್ರಹ
ಕನ್ನಡಪ್ರಭ ವಾರ್ತೆ ಚನ್ನಗಿರಿಪಟ್ಟಣದಲ್ಲಿ ನಾಲ್ಕು ಪ್ರಮುಖ ರುದ್ರಭೂಮಿಗಳಿದ್ದು ಅದಕ್ಕೆ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಬೇಕು ಹಾಗೂ ಮುಕ್ತಿ ವಾಹನ ಖರೀದಿಗೆ ಕಳೆದ ಬಜೆಟ್ ನಲ್ಲೂ ಪ್ರಸ್ತಾಪಿಸಿದ್ದರೂ ಈ ಬಗ್ಗೆ ಗಮನಹರಿಸಿಲ್ಲ ಎಂದು ಪುರಸಭೆ ಸದಸ್ಯರಾದ ನಂಜುಂಡಪ್ಪ, ಗಾದ್ರಿರಾಜು, ಸರ್ವಮಂಗಳಮ್ಮ, ಪಟ್ಲಿ ನಾಗರಾಜ್ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಪುರಸಭೆ ಆಡಳಿತಾಧಿಕಾರಿ, ಉಪ ವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಪುರಸಭೆಯ 2024-25ನೇ ಸಾಲಿನ ಆಯವ್ಯಯದ ಪೂರ್ವಭಾವಿ ಸಭೆಯಲ್ಲಿ ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಆಡಳಿತಾಧಿಕಾರಿ ಈ ಬಾರಿಯ ಬಜೆಟ್ ನಲ್ಲಿ ಸ್ಮಶಾನಗಳಿಗೆ ಮೂಲಭೂತ ಸೌಲಭ್ಯಗಳ ಕಲ್ಪಿಸುವುದು ಹಾಗೂ ಮುಕ್ತಿ ವಾಹನ ಖರೀದಿಗೆ ಬಜೆಟ್ ನಲ್ಲಿ ಸೇರ್ಪಡಿಸಲಾಗುವುದು ಎಂದು ಆಡಳಿತಾಧಿಕಾರಿ ಸಭೆಗೆ ತಿಳಿಸಿದರು.ಪಟ್ಟಣಕ್ಕೆ ಹೊಂದಿರುವ ಕೆಲವು ಗ್ರಾಮಗಳಿಗೆ ಪುರಸಭೆ ವತಿಯಿಂದ ಮೂಲಭೂತ ಸೌಲಭ್ಯಗಳ ನೀಡಿದ್ದು ಆದರೆ ಈ ಗ್ರಾಮಗಳಿಂದ ಪುರಸಭೆಗೆ ಆದಾಯ ಬರುತ್ತಿಲ್ಲ ಅಂತಹ ಗ್ರಾಮಗಳ ಪುರಸಭೆ ವ್ಯಾಪ್ತಿಗೆ ಸೇರಿಸಿಕೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದು ಗ್ರಾಮಗಳ ಸೇರ್ಪಡೆಗೆ ನಗರ ಯೋಜನಾ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಪಟ್ಟಣದಲ್ಲಿ ವಾಯುವಿಹಾರಕ್ಕಾಗಿ ಸುಸಜ್ಜಿತ ಪಾರ್ಕ್ ನಿರ್ಮಿಸಬೇಕು ಎಂದು ಸಭೆಯ ಗಮನಕ್ಕೆ ಸದಸ್ಯರಾದ ಪಟ್ಲಿ ನಾಗರಾಜ್, ಪಾರಿಪರಮೇಶ್, ಮೊಟ್ಟೆಚಿಕ್ಕಣ್ಣ ತಂದಾಗ ಪುರಸಭೆಯ ಜಾಗ ಗುರುರ್ತಿಸಿ ಪಾರ್ಕ್ ನಿರ್ಮಿಸಲು ಕ್ರಮ ಕೈಗೊಳ್ಳೋಣ ಎಂದರು.ಸಭೆಯಲ್ಲಿ ಮುಖ್ಯಾಧಿಕಾರಿ ಕೃಷ್ಣ ಡಿ.ಕಟ್ಟಿಮನಿ, ಹಿರಿಯ ಆರೋಗ್ಯ ನಿರೀಕ್ಷಕ ಶಿವರುದ್ರಪ್ಪ, ಅಭಿಯಂತರ ಹಾಲೇಶ್ ಸೇರಿ ಪುರಸಭೆಯ ಸದಸ್ಯರು ಹಾಜರಿದ್ದರು.
ಸ್ವಚ್ಛತೆಗೆ ಸೂಚಿಸಿದರೆ ಅಧಿಕಾರಿಗಳಿಂದ ಸಬೂಬುಪುರಸಭೆ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸದಸ್ಯ ಅಮೀರ್ ಅಹಮದ್ ಮಾತನಾಡಿ ಪಟ್ಟಣದಲ್ಲಿ ಸ್ವಚ್ಚತೆಯು ಮರೀಚಿಕೆ ಯಾಗಿದ್ದು ಕಸ ತುಂಬಲು ಕಸದ ಗಾಡಿ ಕಳಿಸಿ ಎಂದರೆ ಪೆಟ್ರೋಲ್, ಡಿಸೇಲ್ ಇಲ್ಲ ಎಂದು ಅಧಿಕಾರಿಗಳು ಸಬೂಬು ಹೇಳುತ್ತಾರೆ. ಸದಸ್ಯರು ಪಟ್ಟಣದ ಸ್ವಚ್ಛತೆಗೆ ಸಂಬಂಧಿಸಿ ಏನಾದರೂ ಸೂಚಿಸಿದರೆ ಗಾಡಿಗಳು ಸರಿ ಇಲ್ಲ ಎಂದು ಉತ್ತರಿಸುತ್ತಾರೆ. ವಾರ್ಡ್ ಗಳ ನಾಗರಿಕರಿಂದ ನಿತ್ಯ ಬೈಯಿಸಿಕೊಳ್ಳುವುದೇ ಆಗಿದೆ ಇದಕ್ಕೆ ಏನು ಕ್ರಮ ಕೈಗೊಳ್ಳುವಿರಿ ಎಂದು ಸದಸ್ಯ ಅಮೀರ್ ಅಹ್ಮದ್ ಏರು ಧ್ವನಿಯಲ್ಲಿಯೇ ಆಡಳಿತಾಧಿಕಾರಿಗಳ ಪ್ರಶ್ನಿಸಿದರು.
ಶಾಸಕರು ಕರೆಗಳ ಸ್ವೀಕರಿಸಲ್ಲಚನ್ನಗಿರಿ ಪಟ್ಟಣಕ್ಕೆ ವಿತರಿಸುವ ಕುಡಿಯುವ ನೀರಿನಲ್ಲಿ ಮಣ್ಣು ಮಿಶ್ರಿತ ಕೆಂಪು ನೀರು ಬರುತ್ತಿದ್ದು ಇದನ್ನು ಜನರು ಹೇಗೆ ಕುಡಿಯಬೇಕು ಈ ಬಗ್ಗೆ ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಶಾಸಕರ ಬಳಿ ಹೇಳೋಣವೆಂದರೆ ಸ್ವ ಪಕ್ಷದ ಸದಸ್ಯರ ಕರೆಗಳನ್ನೇ ಸ್ವೀಕರಿಸುವುದಿಲ್ಲ. ನಾವು ಅಸಹಾಯಕರಾಗಿದ್ದೇವೆ ಎಂದು ಅಮೀರ್ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.