ಬಂಡಿಪುರ ವಿಭಾಗದಲ್ಲಿ ಆನೆ ಕಾರ್ಯಪಡೆ ರಚನೆ

| Published : Jan 24 2024, 02:01 AM IST

ಸಾರಾಂಶ

ರಾಜ್ಯದಲ್ಲಿ ಪ್ರತಿವರ್ಷ 50 ರಿಂದ 60 ಮಂದಿ ಕಾಡು ಪ್ರಾಣಿಗಳ ದಾಳಿಗೆ ಬಲಿಯಾಗುತ್ತಿದ್ದಾರೆ, ಆನೆ, ಹುಲಿ ಮುಂತಾದ ವನ್ಯಪ್ರಾಣಿಗಳು ಕಾಡಿನಿಂದ ಹೊರಗೆ ಬರದಂತೆ ಶಾಶ್ವತ ಪರಿಹಾರ ಕ್ರಮವಹಿಸಲಾಗುವುದು.660 ಕೀ.ಮೀ ಪ್ರದೇಶ ವ್ಯಾಪ್ತಿಯಲ್ಲಿ ಬ್ಯಾರಿಕೇಟ್ ಅಳವಡಿಸಬೇಕಾಗಿದ್ದು, ಈಗಾಗಲೇ 312 ಕೀ.ಮೀ ವ್ಯಾಪ್ತಿಯಲ್ಲಿ ಅಳವಡಿಕೆ ಕಾರ್ಯ ಮುಗಿದಿದೆ, 120 ಕೀ.ಮೀ ಕಾಮಗಾರಿಗೆ ಹೊಸದಾಗಿ ಮಂಜೂರಾತಿ ನೀಡಲಾಗಿದೆ,

- ಅರಣ್ಯ ಸಚಿವ ಈಶ್ವರ ಖಂಡ್ರೆ ಭರವಸೆ

--------

ಕನ್ನಡಪ್ರಭ ವಾರ್ತೆ ನಂಜನಗೂಡು

ಬಂಡೀಪುರ ಅರಣ್ಯದಲ್ಲಿ ಅತಿ ಹೆಚ್ಚು ಆನೆಗಳಿದ್ದು, ಆನೆಗಳಿಂದ ಕಾಡಂಚಿನ ಗ್ರಾಮಗಳಲ್ಲಿ ಬೆಳೆ ನಾಶ ಹಾಗೂ ಜನರ ಪ್ರಾಣಹಾನಿ ತಪ್ಪಿಸಲು ಆನೆಗಳನ್ನು ಕೂಡಲೇ ಕಾಡಿಗೆ ಅಟ್ಟಲು ಪ್ರತ್ಯೇಕ ಆನೆ ಕಾರ್ಯಪಡೆ ರಚಿಸುವುದಾಗಿ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ ಬಿ ಖಂಡ್ರೆ ಭರವಸೆ ನೀಡಿದರು.

ತಾಲೂಕಿನ ಪ್ರದೇಶ ಹೆಡಿಯಾಲ ಸಮೀಪದ ಓಂಕಾರ ಅರಣ್ಯಮತ್ತು ಬಂಡೀಪುರ ಅರಣ್ಯ ಪ್ರದೇಶ ವ್ಯಾಪ್ತಿಯ ಪ್ರದೇಶಗಳಿಗೆ ಮಂಗಳವಾರ ಭೇಟಿ ನೀಡಿದ ಸಚಿವ ಈಶ್ವರ ಬಿ. ಖಂಡ್ರೆ ಕಾಡಂಚಿನಲ್ಲಿ ಅಳವಡಿಸಲಾಗಿರುವ ರೈಲ್ವೆ ಬ್ಯಾರಿಕೇಡ್ ವೀಕ್ಷಿಸಿದ ನಂತರ ಅವರು ಮಾತನಾಡಿದರು.

ರಾಜ್ಯದಲ್ಲಿ ಪ್ರತಿವರ್ಷ 50 ರಿಂದ 60 ಮಂದಿ ಕಾಡು ಪ್ರಾಣಿಗಳ ದಾಳಿಗೆ ಬಲಿಯಾಗುತ್ತಿದ್ದಾರೆ, ಆನೆ, ಹುಲಿ ಮುಂತಾದ ವನ್ಯಪ್ರಾಣಿಗಳು ಕಾಡಿನಿಂದ ಹೊರಗೆ ಬರದಂತೆ ಶಾಶ್ವತ ಪರಿಹಾರ ಕ್ರಮವಹಿಸಲಾಗುವುದು.

660 ಕೀ.ಮೀ ಪ್ರದೇಶ ವ್ಯಾಪ್ತಿಯಲ್ಲಿ ಬ್ಯಾರಿಕೇಟ್ ಅಳವಡಿಸಬೇಕಾಗಿದ್ದು, ಈಗಾಗಲೇ 312 ಕೀ.ಮೀ ವ್ಯಾಪ್ತಿಯಲ್ಲಿ ಅಳವಡಿಕೆ ಕಾರ್ಯ ಮುಗಿದಿದೆ, 120 ಕೀ.ಮೀ ಕಾಮಗಾರಿಗೆ ಹೊಸದಾಗಿ ಮಂಜೂರಾತಿ ನೀಡಲಾಗಿದೆ, ಉಳಿದ 220 ಕೀ.ಮೀ ವ್ಯಾಪ್ತಿಯಲ್ಲಿ ರೈಲು ಕಂಬಿಗಳ ತಡೆ ಗೋಡೆ ನಿರ್ಮಿಸಲು ಮುಂದಿನ ಬಜೆಟ್ ನಲ್ಲಿ 200 ಕೋಟಿ ರು. ಅನುದಾನ ಪಡೆದು ತಡೆ ಗೋಡೆ ನಿರ್ಮಿಸಲಾಗುವುದು ವನ್ಯಪ್ರಾಣಿ- ಮಾನವ ಸಂಘರ್ಷ ತಪ್ಪಿಸುವ ಸಲುವಾಗಿ ಅಗತ್ಯ ಕ್ರಮಕೈಗೊಳ್ಳಲಾಗುವುದು, ಜೊತೆಗೆ ಹೆಚ್ಚುವರಿ ಇನ್ನೊಂದು ವಾಹನ ತೆರದು ಅಗತ್ಯ ಸಿಬ್ಬಂದಿಗಳನ್ನು ಒದಗಿಸಿ ಕಾಡು ಪ್ರಾಣಿಗಳ ಹಾವಳಿ ತಪ್ಪಿಸಲು ಕ್ರಮವಹಿಸಲಾಗುವುದು ಎಂದರು.

ಎಲ್ಲ ಕಾಡು ಪ್ರಾಣಿಗಳಿಂದ ಬೆಳೆ ನಷ್ಟವಾದರೆ ಪರಿಹಾರದ ಬದಲಿಗೆ ನಷ್ಟ ಭರಿಸಲು ಪ್ರಯತ್ನ- ಹೆಡಿಯಾಲ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ಸಚಿವ ಈಶ್ವರ ಬಿ ಖಂಡ್ರೆ ನಡೆಸಿದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ಗ್ರಾಮಸ್ಥರು, ಆನೆ ದಾಳಿಯಿಂದ ಬೆಳೆ ಹಾನಿಯಾದರೆ ಪರಿಹಾರ ದೊರಕುತ್ತದೆ, ಆದರೆ ಜಿಂಕೆ, ಕಾಡು ಹಂದಿ, ನವಿಲು ಸೇರಿದಂತೆ ಇತರೆ ಕಾಡು ಪ್ರಾಣಿಗಳಿಂದ ನಾಶವಾದರೂ ಪರಿಹಾರ ಒದಗಿಸಬೇಕು, ಅಲ್ಲದೆ ಹೆಚ್ಚಿನ ಬೆಳೆ ನಾಶವಾದರೂ ಅರಣ್ಯಾಧಿಕಾರಿಗಳು ದಾಖಲೆಗಳಲ್ಲಿ ಕಡಿಮೆ ಪ್ರಮಾಣದ ಹಾನಿ ತೋರಿಸಿ, ರೈತರನ್ನು ವಂಚಿಸುತ್ತಿದ್ದಾರೆ ಎಂದು ದೂರಿದರು.

ಪ್ರತಿಕ್ರಿಯೆ ನೀಡಿದ ಈಶ್ವರ ಬಿ. ಖಂಡ್ರೆ ನಿಮ್ಮ ಸಮಸ್ಯೆಯನ್ನು ನಾನು ಖುದ್ದಾಗಿ ನೋಡಿದ್ದೇನೆ ಕಾಡಂಚಿನ ರೈತರು ನಮಗೆ ಎಲ್ಲ ರೀತಿಯ ಕಾಡುಪ್ರಾಣಿಗಳಿಂದ ಬೆಳೆ ನಷ್ಟವಾದರೆ ನಮಗೆ ಪರಿಹಾರ ನೀಡುವುದು ಬೇಡ ಬದಲಿಗೆ ನಷ್ಟವನ್ನೇ ಭರಿಸುವಂತೆ ಮನವಿ ಮಾಡಿದ್ದೀರಿ, ನಾನು ಈ ಬಗ್ಗೆ ವಿಸ್ತೃತ ವರದಿ ತಯಾರಿಸಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿ ಮಾನದಂಡಗಳ ಅನ್ವಯ ರೈತರ ಬೇಡಿಕೆಯನ್ನು ಈಡೇರಿಸಲು ಪ್ರಯತ್ನಿಸುತ್ತೇನೆ ಎಂದ ಅವರು, ಶೇ. 80 ರಷ್ಟು ಮಾತ್ರ ಕಾಡು ಪ್ರಾಣಿಗಳ ಹಾವಳಿಯನ್ನು ತಪ್ಪಿಸಲು ಸಾಧ್ಯ. ಉಳಿತ 20 ಭಾಗ ನಿಯಂತ್ರಿಸಲು ಅಸಾಧ್ಯ ನಾವು ಒಬ್ಬರಿಗೊಬ್ಬರು ಸಹಕರಿಸುವ ಮೂಲಕ ಎಚ್ಚರಿಕೆ ವಹಿಸುವ ಮೂಲಕವೇ ನಿಯಂತ್ರಿಸಲು ಸಾಧ್ಯ ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಮಾನವ ಪ್ರಾಣಿ ಸಂಘರ್ಷ ತಪ್ಪಿಸಲು ಕಾಡಿನ ವ್ಯಾಪ್ತಿ ಪ್ರದೇಶವನ್ನು ಹೆಚ್ಚಿಸುವ ಜೊತೆಗೆ ಶಾಶ್ವತ ಪರಿಹಾರ ಒದಗಿಸಲಾಗುವುದು ಎಂದರಲ್ಲದೆ, ಸಾರ್ವಜನಿಕರೊಡನೆ ಅರಣ್ಯಾಧಿಕಾರಿಗಳು ಸಂಯಮದಿಂದ ವರ್ತಿಸುವಂತೆ ಸೂಚನೆ ನೀಡಿದರು.

ಜಂಟಿ ಸರ್ವೇ ಕಾರ್ಯ ನಡೆಸಿ ರೈತರಿಗೆ ಭೂಮಿ ಮಂಜೂರಾತಿ : ಕಳೆದ 50 ವರ್ಷಗಳಿಂದಲೂ ಸಹ ಸಾಗುವಳಿ ಮಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿ ನೀಡದ ಕಾರಣ ಆರ್.ಟಿ.ಸಿಯಲ್ಲಿ ಅರಣ್ಯ ಭೂಮಿ ಎಂದು ಬರುವ ಕಾರಣವೊಡ್ಡಿ ಪರಿಹಾರ ನೀಡದೆ ರೈತರಿಗೆ ಅನ್ಯಾಯವೆಸಗಲಾಗುತ್ತಿದೆ. ಆದ್ದರಿಂದ ಜಂಟಿ ಸರ್ವೆ ಕಾರ್ಯ ನಡೆಸಿ ರೈತರಿಗೆ ಭೂಮಿ ಮಂಜೂರು ಮಾಡಿಕೊಡಬೇಕೆಂದು ರೈತರು ಆಗ್ರಹಿಸಿದರು.

ಇದಕ್ಕೆ ಉತ್ತರಿಸಿ ಸಚಿವರು ಅರಣ್ಯ ಇಲಾಖೆ, ಮತ್ತು ಕಂದಾಯ ಇಲಾಖೆಗಳು ಜಂಟಿ ಸರ್ವೆ ಕಾರ್ಯ ನಡೆಸಿ ಕಾಡಿನ ಗಡಿ ಗುರ್ತಿಸಿ ಕಂದಾಯ ಭೂಮಿಗೆ ಸೇರಲ್ಪಟ್ಟ ಜಮೀನಿಗೆ ಸಾಗುವಳಿ ಚೀಟಿ ನೀಡಲು ಕ್ರಮವಹಿಸಲಾಗುವುದು ಮತ್ತು 1978ಕ್ಕಿಂತಲೂ ಹಿಂದೆ ಸಾಗುವಳಿ ಮಾಡುತ್ತಿರುವ ಅರಣ್ಯ ಇಲಾಖೆಗೆ ಸೇರಲ್ಪಟ್ಟ ಭೂಮಿಯನ್ನು ಅರಣ್ಯ ಹಕ್ಕು ಕಾಯ್ದೆಯಡಿ ವಿತರಿಸಲು ಕ್ರಮವಹಿಸುವುದಾಗಿ ಭರವಸೆ ನೀಡಿದರು.

ನಮ್ಮ ನಾಯಕರುಗಳಾಗಿದ್ದ ಮಾಜಿ ಸಂಸದ ಆರ್. ಧ್ರುವನಾರಾಯಣ ಹಾಗೂ ಮಾಜಿ ಸಚಿವ ಮಹದೇವ ಪ್ರಸಾದ್ ಬದುಕಿದ್ದರೆ ಸಂಪುಟ ದರ್ಜೆಯ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದರು. ಅವರ ಮಕ್ಕಳಾದ ಶಾಸಕ ದರ್ಶನ್ ಧ್ರುವನಾರಾಯಣ ಹಾಗೂ ಶಾಸಕ ಗಣೇಶ್ ಪ್ರಸಾದ್ ಅವರಿಗೆ ರಾಜಕೀಯದಲ್ಲಿ ಉಜ್ವಲ ಭವಿಷ್ಯವಿದೆ, ಈ ಇಬ್ಬರ ಆಶಯದಂತೆ ಕಾಡಂಚಿನ ಗ್ರಾಮಗಳಿಗೆ ಭೇಟಿ ನೀಡಿ ಸಮಸ್ಯೆಗೆ ಪರಿಹಾರ ದೊರಕಿಸಲಾಗುತ್ತಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ತಾಲೂಕಿನ ಬಳ್ಳೂರು ಹುಂಡಿಯಲ್ಲಿ ಇತ್ತೀಚೆಗೆ ಹುಲಿ ದಾಳಿಯಿಂದ ಮೃತಪಟ್ಟ ರತ್ನಮ್ಮ ಅವರ ನಿವಾಸಕ್ಕೆ ತೆರಳಿದ ಸಚಿವರು ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ತಾತ್ಕಾಲಿಕ ಉದ್ಯೋಗ, ಮಾಸಾಸನ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶಾಸಕರಾದ ದರ್ಶನ್ ಧ್ರುವನಾರಾಯಣ, ಗಣೇಶ್ ಪ್ರಸಾದ್, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುಭಾಷ್ ಮಾಲ್ಕೇಡ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಕುಮಾರ್, ಎಸಿಎಫ್ ಪರಮೇಶ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ್, ಶ್ರೀಕಂಠನಾಯಕ, ಮುಖಂಡರಾದ ನಾಗೇಶ್ ರಾಜ್, ಗ್ರಾಪಂ ಅಧ್ಯಕ್ಷೆ ಮಹದೇವಿ, ಗ್ರಾಪಂ ಸದಸ್ಯರಾದ ಗೋವಿಂದರಾಜು, ಅಶ್ರಫ್ ಅಲಿ ಸೇರಿದಂತೆ ಹಲವಾರು ಪ್ರಮುಖರು ಇದ್ದರು.