ಭಾನುವಾರ ಪರ್ಯಾಯ ಪುತ್ತಿಗೆ ಮಠದ ವತಿಯಿಂದ ತಿಂಗಳ ಕಾಲ ನಡೆದ ಬೃಹತ್ ಗೀತೋತ್ಸವದ ಸಮಾರೋಪ ಸಮಾರಂಭದಲ್ಲಿ ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥರು ಆಂಧ್ರ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಗೆ ಅಭಿನವ ಕೃಷ್ಣದೇವರಾಯ ಬಿರುದು ಪ್ರದಾನ ಮಾಡಿದರು.

ಉಡುಪಿ: ಧರ್ಮ ಮತ್ತು ಸಂವಿಧಾನ ಬೇರೆಯಲ್ಲ, ಎರಡ ಉದ್ದೇಶ ಶಾಂತಿಯುತ ಸಮಾಜದ ನಿರ್ಮಾಣವೇ ಆಗಿದೆ ಎಂದು ಖ್ಯಾತ ನಟ, ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಹೇಳಿದ್ದಾರೆ.ಭಾನುವಾರ ಪರ್ಯಾಯ ಪುತ್ತಿಗೆ ಮಠದ ವತಿಯಿಂದ ತಿಂಗಳ ಕಾಲ ನಡೆದ ಬೃಹತ್ ಗೀತೋತ್ಸವದ ಸಮಾರೋಪ ಸಮಾರಂಭದಲ್ಲಿ ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥರಿಂದ ಅಭಿನವ ಕೃಷ್ಣದೇವರಾಯ ಬಿರುದು ಸ್ವೀಕರಿಸಿ ಅವರು ಮಾತನಾಡಿದರು.‘ಕೃಷ್ಣ ಸನ್ನಿಧಿಗೆ ಶಿರ ಸಾಷ್ಟಾಂಗ ನಮಸ್ಕಾರ, ಶ್ರೀಗಳಿಗೆ ನಮಸ್ಕಾರಗಳು’ ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದ ಪವನ್ ಕಲ್ಯಾಣ್, ಕನ್ನಡ ಬರದಿರುವುದರಿಂದ ನಾನು ಮೆಕಾಲೆಯ ಇಂಗ್ಲಿಷ್ ನಲ್ಲಿ ಮಾತು ಮುಂದುವರಿಸುತ್ತೇನೆ ಎಂದರು.

ಇಂಗ್ಲಿಷ್ ಭಾಷೆ ಭಾರತದ ಸನಾತನ ಧರ್ಮವನ್ನು ಮಾಡುತ್ತದೆ ಎಂದು ಮೆಕಾಲೆ ಹೇಳಿದ್ದ, ಆದರೆ ಸನಾತನ ಧರ್ಮದ ಶಕ್ತಿಯ ಮುಂದೆ ಅದು ಸಾಧ್ಯವಾಗಿಲ್ಲ, ವೇದಗಳು ಮತ್ತು ಗೀತೆ ನಮ್ಮ ಸಂಸ್ಕೃತಿಯನ್ನು ಉಳಿಸಿವೆ ಎಂದರು.

ಉಡುಪಿ ಆಧ್ಯಾತ್ಮದ ಪವರ್ ಹೌಸ್ ನಂತಿದೆ. ಇಲ್ಲಿಗೆ ಬಂದಾಗ ಆಧ್ಯಾತ್ಮದ ಸೆಳೆತ ಇಲ್ಲಿ ಕಂಡಿದ್ದೇನೆ. ಪುತ್ತಿಗೆ ಶ್ರೀಗಳು ಒಂದು ಕೋಟಿ ಜನರಿಂದ ಗೀತೆ ಬರೆಸುತ್ತಿದ್ದಾರೆ, ನಾನು ಕೂಡ ಗೀತಾ ಲೇಖನ ಯಜ್ಞ ಸಂಕಲ್ಪ ಸ್ವೀಕರಿಸಿದ್ದೇನೆ, ನಾನೂ ಭಗವದ್ಗೀತೆ ಬರೆಯುತ್ತೇನೆ ಎಂದರು.ಜೆನ್ ಜೀ ಯುವಜನರು ಭಗವದ್ಗೀತೆಯನ್ನು ಜೊತೆಗಿರಿಸಿಕೊಳ್ಳಿ, ಮಾನವೀಯತೆಯ ಅತ್ಯುನ್ನತ ಪ್ರಣಾಳಿಕೆ ಭಗವದ್ಗೀತೆ ನಮ್ಮ ಸಂವಿಧಾನದಲ್ಲಿಯೂ ಭಗವದ್ಗೀತೆಯ ಶ್ಲೋಕಗಳಿವೆ. ಭಗವದ್ಗೀತೆ ಮೂಢನಂಬಿಕೆಯಲ್ಲ, ಅದೊಂದು ವಿಜ್ಞಾನ, ಕೃಷ್ಣನ ಜೀವನೋತ್ಸವವೇ ಭಗವದ್ಗೀತೆಯ ಸಾರಾಂಶ, ಕೃಷ್ಣ ದೇವರು ನನ್ನ ಬದುಕಿನ ಪ್ರೇರಣೆ, ನನಗೆ ಭಗವದ್ಗೀತೆಯ ಶ್ಲೋಕಗಳು ಗೊತ್ತಿಲ್ಲ, ಆದರೆ ಅದರ ಶಕ್ತಿ ಗೊತ್ತಿದೆ. ನಿಷ್ಕಾಮ ಕರ್ಮ ಭಗವದ್ಗೀತೆಯಿಂದ ನಾನು ಕಲಿಸಿದ್ದೇನೆ ಆದ್ದರಿಂದಲೇ ಸೋಲು ಗೆಲುವು ನನಗೆ ಬಾಧಿಸುವುದಿಲ್ಲ ಎಂದರು.

ಪ್ರಧಾನಿ ಮೋದಿ ಅವರು ರಷ್ಯಾದ ಪ್ರಧಾನಿ ಪುತಿನ್ ಗೆ ಭಗವದ್ಗೀತೆಯನ್ನುಕೊಡುಗೆ ನೀಡಿದ್ದು, ಅತ್ಯಂತ ಸಕಾಲಿಕ ಉಡುಗೊರೆಯಾಗಿದೆ, ಅಲ್ಲಿನ ಇಂದಿನ ಯುದ್ಧಕಾಲದಲ್ಲಿ ಪಾಠ ಹೇಳುವ ಉಡುಗೊರೆ ಅದು, ಹಿಂದಿಗಿಂತಲೂ ಇಂದು ಭಗವದ್ಗೀತೆ ಈಗ ಹೆಚ್ಚು ಸಕಾಲಿಕವಾಗಿದೆ ಎಂದ ಪವನ್ ಕಲ್ಯಾಣ್ ಹೇಳಿದರು.

ಪುತ್ತಿಗೆ ಮಠದ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ, ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ, ಮಾಯಾಪುರಿ ಇಸ್ಕಾನ್‌ನ ಶ್ರೀ ಸುಭಾಗ್ ಸ್ವಾಮೀ ಗುರುಮಹಾರಾಜ್ ಸಾನಿಧ್ಯ ವಹಿಸಿದ್ದರು.

ತಿರುಪತಿ ತಿರುಮಲ ದೇವಸ್ಯಂ ಟ್ರಸ್ಟ್ ನ ಆನಂದ ಸಾಯಿ ಮತ್ತು ನರೇಶ್ ಸ್ವಾಮಿ, ಹೈದರಾಬಾದ್ ನ ಉದ್ಯಮಿಗಳ‍ಾದ ರಾಘವೇಂದ್ರ ಹೆಬ್ಬಾರ್ ಮತ್ತು ಮುರಳೀ ಬಲ್ಲಾಳ್ ಅವರನ್ನು ಪುತ್ತಿಗೆ ಶ್ರೀಗಳು ಗೌರವಿಸಿದರು.

ಶ್ರೀಮಠದ ವಿದ್ವಾಂಸ ಡಾ. ಗೋಪಾಲಾಚಾರ್ಯ ಸ್ವಾಗತಿಸಿದರು, ಡಾ. ವಿಜಯೇಂದ್ರ ವಂದಿಸಿದರು. ಮಠದ ಅಂತರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯರು ಕಾರ್ಯಕ್ರಮ ಸಂಯೋಜಿಸಿದರು.

ಆಂಧ್ರ ಪಠ್ಯದಲ್ಲಿ ಗೀತೆ ಸೇರಿಸಿ: ಪುತ್ತಿಗೆ ಶ್ರೀನಮ್ಮ ರಾಜ್ಯದಲ್ಲಿ ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆ ಬಗ್ಗೆ ಪರವಿರೋಧ ಚರ್ಚೆಗಳಾಗುತ್ತಿವೆ. ಆಂಧ್ರಪ್ರದೇಶ ಪಠ್ಯದಲ್ಲಿ ಗೀತೆಯನ್ನು ಸೇರಿಸಿ, ಈ ವಿಚಾರದಲ್ಲಿ ಮುಂಚೂಣಿ ನಿರ್ಧಾರ ಕೈಗೊಳ್ಳಿ ಪುತ್ತಿಗೆ ಶ್ರೀಗಳು ಡಿಸಿಎಂ ಪವನ್ ಕಲ್ಯಾಣ್ ಗೆ ಸಲಹೆ ಮಾಡಿದರು.ಆಂಧ್ರದ ಪಠ್ಯದಲ್ಲಿ ಈಗಾಗಲೇ ಆಚಾರ್ಯ ಶಂಕರ, ರಾಮಾನುಜಾಚಾರ್ಯ, ಬಸವಣ್ಣರ ಬಗ್ಗೆ ಪಾಠಗಳಿವೆ, ಅದರಂತೆ ಆಚಾರ್ಯ ಮಧ್ವರ ಪಠ್ಯ ಸೇರಿಸಿ, ತ್ಯಾಗರಾಜರು 24,000 ಕೀರ್ತನೆಗಳನ್ನು ಬರೆದಿದ್ದಾರೆ, ಆದರೇ ಕೇವಲ 700 ಕೀರ್ತನೆಗಳು ಲಭ್ಯ ಇದೆ, ಈ ಬಗ್ಗೆ ಸಂಶೋಧನೆ ನಡೆಸಲು ಸಮಿತಿ ರಚಿಸಿ ಎಂದು ಶ್ರೀಗಳು ಸಲಹೆ ಮಾಡಿದರು,