ಬ್ಯಾಡಗಿ: ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಕರ್ತವ್ಯ ನಿರ್ಲಕ್ಷ್ಯ ಹಾಗೂ ಸಮರ್ಪಕವಾಗಿ ಕಚೇರಿಗೆ ಬರುತ್ತಿಲ್ಲ ವೆಂದು ಆಕ್ರೋಶಗೊಂಡ ತಾಲೂಕಿನ ಹಿರೇಹಳ್ಳಿ ಗ್ರಾಮಸ್ಥರು ವರ್ಗಾವಣೆ ಮಾಡುವರೆಗೂ ಕಚೇರಿ ಬಾಗಿಲು ತೆರೆಯಲು ಬಿಡುವುದಿಲ್ಲವೆಂದು ಬುಧವಾರ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

ಗ್ರಾಮದ ಮುಖಂಡ ಪರಶುರಾಮ ಅಗಸಿಬಾಗಿಲ ಮಾತನಾಡಿ, ಗ್ರಾಮದಲ್ಲಿ ಸ್ವಚ್ಛತೆ ಸೇರಿದಂತೆ ಕುಡಿಯುವ ನೀರು ನಿರ್ವ ಹಣೆ ಸರಿಯಾಗಿ ನಡೆಯುತ್ತಿಲ್ಲ, ಈ ಕುರಿತು ಕಚೇರಿಗೆ ತೆರಳಿ ಗ್ರಾಮಸ್ಥರು ದೂರು ಸಲ್ಲಿಸಿದರೂ ಅಭಿವೃದ್ದಿ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ, ವಾರದಲ್ಲಿ 2 ದಿನ ಮಾತ್ರ ಕಚೇರಿಗೆ ಬರುತ್ತಿದ್ದು, ಯಾವಾಗ ಕೇಳಿದರೂ ಹಾವೇರಿ, ಬ್ಯಾಡಗಿ, ಧಾರವಾಡ ಇತ್ಯಾದಿ ಊರುಗಳ ಹೆಸರು ಹೇಳುತ್ತ ವಿಳಂಬ ಮಾಡುತ್ತಿದ್ದಾರೆ. ನೀರಿನ ಟ್ಯಾಂಕ್ ಸ್ವಚ್ಛವಿಲ್ಲದೆ ಗ್ರಾಮಸ್ಥರು ತೊಂದರೆ ಪಡುತ್ತಿದ್ದಾರೆ. ಯಾವ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲವೆಂದು ಹರಿಹಾಯ್ದರು.

ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಕಾರ್ಯನಿರ್ವಹಿಸಬೇಕೆಂದು ಸರ್ಕಾರದ ಆದೇಶದಲ್ಲಿದೆ. ಆದರೆ ಪಿಡಿಓಗಳು ರಾಣಿಬೆನ್ನೂರು, ಹಾವೇರಿ, ಬ್ಯಾಡಗಿಯಿಂದ ಓಡಾಡುತ್ತಿದ್ದಾರೆ. ಈ ಕುರಿತು ಯಾರಿಗೂ ಸರಿಯಾಗಿ ಮಾಹಿತಿ ಸಿಗುತ್ತಿಲ್ಲ, ಏನಾದರೂ ಕೇಳಿದರೇ ನೀವು ಪಂಚಾಯತಿಗೆ ಹೋಗ್ರಿ ನಾನು ಅವರಿಗೆ ಹೇಳುವೆ, ಇವರಿಗೆ ಹೇಳುವೆ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಇಂತಹ ಅಧಿಕಾರಿಗಳಿಂದ ಗ್ರಾಮದ ಅಭಿವೃದ್ದಿ ಆಗುವುದಿಲ್ಲ, ಜಿಲ್ಲಾ ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿಗಳು, ತಾಲೂಕು ಪಂಚಾಯತಿ ಇಓ ವಿಚಾರಣೆ ನಡೆಸಿ ಕೂಡಲೇ ಇವರನ್ನು ವರ್ಗಾವಣೆ ಮಾಡುವ ಮೂಲಕ ಗ್ರಾಮಸ್ಥರಿಗೆ ನ್ಯಾಯ ಒದಗಿಸುವಂತೆ ಮನವಿ ಮಾಡಿದರು.ಗ್ರಾಮದಲ್ಲಿ ಬೀದಿನಾಯಿಗಳ ಹಿಂಡು ಹಿಂಡಾಗಿ ಓಡಾಡುತ್ತಿದ್ದು, ನಾಯಿಗಳ ಹಾವಳಿಗೆ ಕಡಿವಾಣ ಹಾಕುವಂತೆ ಗ್ರಾಮಸ್ಥರು ಈ ಹಿಂದೆ ಸಭೆಯಲ್ಲಿ ದೂರು ಸಲ್ಲಿಸಿದ್ದು, ಅಧಿಕಾರಿಗಳು ಎರಡು ವರ್ಷಗಳ ಹಿಂದೆ ನಾಲ್ಕಾರು ನಾಯಿಗಳನ್ನು ಹಿಡಿಸಿದಂತೆ ಮಾಡಿ, ಸಂಖ್ಯೆಯಲ್ಲಿ ಹೆಚ್ಚು ತೋರಿಸಿ ಕೈತೊಳೆದುಕೊಂಡಿದ್ದಾರೆ. ಗ್ರಾಮದಲ್ಲಿ ಬಹುತೇಕರಿಗೆ ಬೀದಿನಾಯಿಗಳ ಹಾವಳಿಯಿಂದ ಅಪಾಯ ತೀವ್ರವಾಗಿದೆ. ಮೂರು ಮಗುವೊಂದು ನಾಯಿ ಕಚ್ಚಿಸಿಕೊಂಡು ಆಸ್ಪತ್ರೆಯಲ್ಲಿ ದಾಖಲಾಗಿದೆ. ಇಂತಹ ಘಟನೆಗಳು ಸಾಕಷ್ಟು ಬಾರಿ ನಡೆದಿದ್ದು, ಎಲ್ಲ ಸಮಸ್ಯೆಗಳಿದ್ದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಕೂಡಲೇ ಸಂಬಂಧಿಸಿದ ಮೇಲಾಧಿಕಾರಿಗಳು ಆಗಮಿಸಿ ಗ್ರಾಮಸ್ಥರ ಹಿತಕಾಯುವಂತೆ ಮನವಿ ಮಾಡಿದರು. ಈ ವೇಳೆ ಪರಶುರಾಮ ಅಗಸಿಬಾಗಿಲ, ಶಿವರಾಜ ದೇಸೂರು, ವೀರೇಶ ದೇಸೂರು, ರಮೇಶ ಬೂದಗಟ್ಟಿ, ಆರ್.ಹನುಮಂತಪ್ಪ ರುದ್ರಪ್ಪ ಹಿರೇಹಳ್ಳಿ ಇತರರಿದ್ದರು.ಗ್ರಾಮದಲ್ಲಿ ನಾಯಿ ಕಚ್ಚಿಸಿಕೊಂಡ ಮಗು ತೀವ್ರಗಾಯಗೊಂಡಿದ್ದು, ಪಾಲಕರು ಸಂಕಷ್ಟದಲ್ಲಿದ್ದಾರೆ, ಪಿಡಿಓ ರಜೆ ಮೇರೆಗೆ ತೆರಳಿರುವ ಮಾಹಿತಿ ಲಭಿಸಿದ್ದು, ತಕ್ಷಣ ಘಟನಾ ಸ್ಥಳಕ್ಕೆ ತೆರಳಿ ಸಮಸ್ಯೆ ಇತ್ಯರ್ಥಪಡಿಸುವಂತೆ ಸೂಚನೆ ನೀಡಿರುವೆ, ಪಂಚಾಯಿತಿ ಮಟ್ಟದಲ್ಲಿ ನೋಡಲ್ ಅಧಿಕಾರಿಗಳ ನೇಮಕವಾಗಿದ್ದು, ಅವರೂ ಸಹ ಕಾರ್ಯಪ್ರವೃತ್ತರಾಗಿದ್ದಾರೆ. ಗುರುವಾರ ಬೆಳಗ್ಗೆ ನೊಂದ ಬಾಲಕನ ಮನೆಗೆ ತೆರಳುವೆ. ತಾಲೂಕಿನಾದ್ಯಂತ ಬೀದಿನಾಯಿ ಹಾವಳಿ ಕಡಿವಾಣಕ್ಕೆ ತುರ್ತುಕ್ರಮ ಕೈಗೊಳ್ಳುವೆ ಎಂದು ತಾಪಂ ಇಒ ಕೆ.ಎಂ. ಮಲ್ಲಿಕಾರ್ಜುನ ಹೇಳಿದರು.