ವೀರಶೈವ, ಲಿಂಗಾಯತ ಒಂದಾಗಬೇಕೆಂದು ಜನ ಬಯಸ್ತಿದೆ

| Published : Sep 09 2025, 01:01 AM IST

ವೀರಶೈವ, ಲಿಂಗಾಯತ ಒಂದಾಗಬೇಕೆಂದು ಜನ ಬಯಸ್ತಿದೆ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ವೀರಶೈವ ಮತ್ತು ಲಿಂಗಾಯತ ಒಂದಾಗಬೇಕು ಎಂಬುದು ಒಂದು ನಿಲುವು, ಬೇರೆ ಬೇರೆಯಾಗಬೇಕು ಎಂಬುದು ಮತ್ತೊಂದು ನಿಲುವಿದೆ. ಆದರೆ, ಬಹುಪಾಲು ಜನರು ವೀರಶೈವ- ಲಿಂಗಾಯತ ಒಂದಾಗಬೇಕು ಎಂದು ಬಯಸುತ್ತಾರೆ. ಕೆಲವರು ಶಿಕ್ಷಣವಂತರು, ನಗರದ ಕೆಲವರು ಪ್ರತ್ಯೇಕವಾಗಿ ಹೋಗಬೇಕು ಎಂದು ಹೇಳುತ್ತಾರೆ ಬೆಂಗಳೂರಿನ ಗೂಳೂರಿನಲ್ಲಿನ ನಿಡುಮಾಮಿಡಿ ಸಂಸ್ಥಾನ ಮಠದ ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ವೀರಶೈವ ಮತ್ತು ಲಿಂಗಾಯತ ಒಂದಾಗಬೇಕು ಎಂಬುದು ಒಂದು ನಿಲುವು, ಬೇರೆ ಬೇರೆಯಾಗಬೇಕು ಎಂಬುದು ಮತ್ತೊಂದು ನಿಲುವಿದೆ. ಆದರೆ, ಬಹುಪಾಲು ಜನರು ವೀರಶೈವ- ಲಿಂಗಾಯತ ಒಂದಾಗಬೇಕು ಎಂದು ಬಯಸುತ್ತಾರೆ. ಕೆಲವರು ಶಿಕ್ಷಣವಂತರು, ನಗರದ ಕೆಲವರು ಪ್ರತ್ಯೇಕವಾಗಿ ಹೋಗಬೇಕು ಎಂದು ಹೇಳುತ್ತಾರೆ ಬೆಂಗಳೂರಿನ ಗೂಳೂರಿನಲ್ಲಿನ ನಿಡುಮಾಮಿಡಿ ಸಂಸ್ಥಾನ ಮಠದ ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 1980ರಿಂದ ಇದು ಚರ್ಚೆಯಾಗುತ್ತಲೆ ಇದೆ. ಇದನ್ನು ಇಷ್ಟು ದೀರ್ಘದವರೆಗೆ ಮುಂದುವರೆಸಬಾರದಿತ್ತು. ಇದೀಗ ಕೇಂದ್ರದಿಂದ ನಡೆಯಲಿರುವ ಜಾತಿ-ಗಣತಿ ಒಳಗಾಗಿ ಇದನ್ನು ವೀರಶೈವ ಲಿಂಗಾಯತ ಮಹಾಸಭಾದವರು ಬಗೆಹರಿಸಬೇಕು. ಸಮಾಜದ ಹಿತದೃಷ್ಟಿಯಿಂದ ವೀರಶೈವ ಲಿಂಗಾಯತ ಮಹಾಸಭೆ ಈ ಕೆಲಸ ಮಾಡಬೇಕು. ಬೇರೆ ಬೇರೆ ವರ್ಗದವರಲ್ಲಿ ಮತದಾನವನ್ನು ಏರ್ಪಡಿಸಿ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.

12ನೇ ಶತಮಾನದಲ್ಲಿ‌ ಮೊದಲ ಕಾಲಘಟ್ಟದಲ್ಲಿ ಹಾಗೂ 16ನೇ ಶತಮಾನದಲ್ಲಿ ಎರಡನೇ ಕಾಲಘಟ್ಟದಲ್ಲಿ ಈ ಸಮಸ್ಯೆ ಇತ್ತು. ಇದೀಗ ಮೂರನೇ ಕಾಲಘಟ್ಟದಲ್ಲಿ 1975ರ ನಂತರ ಈ ಸಮಸ್ಯೆ ಕಾಣಿಸಿಕೊಂಡಿದೆ. ಈಗಲಾದರೂ ವೀರಶೈವ- ಲಿಂಗಾಯತ ಮಹಾಸಭಾ ಇದನ್ನು ಬಗೆಹರಿಸಬೇಕು. ವೀರಶೈವ ಲಿಂಗಾಯತ ಹಿಂದೂ ಧರ್ಮದ ಅಂಗವಲ್ಲ ಇದು ಸ್ವತಂತ್ರ ಧರ್ಮ, ಹಾಗಂತ ಇದು ಹಿಂದೂ ವಿರೋಧಿಯಲ್ಲ. ಹಿಂದೂ ಧರ್ಮದ ಬಹುಸಂಖ್ಯಾತ ಜನರು ಶಿವನ ಭಕ್ತರಾಗಿದ್ದಾರೆ. ವೀರಶೈವ ಲಿಂಗಾಯತರು ಶಿವನ ಭಕ್ತರು. ಹಿಂದೂ ಧರ್ಮವಲ್ಲ, ಅದು ಹಿಂದೂ ಸಂಸ್ಕೃತಿ ಇದೆ. ಆರ್ಯ ಮತ್ತು ದ್ರಾವಿಡ ಧರ್ಮಗಳ ಸಂಸ್ಕೃತಿಯ ಸಂಗಮವೇ ಈ ಹಿಂದೂ ಸಂಸ್ಕೃತಿ ಎಂದು ವಿವರಿಸಿದರು.

ವಿಶ್ವಗುರು ಬಸವಣ್ಣನವರ ಸಾಮಾಜಿಕ, ಧಾರ್ಮಿಕ ಆದರ್ಶಗಳನ್ನು ಯಾರೂ ಪಾಲನೆ ಮಾಡುತ್ತಿಲ್ಲ. ಬಸವಣ್ಣನವರ ಆದರ್ಶಗಳು ವೈಯಕ್ತಿಕ ಲಾಭಕ್ಕಾಗಿ, ರಾಜಕೀಯವಾಗಿ ಬಳಕೆ ಆಗುತ್ತಿರುವುದು ನೋವಿನ ಸಂಗತಿ. ಬಸವಣ್ಣನವರ ಆದರ್ಶಗಳನ್ನು ಪಾಲನೆ ಮಾಡಲು ಆಗುತ್ತದಾ?, ಅದನ್ನು ಪಾಲನೆ ಮಾಡಿದರೆ ಅವರು ಮಹಾನ ಪುರುಷರಾಗುತ್ತಾರೆ ಎಂದರು.

ದಸರಾ ಉದ್ಘಾಟನೆಗೆ ಬಾನು‌ಮುಷ್ತಾಕ ಆಯ್ಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸ್ವಾಮೀಜಿಗಳು, ಮೈಸೂರಿನ ದಸರಾ ಉತ್ಸವ ಎನ್ನುವುದು ನಾಡ ಉತ್ಸವ. ಕನ್ನಡ ನಾಡು ನುಡಿಗಾಗಿ ಶ್ರಮಿಸಿದ ಸಾಧಕರು ಯಾರೇ ಆಗಿದ್ದರು ಅವರು ಒಪ್ಪಿಕೊಂಡು ಪಾಲ್ಗೊಳ್ಳುವುದಾದರೆ ಅದನ್ನು ಸ್ವೀಕಾರ ಮಾಡಬೇಕು. ವಿರೋಧ ಮಾಡಬಾರದು. ಹಿಂದು, ಮುಸ್ಲಿಂ, ಜೈನ, ಬೌದ್ಧ ಯಾರೇ ಇರಲಿ ಸಾಧಕರು ಪಾಲ್ಗೊಳ್ಳುವುದು ತಪ್ಪಿಲ್ಲ. ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ಕೋಮುವಾದವನ್ನು ಹುಟ್ಟುಹಾಕಿದ್ದಾರೆ. ಕೋಮುವಾದದಲ್ಲಿ ಹಿಂದೆ ಜನರು ಭಾಗವಹಿಸುತ್ತಿರಲಿಲ್ಲ. ರಾಜಕೀಯ ಪಕ್ಷಗಳು ಕೋಮುವಾದ ಸೃಷ್ಟಿಸಿ ಜನರು ಭಾಗವಹಿಸಬೇಕೆಂಬ ವಾತಾವರಣ ಸೃಷ್ಟಿಸಿವೆ. ಹಿಂದೂ ಕೋಮವಾದವಾಗಿರಲಿ, ಮುಸ್ಲಿಂ ಕೋಮುವಾದವಾಗಿರಲಿ ಇದನ್ನು ಮಾಡಬಾರದು, ಇದು ದೇಶಕ್ಕೆ ಮಾರಕ ಎಂದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಎಸ್.ಎಸ್.ಪಾಟೀಲ, ಆರ್‌.ಎಸ್.ಪಾಟೀಲ, ಪ್ರಭು ಬೆಳ್ಳಿ ಉಪಸ್ಥಿತರಿದ್ದರು.