ಸಾಮಾಜಿಕ ಹೊಣೆಗಾರಿಕೆ ಮರೆತಿರುವ ಜನರು: ನ್ಯಾ.ಯೋಗೇಶ್ ಬೇಸರ

| Published : Jan 31 2025, 12:46 AM IST

ಸಾಮಾಜಿಕ ಹೊಣೆಗಾರಿಕೆ ಮರೆತಿರುವ ಜನರು: ನ್ಯಾ.ಯೋಗೇಶ್ ಬೇಸರ
Share this Article
  • FB
  • TW
  • Linkdin
  • Email

ಸಾರಾಂಶ

ನಾವು ಉಪಯೋಗಿಸುವ ಗಾಳಿ, ಬೆಳಕು ಮತ್ತು ಆಹಾರ ಉತ್ತಮವಾಗಿಲು ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಎಲ್ಲೆಂದರಲ್ಲಿ ಬಿಸಾಡುವ ಕಸ ಮತ್ತು ತ್ಯಾಜ್ಯ ವಸ್ತುಗಳನ್ನು ತೆರವುಗೊಳಿಸಿ ಸ್ವಚ್ಛತೆ ಮಾಡಲು ಒಂದು ಇಲಾಖೆ ಅಥವಾ ಪೌರಕಾರ್ಮಿಕರಿದ್ದಾರೆ ಎಂಬ ಮನೋಭಾವನೆ ಬಿಟ್ಟು, ಮನೆ ಸುತ್ತಮುತ್ತ ಅಥವಾ ಕೆಲಸ ಮಾಡುವ ಸ್ಥಳದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕಿರುವುದು ನಮ್ಮೆಲ್ಲರ ಸಾಮಾಜಿಕ ಹೊಣೆಗಾರಿಕೆಯಾಬೇಕು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕೆಂಬ ಸಾಮಾಜಿಕ ಹೊಣೆಗಾರಿಕೆ ಮರೆತಿರುವುರಿಂದ ಜನರ ಆರೋಗ್ಯ ಹಾಗೂ ಪರಿಸರದ ಮೇಲೆ ಬಹಳಷ್ಟು ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಯೋಗೇಶ್ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಜನಾ ಇಲಾಖೆ ಹಾಗೂ ಪುರಸಭೆಯ ಸಹಭಾಗಿತ್ವದಲ್ಲಿ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಸ್ವಚ್ಛತಾ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.

ನಾವು ಉಪಯೋಗಿಸುವ ಗಾಳಿ, ಬೆಳಕು ಮತ್ತು ಆಹಾರ ಉತ್ತಮವಾಗಿಲು ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಎಲ್ಲೆಂದರಲ್ಲಿ ಬಿಸಾಡುವ ಕಸ ಮತ್ತು ತ್ಯಾಜ್ಯ ವಸ್ತುಗಳನ್ನು ತೆರವುಗೊಳಿಸಿ ಸ್ವಚ್ಛತೆ ಮಾಡಲು ಒಂದು ಇಲಾಖೆ ಅಥವಾ ಪೌರಕಾರ್ಮಿಕರಿದ್ದಾರೆ ಎಂಬ ಮನೋಭಾವನೆ ಬಿಟ್ಟು, ಮನೆ ಸುತ್ತಮುತ್ತ ಅಥವಾ ಕೆಲಸ ಮಾಡುವ ಸ್ಥಳದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕಿರುವುದು ನಮ್ಮೆಲ್ಲರ ಸಾಮಾಜಿಕ ಹೊಣೆಗಾರಿಕೆಯಾಬೇಕು ಎಂದರು.

ನಮ್ಮ ಸುತ್ತಮುತ್ತಲ ವಾತಾವರಣ ಚೆನ್ನಾಗಿದ್ದರೆ ಒಳ್ಳೆಯ ಗಾಳಿ ಬೆಳಕಿನ ಜೊತೆಗೆ ಆರೋಗ್ಯವೂ ಸಹ ಉತ್ತಮವಾಗಿರುತ್ತದೆ. ಎಲ್ಲೆಂದರಲ್ಲಿ ಕಸ ಬಿಸಾಡುವ ಬದಲು ನಿರ್ಧಿಷ್ಟ ಸ್ಥಳದಲ್ಲಿ ಹಾಕಿದರೆ ಪೌರಕಾರ್ಮಿಕರಿಗೂ ಸಹಾಯ ಮಾಡಿದಂತಾಗುತ್ತದೆ. ಅಲ್ಲದೆ ನಮ್ಮ ಸುತ್ತಮುತ್ತಲ ಪರಿಸರನ್ನು ಕಾಪಾಡಿಕೊಂಡು ಮುಂದಿನ ಪೀಳಿಗೆಗೆ ಒಳ್ಳೆಯ ಗಾಳಿ ಮತ್ತು ಬೆಳಕು ನೀಡಬಹುದು ಎಂದರು.

ಸ್ವಚ್ಛತೆ ಮಾಡುವುದನ್ನು ಒಂದು ಕಾರ್ಯಕ್ರಮಕ್ಕೆ ಸೀಮಿತಗೊಳಿಸದೆ ಇದು ನಮ್ಮಕರ್ತವ್ಯ ಎಂಬ ಭಾವನೆ ಎಲ್ಲರಲ್ಲಿಯೂ ಬರಬೇಕು. ಆಗ ಮಾತ್ರ ಸ್ವಾಸ್ತ್ಯ ಸಮಾಜ ನಿರ್ಮಾಣ ಮಾಡಬಹುದು ಎಂದರು.

ಅಪರ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ನರಸಿಂಹಮೂರ್ತಿ ಮಾತನಾಡಿ, ದೇಶ ಅಥವಾ ರಾಜ್ಯ ಅಭಿವೃದ್ಧಿ ಹೊಂದುವ ಭರದಲ್ಲಿ ನಾವುಗಳು ಸ್ವಚ್ಛತೆಯನ್ನು ಮರೆಯುತ್ತಿದ್ದೇವೆ. ಆರೋಗ್ಯಕರ ರಾಷ್ಟ್ರವಾಗಲು ನಮ್ಮ ಪರಿಸರವೂ ಸ್ವಚ್ಛತೆಯಿಂದ ಕೂಡಿರಬೇಕು. ನಮ್ಮ ಕುಟುಂಬ, ಮನೆ, ಮತ್ತು ಗ್ರಾಮಗಳಲ್ಲೂ ಆರೋಗ್ಯಕರ ವಾತಾವರಣವಿದ್ದರೆ ಒಳ್ಳೆಯ ಆಲೋಚನೆಗಳು ಬೆಳೆಯುತ್ತವೆ. ಆ ಮೂಲಕ ದೇಶವೂ ಸಹ ಮತ್ತಷ್ಟು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದರು.

ಬಳಿಕ ಪೌರ ಕಾರ್ಮಿಕರ ಜೊತೆಗೂಡಿ ನಾಲ್ವರು ನ್ಯಾಯಾಧೀಶರು ಪೊರಕೆ ಹಿಡಿದು ನ್ಯಾಯಾಲಯದ ಆವರಣವನ್ನು ಸ್ವಚ್ಛಗೊಳಿಸಿ ಸರಳತೆ ಮೆರೆದರು. ಸಿವಿಲ್ ನ್ಯಾಯಾಧೀಶ ಎಚ್.ಎಸ್.ಶಿವರಾಜು, ಅಪರ ಸಿವಿಲ್ ನ್ಯಾಯಾಧೀಶ ಕೆ.ಪಿ.ಸಿದ್ದಪ್ಪಾಜಿ, ಪಟ್ಟಣ ಪೊಲೀಸ್‌ಠಾಣೆ ಪಿಎಸ್‌ಐ ಶಿವಕುಮಾರ್, ಮುಖ್ಯಾಧಿಕಾರಿ ಶ್ರೀನಿವಾಸ್, ಅಪರ ಸರ್ಕಾರಿ ವಕೀಲ ಎಲ್.ಎಸ್.ಶಿವಲಿಂಗೇಗೌಡ, ಕಾನೂನು ಸೇವಾ ಸಮಿತಿ ಸಿಬ್ಬಂದಿ ಸೋನುಮೂರ್ತಿ, ರಮೇಶ್ ಸೇರಿದಂತೆ ಪೌರಕಾರ್ಮಿಕರು ಇದ್ದರು.