ಸಾರಾಂಶ
ಕುಷ್ಠರೋಗ ಮುಕ್ತ ರಾಷ್ಟ್ರ ನಿರ್ಮಾಣ ಗಾಂಧೀಜಿ ಕನಸಾಗಿತ್ತು. ಅವರು ಆಶ್ರಮದಲ್ಲಿ ಕುಷ್ಠರೋಗಿಗಳ ಆರೈಕೆ ಸಹ ಮಾಡುತ್ತಿದ್ದರು. ಅವರ ಪುಣ್ಯತಿಥಿ ಅಂಗವಾಗಿ ಆರೋಗ್ಯ ಇಲಾಖೆ ಜಿಲ್ಲೆಯಾದ್ಯಂತ ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನ ಹಮ್ಮಿಕೊಂಡಿದೆ. ಪ್ರಸಕ್ತ ವರ್ಷ ಜಿಲ್ಲೆಯಲ್ಲಿ 65 ಜನ ಕುಷ್ಠರೋಗಿಗಳನ್ನು ಗುರುತಿಸಲಾಗಿದ್ದು, ಅಗತ್ಯವಿರುವ ಚಿಕಿತ್ಸೆ ನೀಡಲಾಗುತ್ತಿದೆ.
ಧಾರವಾಡ:
ಮಹಾತ್ಮ ಗಾಂಧೀಜಿ ಅವರು ತಮ್ಮ ಜೀವನದುದ್ದಕ್ಕೂ ಬೋಧಿಸಿದ ತತ್ವಗಳು ನಮ್ಮ ಜೀವನದ ನಿತ್ಯ ಸತ್ಯಗಳಾಗಿವೆ. ಅವರ ಬದುಕಿನ ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡರೆ ಪರಸ್ಪರ ಪ್ರೀತಿ, ವಿಶ್ವಾಸ, ಭಾವೈಕ್ಯತೆ, ಸಾಮರಸ್ಯ ಮೂಡುತ್ತದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಹಾಗೂ ವಾರ್ತಾ ಇಲಾಖೆ ಸಂಯುಕ್ತವಾಗಿ ಮಹಾತ್ಮ ಗಾಂಧಿ ಅವರ ಪುಣ್ಯತಿಥಿ ನಿಮಿತ್ತ ಬುಧವಾರ ಆಯೋಜಿಸಿದ್ದ ಹುತಾತ್ಮರ ದಿನಾಚರಣೆ ಹಾಗೂ ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದ ಅವರು, ಗಾಂಧೀಜಿ ಯಾವುದೇ ಉಪದೇಶ ಕೊಡುವ ಮೊದಲು ಸ್ವತಃ ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಿದ್ದರು. ಅವರ ನಡೆ, ನುಡಿ ಒಂದಾಗಿತ್ತು. ಅವರ ಸಾರ್ವಜನಿಕ ಜೀವನ ಇತರರಿಗೆ ಮಾದರಿ ಆಗಿತ್ತು ಎಂದರು.
ಅವರ ಬದುಕಿನ ರೀತಿ ಅವರನ್ನು ವಿಶ್ವ ನಾಯಕರನ್ನಾಗಿ ಮಾಡಿತು. ಇಂದಿನ ಅನೇಕ ಸಾಮಾಜಿಕ ಪಿಡುಗಗಳ ಬಗ್ಗೆ ಅಂದೇ ಗಾಂಧೀಜಿ ಹೋರಾಟ ಆರಂಭಿಸಿದ್ದರು. ಸಮಾಜದ ಎಲ್ಲ ವರ್ಗಗಳಲ್ಲಿ ಜಾತಿ, ಧರ್ಮ, ಲಿಂಗ, ವಯಸ್ಸು ಭೇದವಿಲ್ಲದೆ ಸಮಾನತೆ ಕಾಣಬೇಕೆಂಬುದು ಅವರ ಆಶಯ ಮತ್ತು ನಿಲುವು ಆಗಿತ್ತು ಎಂದು ಹೇಳಿದರು.ಕುಷ್ಠರೋಗ ಮುಕ್ತ ರಾಷ್ಟ್ರ ನಿರ್ಮಾಣ ಗಾಂಧೀಜಿ ಕನಸಾಗಿತ್ತು. ಅವರು ಆಶ್ರಮದಲ್ಲಿ ಕುಷ್ಠರೋಗಿಗಳ ಆರೈಕೆ ಸಹ ಮಾಡುತ್ತಿದ್ದರು. ಅವರ ಪುಣ್ಯತಿಥಿ ಅಂಗವಾಗಿ ಆರೋಗ್ಯ ಇಲಾಖೆ ಜಿಲ್ಲೆಯಾದ್ಯಂತ ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನ ಹಮ್ಮಿಕೊಂಡಿದೆ. ಪ್ರಸಕ್ತ ವರ್ಷ ಜಿಲ್ಲೆಯಲ್ಲಿ 65 ಜನ ಕುಷ್ಠರೋಗಿಗಳನ್ನು ಗುರುತಿಸಲಾಗಿದ್ದು, ಅಗತ್ಯವಿರುವ ಚಿಕಿತ್ಸೆ ನೀಡಲಾಗುತ್ತಿದೆ ಎಂದರು. ಇದೇ ವೇಳೆ ಜಿಲ್ಲಾಧಿಕಾರಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಣೆಯ ಗಾಂಧಿ ಭಾರತ ಮರು ನಿರ್ಮಾಣ ಪುಸ್ತಕ ಮತ್ತು ಆರೋಗ್ಯ ಇಲಾಖೆ ಪ್ರಕಟಿಸಿರುವ ಕುಷ್ಠರೋಗ ಜಾಗೃತಿ ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಶಿ ಪಾಟೀಲ ಪ್ರತಿಜ್ಞಾವಿಧಿ ಬೋಧಿಸಿದರು. ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ಎಸ್.ಬಿ. ಕಳಸೂರಮಠ, ಬಿ.ಆರ್. ಪಾತ್ರೋಟ, ಡಾ. ಸುಜಾತಾ ಹಸವೀಮಠ ಹಾಗೂ ವಾರ್ತಾ ಇಲಾಖೆಯ ಡಾ. ಎಸ್.ಎಂ. ಹಿರೇಮಠ ಮತ್ತಿತರರು ಇದ್ದರು.