ಕನ್ನಡಪ್ರಭ ವಾರ್ತೆ ಅರಸೀಕೆರೆ

ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳು ಸಹಜವಾದರೂ ವೈಯಕ್ತಿಕ ನಿಂದನೆ ಮತ್ತು ಅವಹೇಳನದ ಮಾತುಗಳು ಸಾರ್ವಜನಿಕ ಜೀವನಕ್ಕೆ ಗೌರವ ತರುವುದಿಲ್ಲ ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಧರ್ಮಶೇಖರ್ ಹೇಳಿದರು.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಸೇವೆ ಮತ್ತು ಅಭಿವೃದ್ಧಿ ರಾಜಕಾರಣದ ಮುಖ್ಯ ಉದ್ದೇಶವಾಗಬೇಕು. ವ್ಯಕ್ತಿಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವುದಕ್ಕಿಂತ ಜನರ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡುವುದು ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು. ಶಾಸಕ ಶಿವಲಿಂಗೇಗೌಡರ ಜನಪರ ಕಾರ್ಯಗಳು ಹಾಗೂ ಕ್ಷೇತ್ರದ ಅಭಿವೃದ್ಧಿ ದೃಷ್ಟಿಕೋನವನ್ನು ಮೆಚ್ಚಿ ನಾವು ಅವರೊಂದಿಗೆ ಕಾರ್ಯನಿರ್ವಹಿಸುತ್ತಿದ್ದೇವೆ. ರಾಜಕೀಯದಲ್ಲಿ ಟೀಕೆ-ಟಿಪ್ಪಣಿಗಳು ಇರಬಹುದು, ಆದರೆ ಹಿರಿಯರು ಹಾಗೂ ಸಾರ್ವಜನಿಕ ಬದುಕಿನಲ್ಲಿ ಸೇವೆ ಸಲ್ಲಿಸಿರುವವರ ಬಗ್ಗೆ ಮಾತನಾಡುವಾಗ ಸಂಯಮ ಇರಬೇಕು ಎಂದು ಪರೋಕ್ಷವಾಗಿ ಎಚ್ಚರಿಕೆ ನೀಡಿದರು. ತಮ್ಮ ರಾಜಕೀಯ ಪಯಣದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಅಧ್ಯಕ್ಷರಾಗಿ, ಜೊತೆಗೆ ಜಿಲ್ಲಾ ಪಂಚಾಯಿತಿ ಮಟ್ಟದಲ್ಲಿಯೂ ಜನರ ವಿಶ್ವಾಸ ಗಳಿಸಿರುವುದಾಗಿ ತಿಳಿಸಿದ ಅವರು, ಜನಬೆಂಬಲವೇ ತಮ್ಮ ಶಕ್ತಿ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಅಭಿವೃದ್ಧಿ ವಿಚಾರಗಳನ್ನೇ ಆಧಾರವಾಗಿಟ್ಟುಕೊಂಡು ರಾಜಕೀಯ ನಡೆಯಬೇಕು ಎಂದರು.

ಮುಖಂಡ ಯಳವಾರೆ ನಾಗರಾಜ್ ಮಾತನಾಡಿ, ಗ್ರಾಮ ಪಂಚಾಯಿತಿ ಅವಧಿಯಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದು ಬಳಿಕ ಟೀಕೆ ಮಾಡುವುದು ಸೂಕ್ತ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಗಿಜೀಹಳ್ಳಿ ಬಸವರಾಜ್, ರವಿ ನಾಯ್ಕ್, ಜಯಕುಮಾರ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು.