ಸಾರಾಂಶ
-ಜನಮನದಲ್ಲಿ ಭರವಸೆ ಮೂಡಿಸಿದ ಕನ್ನಡಪ್ರಭ ಫೋನ್ ಇನ್ ಕಾರ್ಯಕ್ರಮ । ಕುಡಿವ ನೀರಿನ ಸಮಸ್ಯೆಗಳಿಗೆ ಸ್ಪಂದಿಸಿದ ಜಿ.ಪಂ ಸಿಇಒ ಲವೀಶ
-----ಕನ್ನಡಪ್ರಭ ವಾರ್ತೆ ಯಾದಗಿರಿ
ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕುಡಿವ ನೀರಿನ ಸಮಸ್ಯೆ ಕುರಿತ ಕುಂದುಕೊರತೆ ಆಲಿಸಿ, ಅವುಗಳ ಪರಿಹಾರಕ್ಕೆ ಪಂಚಾಯಿತಿ ಅಧಿಕಾರಿಗಳು ಪ್ರಯತ್ನಿಸುವಲ್ಲಿ, ಜಿ.ಪಂ ಸಿಇಒ ಲವೀಶ ಒರಡಿಯಾ ಅವರೊಂದಿಗೆ "ಕನ್ನಡಪ್ರಭ " ಭಾನುವಾರ ರಂದು ಆಯೋಜಿಸಿದ್ದ ನೇರ ಫೋನ್ ಇನ್ ಕಾರ್ಯಕ್ರಮ ನೀರಿನ ತತ್ವಾರ ಅನುಭವಿಸುತ್ತಿದ್ದ ಗ್ರಾಮೀಣರಿಗೆ ತುಸು ನೆಮ್ಮದಿ ಮೂಡಿಸಿದೆ. ಸಮಸ್ಯೆ ಪರಿಹಾರಕ್ಕೆ ಆಡಳಿತ ಮತ್ತು ಜನರ ನಡುವಿನ ಕೊಂಡಿಯಂತಾದ ಫೋನ್ ಇನ್ ಕಾರ್ಯಕ್ರಮ ಸಕಾರಾತ್ಮಕವಾದ ಹೊಸ ಆಶಾಭಾವ ಮೂಡಿಸಿದೆ.ನಿಗದಿತ ವೇಳೆಯಂತೆ, ಯಾದಗಿರಿಯ "ಕನ್ನಡಪ್ರಭ " ಕಚೇರಿಯಲ್ಲಿ ಬೆಳಿಗ್ಗೆ 10.30ಕ್ಕೆ ಆರಂಭಗೊಂಡ ಫೋನ್ ಇನ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಜಿಲ್ಲಾ ಪಂಚಾಯತ್ ಸಿಇಒ ಲವೀಶ ಒರಡಿಯಾ ಸೇರಿದಂತೆ, ಜಿ.ಪಂ ಉಪ ಕಾರ್ಯದರ್ಶಿ ವಿಜಯಕುಮಾರ ಮಡ್ಡೆ, ಮುಖ್ಯ ಯೋಜನಾಧಿಕಾರಿ ಕೆ. ಕುಮುಲಯ್ಯ, ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಆನಂದ್, ಯಾದಗಿರಿಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಬಸವರಾಜ ಐರೆಡ್ಡಿ, ಶಹಾಪುರದ ಬನ್ನಪ್ಪ, ಸುರಪುರದ ಹನುಮಂತ್ರಾಯ, ಯಾದಗಿರಿಯ ತಾ.ಪಂ ಕಾರ್ಯನಿರ್ವಹಾಕ ಅಧಿಕಾರಿ ಮಹಾದೇವ, ಗುರುಮಠಕಲ್ ಅಂಬರೀಶ, ವಡಗೇರಾದ ಮಲ್ಲಿಕಾರ್ಜುನ ಸಂಗ್ವಾರ್, ಸುರಪುರದ ಬಸವರಾಜ್ ಸಜ್ಜನ್, ಶಹಾಪುರದ ಬಸವರಾಜ್ ಶರಭೈ ಹಾಗೂ ಹುಣಸಗಿಯ ಬಸಣ್ಣ ನಾಯಕ್, ಕುಡಿವ ನೀರಿನ ಜಿಲ್ಲಾಮಟ್ಟದ ಸಹಾಯವಾಣಿ ನೋಡಲ್ ಅಧಿಕಾರಿ ಹಾಗೂ ಸಹಾಯಕ ಕಾರ್ಯದರ್ಶಿ ಜಿಲ್ಲಾ ಪಂಚಾಯತ್ ಕಾರ್ಯದರ್ಶಿ ಜಹೀರ್ ಉಲ್ ಹಸನ್ ಹಾಗೂ ಜಿ.ಪಂ ಸಿಬ್ಬಂದಿ ಆಗಮಿಸಿದ್ದರು.
ಗ್ರಾಮೀಣ ಭಾಗಗಳಲ್ಲಿ ಸಾರ್ವಜನಿಕರು ನೀರಿನ ಕುರಿತ ಕುಂದುಕೊರತೆಗಳನ್ನು ಫೋನ್‌ನಲ್ಲಿ ಹೇಳುವಾಗ, ಇದಕ್ಕೆತಕ್ಷಣಕ್ಕೆ ಸರಿಯಾದ ಸ್ಪಂದನೆ ಮತ್ತು ದೂರುಗಳ ಬಗ್ಗೆ ಸ್ಥಳದಲ್ಲೇ ವಿಚಾರಿಸಿ, ಪರಿಹರಿಸುವ ಹಾಗೂ ಜನರಿಗೆ ಪ್ರತಿಕ್ರಿಯಿಸಲು ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೂ ತಮ್ಮ ಜೊತೆಯಲ್ಲೇ ಇದ್ದರೆ, ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚಿನ ಅನುಕೂಲವಾಗುತ್ತದೆ ಎನ್ನುವಲ್ಲಿ ಸಿಇಒ ಲವೀಶ್, ಅಧಿಕಾರಿಗಳ ಸಮೇತ ಫೋನ್ ಇನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದುದು ವಿಶೇಷವಾಗಿತ್ತು. ಒಂದೂವರೆ ಗಂಟೆ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಜಿಲ್ಲೆಯ ಗುರುಮಠಕಲ್, ಸುರಪುರ, ಶಹಾಪುರ, ಯಾದಗಿರಿ, ವಡಗೇರಾ, ಹುಣಸಗಿ ಮುಂತಾದ ತಾಲೂಕುಗಳ ವಿವಿಧ ಭಾಗಗಳಿಂದ ಫೋನ್ ಸುರಿಮಳೆಗೈದ ಗ್ರಾಮೀಣರು, ಅಲ್ಲಿನ ಸಮಸ್ಯೆಗಳನ್ನು ಜಿ.ಪಂ. ಸಿಇಒ ಲವೀಶ ಅವರ ಗಮನಕ್ಕೆ ತಂದರು.ವಿಶೇಷವಾಗಿ, ಸಮರ್ಪಕ ಅನುಷ್ಠಾನ ಮಾಡುವಲ್ಲಿ ಆದ ನಿರ್ಲಕ್ಷ್ಯದಿಂದಾಗಿ ಹಳ್ಳ ಹಿಡಿದಿರುವ ಜಲ್ ಜೀವನ್ ಮಿಷನ್‌ನ ಅವ್ಯವಸ್ಥೆ, ತುಕ್ಕು ಹಿಡಿದು ಮೂಲೆ ಸೇರಿರುವ ಶುದ್ಧ ಕುಡಿವ ನೀರಿನ ಘಟಕಗಳು, ಕಲುಷಿತ ನೀರಿನಿಂದ ಆರೋಗ್ಯದ ಮೇಲೆ ಉಂಟಾಗುತ್ತಿರುವ ವ್ಯತಿರಿಕ್ತ ಪರಿಣಾಮಗಳು, ಜಲಮೂಲ ಬತ್ತಿಹೋಗಿದ್ದರಿಂದ ಗ್ರಾಮಗಳಿಗೆ ಬೋರ್‌ವೆಲ್ ಹಾಗೂ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸುವಂತೆ ಮುಂತಾದವುಗಳ ಕುರಿತು ಜನರು ಫೋನ್ ಇನ್ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಅವರಿಗೆ ದೂರಿದರು. ಸ್ಥಳೀಯ ಮಟ್ಟದಲ್ಲಿ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಕೆಲವರು, ನೀರಿನ ಸಮಸ್ಯೆ ಬಗೆಹರಿಸುವಲ್ಲಿ ಸಿಇಒ ಅವರೇ ಸಾಕ್ಷಾತ್ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಲಿ ಎಂದು ಕೋರಿದರು.
ಒಂದೂವರೆ ಗಂಟೆಯ ಅವಧಿಯಲ್ಲಿ 40ಕ್ಕೂ ಹೆಚ್ಚು ಬಂದ ಫೋನ್ ಕರೆಗಳಲ್ಲಿ, ಮಹತ್ವಾಕಾಂಕ್ಷಿ ಜಲ್ ಜೀವನ್ ಮಿಷನ್ ಯೋಜನೆಯಲ್ಲಿ ಕಳಪೆ ಕಾಮಗಾರಿ ಹಾಗೂ ನೀರು ಪೂರೈಸುವಲ್ಲಿ ವಿಫಲವಾದ ಬಗ್ಗೆ ಪ್ರತಿ ಕರೆಯಲ್ಲೂ ಜನರ ಬೇಸರ-ಆಕ್ರೋಶ ಎದ್ದು ಕಾಣುತ್ತಿತ್ತು. ಇದಕ್ಕೆ ಪ್ರತಿಯಾಗಿ, ಎಲ್ಲ ಕರೆಗಳನ್ನೂ ಸಾವಧಾನದಿಂದಲೇ ಆಲಿಸಿದ ಸಿಇಒ ಲವೀಶ್, ತಮ್ಮ ಜೊತೆ ಉಪಸ್ಥಿತರಿದ್ದ ವಿವಿಧ ಅಧಿಕಾರಿಗಳಿಂದ ಸಮಸ್ಯೆ ಕುರಿತ ಮಾಹಿತಿ ಪಡೆದು, ಕೆಲವೊಂದನ್ನು ಆಗಿದ್ದಾಂಗಿಯೇ ಬಗೆಹರಿಸುವಲ್ಲಿ ಯಶಸ್ವಿಯಾದರು.ಗುರುಮಠಕಲ್‌ನ ಯಂಪಾಡದಿಂದ ಬಾಬುರಾಯ, ಪಂಚಾಯತ್ ಸದಸ್ಯ ಹನುಮಂತ, ಯಮನೂರಿನ ಮಾರುತಿ, ಗುರುಸುಣಗಿಯ ಅನಂತನಾಗ್ ಹಾಗೂ ಶರಣಗೌಡ, ಹೊನಗೇರಾದ ಎಸ್. ಹೊಸಳ್ಳಿ ಗ್ರಾಮದ ಪಂಚಾಯತ್ ಸದಸ್ಯರಾದ ಮುಕ್ತಾರ್ ಪಟೇಲ್, ಯರಗೋಳದ ಅಬ್ದುಲ್, ಸುರಪುರದ ಕರಿಭಾವಿಯ ರಮೇಶ, ಮುಂಡರಗಿಯ ಸಾಹೇಬರೆಡ್ಡಿ, ಕೋಟಗೇರಾದ ಮೆಹಬೂಬ್ ಸಾಬ್, ಚಿಂತಕುಂಟಾದಿಂದ ಶ್ರೀಕಾಂತರಡ್ಡಿ, ನೀಲಹಳ್ಳಿಯ ಪೀರ್‌ಸಾಬ್, ವಾಗಣಗೇರಾದ ಶಿವರಾಜ್ ಪಾಟೀಲ್, ಹಯ್ಯಾಳದಿಂದ ಸಾಹೇಬಗೌಡ, ಕೂಡ್ಲೂರಿನಿಂದ ಹನುಮಂತ ನಾಯಕ್, ಮಡ್ನಾಳ್‌ದಿಂದ ಮಾಳಪ್ಪ, ದೇವರ ಗೋನಾಲದಿಂದ , ಕಂದಕೂರಿನಿಂದ ಬಸರೆಡ್ಡಿ, ಬಳಿಚಕ್ರದಿಂದ ಹೇಮಂತ, ಕದರಾಪುರದಿಂದ ಶಂಕರ್, ಸಾವೂರಿನಿಂದ ಹನುಮಂತ, ಉಕ್ಕಿನಾಳದ ಶಾಂತಪ್ಪ ಸಾಲೀಮನಿ, ಚೆನ್ನಬಸವ ಸುರಪುರ, ನಾಗರಾಜ ಕಾಡಂಗೇರಾ, ತಾತಾಳಗೇರಾ, ಮುಂಡರಗಿತಯಿಂದ ಸಂಜೀವಕುಮಾರ ಕವಲಿ, ತಾರಕ ಮಾಧ್ವಾರ್, ರಾಜು ಯಕ್ತಾಪುರ, ನಿಂಗಪ್ಪ ಮೈಲಾಪುರ, ಭೀಮಪ್ಪ ಮಾಧ್ವಾರ್, ಶರಣು ನಾಯಕ, ಮಹಾದೇವ ರಸ್ತಾಪುರ, ದೇವಿಕೇರಾ ತಳವಾರ ಮುಂತಾದವರು ಸಿಇಓ ಜೊತೆ ನೇರವಾಗಿ ಮಾತನಾಡಿ, ಅಲ್ಲಿನ ಸಮಸ್ಯೆಗಳ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟರು.
-------17ವೈಡಿಆರ್1: ಯಾದಗಿರಿ ಕನ್ನಡಪ್ರಭ ಕಚೇರಿಯಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಜನರ ಕರೆಗಳಿಗೆ ಪ್ರತಿಕ್ರಿಯಿಸಿ ಸಿಇಒ ಲವೀಶ್ ಒರಡಿಯಾ.
------17ವೈಡಿಆರ್2: ಕನ್ನಡಪ್ರಭ ಕಚೇರಿಯಲ್ಲಿ ಫೋನ್ ಇನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಪಂಚಾಯತ್ ಸಿಇಒ ಹಾಗೂ ಅಧಿಕಾರಿಗಳ ತಂಡ.