ಪುನೀತ್‌ ನಟನೆ, ನಡವಳಿಕೆ ಇಂದಿನ ಕಲಾವಿದರಿಗೆ ಮಾದರಿ: ಎಲ್‌.ಸಂದೇಶ್‌

| Published : Mar 18 2025, 12:34 AM IST

ಪುನೀತ್‌ ನಟನೆ, ನಡವಳಿಕೆ ಇಂದಿನ ಕಲಾವಿದರಿಗೆ ಮಾದರಿ: ಎಲ್‌.ಸಂದೇಶ್‌
Share this Article
  • FB
  • TW
  • Linkdin
  • Email

ಸಾರಾಂಶ

ಸಿನಿಮಾ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮತ್ತು ನಿಜ ಜೀವನದಲ್ಲಿ ಸಹಜತೆ, ವಿನಯವಂತಿಕೆ ಹಾಗೂ ಹೃದಯವಂತಿಕೆಯನ್ನು ಮೈಗೂಡಿಸಿಕೊಂಡಿದ್ದ ಕರ್ನಾಟಕ ರತ್ನ ಪುನೀತ್‌ ರಾಜ್‌ಕುಮಾರ್ ಅವರ ಬದುಕು ಆದರ್ಶನೀಯ ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಬಣ್ಣಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ನಗರದ ಜಿಲ್ಲಾ ಕಾರಾಗೃಹ ಸರ್ಕಲ್‌ನಲ್ಲಿ ಅಪ್ಪು ರೆಸ್ಟೋರೆಂಟ್ ವತಿಯಿಂದ ಪುನೀತ್ ರಾಜ್‌ಕುಮಾರ್ 50ನೇ ಜನ್ಮದಿನೋತ್ಸವದ ಅಂಗವಾಗಿ ಆಯೋಜಿಸಿದ್ದ ರಕ್ತದಾನ ಶಿಬಿರ, ವಿದ್ಯಾರ್ಥಿಗಳಿಗೆ ನೋಟ್‌ಪುಸ್ತಕ ವಿತರಣೆ ಮತ್ತು ಅನ್ನದಾಸೋಹ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.

ಪುನೀತ್ ಕನ್ನಡ ಸಾಂಸ್ಕೃತಿಕ ಲೋಕದ ಆಸ್ತಿ, ಅತ್ಯಲ್ಪ ಅವಧಿಯಲ್ಲಿ ಅವರು ಕೊಟ್ಟಂತಹ ಸದಭಿರುಚಿ, ಮಾನವೀಯ ನೆಲೆಯ ಸಿನಿಮಾಗಳು ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದ್ದವು. ಕುಟುಂಬ ಸಮೇತರಾಗಿ ಚಿತ್ರಮಂದಿರಗಳಿಗೆ ಬರುವ ವಾತಾವರಣ ಸೃಷ್ಟಿಯಾಗಿತ್ತು. ಅವರ ನಟನೆ ಮತ್ತು ನಡವಳಿಕೆ ಇಂದಿನ ಕಲಾವಿದರಿಗೆ ಮಾದರಿ ಆಗಿದೆ ಎಂದರು.

ಸಿನಿಮಾ ಕ್ಷೇತ್ರ ಮಾತ್ರವಲ್ಲದೆ ನಿಜಜೀವನದಲ್ಲಿ ಪುನೀತ್ ಹೀರೋ ಆಗಿದ್ದರು. ಅಸಹಾಯಕರಿಗೆ ಸ್ಪಂದಿಸುವ ಮತ್ತು ಪರೋಪಕಾರದ ಮೂಲಕ ಸಾರ್ಥಕತೆ ಕಂಡುಕೊಳ್ಳುವ ವ್ಯಕ್ತಿತ್ವ ಅವರದಾಗಿತ್ತು. ಅಪ್ಪು ಹುಟ್ಟಿದ ದಿನವನ್ನು ಸರ್ಕಾರ ಯುವಜನರ ಸಾಂಸ್ಕೃತಿಕ ದಿನವನ್ನಾಗಿ ಆಚರಿಸಿ ಆ ಮೂಲಕ ಯುವಕರಲ್ಲಿ ಜನಪರ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದೇವೆ. ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಆಕಾಂಕ್ಷೆ ಇರುವವರಿಗೆ ಅಪ್ಪು ದಾರಿದೀಪ ಎಂದರು.

ಡಿ.ದೇವರಾಜ ಅರಸು ವೇದಿಕೆ ಪ್ರದಾನ ಕಾರ್ಯದರ್ಶಿ ಎಂ.ಕೃಷ್ಣ, ಸಮಾಜ ಸೇವಕ ಪ್ರದೀಪ್ ಯಲಿಯೂರು, ಸಿ.ಸಿದ್ದಶೆಟ್ಟಿ, ಅಪ್ಪು ಅಭಿಮಾನಿ ಬಳಗದ ಯಶವಂತ್, ಚವನ್, ಪ್ರಸನ್ನ, ನಿಶಾಂತ್, ಚಿರಂತ್, ಅಜಿತ್ ಮತ್ತಿತರರಿದ್ದರು.