ಭಾನುವಾರ ಸಂತೆಯ ಅಂಗಡಿ ಉಪಯೋಗಕ್ಕೆ ಯೋಜನೆ ಸಿದ್ಧ

| Published : Jul 17 2025, 12:37 AM IST

ಸಾರಾಂಶ

ಹೋಲ್‌ಸೆಲ್‌ ಮಾರುಕಟ್ಟೆ ಸಮೀಪದಲ್ಲಿದೆ. ಹೋಲ್‌ಸೆಲ್‌ ವಹಿವಾಟು ಮುಗಿಯುತ್ತಿದ್ದಂತೆ ಅಲ್ಲೇ ಚಿಲ್ಲರೆ ವ್ಯಾಪಾರಸ್ಥರು ಕುಳಿತು ವ್ಯಾಪಾರ ಮಾಡುತ್ತಾರೆ. ಹೀಗಾಗಿ ಭಾನುವಾರ ಸಂತೆ ನಿರುಪಯುಕ್ತವಾಗಿತ್ತು. ಜತೆಗೆ ಸಂಜೆಯಾದರೆ ಸಾಕು ಮದ್ಯ ಸೇವಕರ ತಾಣವಾಗುತ್ತಿತ್ತು.

ಶಿವಾನಂದ ಗೊಂಬಿ

ಹುಬ್ಬಳ್ಳಿ: ರೈತರ ಅನುಕೂಲಕ್ಕಾಗಿ ಇಲ್ಲಿನ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ)ಯಲ್ಲಿ ನಿರ್ಮಿಸಿರುವ "ಭಾನುವಾರ ಸಂತೆ "ಯ ಅಂಗಡಿಗಳನ್ನು ನವೀಕರಿಸಿ ಬಾಡಿಗೆ ರೂಪದಲ್ಲಿ ನೀಡಲು ಮುಂದಾಗಿದೆ. ಈ ಮೂಲಕ ನಿರುಪಯುಕ್ತವಾಗಿರುವ ಭಾನುವಾರ ಸಂತೆಯನ್ನು ಉಪಯೋಗಿಸಲು ಯೋಜನೆ ಸಿದ್ಧಪಡಿಸಲಾಗುತ್ತಿದೆ.

ಇಲ್ಲಿನ ಎಪಿಎಂಸಿ ಏಷಿಯಾದ ಎರಡನೆಯ ದೊಡ್ಡ ಎಪಿಎಂಸಿ ಎನಿಸಿದೆ. 434 ಎಕರೆ ಪ್ರದೇಶದಲ್ಲಿ ವಿಸ್ತರಿಸಿರುವ ಎಪಿಎಂಸಿ. 2019ರಲ್ಲಿ ಬರೋಬ್ಬರಿ ₹69.12 ಲಕ್ಷ ಖರ್ಚು ಮಾಡಿ ಭಾನುವಾರ ಸಂತೆಯನ್ನು ನಿರ್ಮಿಸಲಾಗಿತ್ತು. ಇಲ್ಲಿ ರೈತರು, ವರ್ತಕರು, ಯಾರೇ ಆದರೂ ಬಾಡಿಗೆ ಪಡೆದು ತರಕಾರಿ, ಹೂವು, ಹಣ್ಣು- ಹಂಪಲ ಮಾರಾಟ ಮಾಡಲು ನಿರ್ಮಿಸಲಾಗಿತ್ತು. 14 ಮಳಿಗೆಗಳಿರುವ ಭಾನುವಾರ ಸಂತೆ ಅಕ್ಷರಶಃ ವಿಫಲವಾಗಿದೆ. ನಿರ್ಮಾಣ ಮಾಡಿ ಬರೋಬ್ಬರಿ 7 ವರ್ಷ ದಾಟಿದರೂ ಒಂದೇ ಒಂದು ದಿನ ಈ ಭಾನುವಾರ ಸಂತೆಯಲ್ಲಿ ವ್ಯಾಪಾರ ವಹಿವಾಟು ನಡೆಯಲೇ ಇಲ್ಲ. ಹಲವು ಬಾರಿ ಬಾಡಿಗೆಗೆ ಪಡೆದುಕೊಳ್ಳಿ ಎಂದು ಎಪಿಎಂಸಿ ಪ್ರಕಟಣೆ ಹೊರಡಿಸಿದರೂ ಯಾರೊಬ್ಬರು ಬಾಡಿಗೆ ಪಡೆಯಲು ಮುಂದಾಗಲೇ ಇಲ್ಲ.

ಹೋಲ್‌ಸೆಲ್‌ ಮಾರುಕಟ್ಟೆ ಸಮೀಪದಲ್ಲಿದೆ. ಹೋಲ್‌ಸೆಲ್‌ ವಹಿವಾಟು ಮುಗಿಯುತ್ತಿದ್ದಂತೆ ಅಲ್ಲೇ ಚಿಲ್ಲರೆ ವ್ಯಾಪಾರಸ್ಥರು ಕುಳಿತು ವ್ಯಾಪಾರ ಮಾಡುತ್ತಾರೆ. ಹೀಗಾಗಿ ಭಾನುವಾರ ಸಂತೆ ನಿರುಪಯುಕ್ತವಾಗಿತ್ತು. ಜತೆಗೆ ಸಂಜೆಯಾದರೆ ಸಾಕು ಮದ್ಯ ಸೇವಕರ ತಾಣವಾಗುತ್ತಿತ್ತು.

ಈ ಕುರಿತು ಕನ್ನಡಪ್ರಭ ಪತ್ರಿಕೆಯು "ಭಾನುವಾರ ಅಲ್ಲ, ಎಂದೂ ನಡೆಯಲಿಲ್ಲ ಇಲ್ಲಿ ಸಂತೆ! " ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು. ಇದನ್ನು ಗಮನಿಸಿದ ಎಪಿಎಂಸಿ ಕಾರ್ಯದರ್ಶಿಗಳು ಇದೀಗ ಈ ಸಂತೆಯನ್ನು ಉಪಯೋಗಿಸಿಕೊಳ್ಳಲು ಮುಂದಾಗಿದ್ದಾರೆ.

ಅಂಗಡಿಗಳಾಗಿ ಬದಲು: ಭಾನುವಾರ ಸಂತೆಯಲ್ಲಿನ 14 ಮಳಿಗೆಗಳನ್ನು ನವೀಕರಿಸುವುದು. ಕಿರಾಣಿ, ಹೋಟೆಲ್‌ ಸೇರಿದಂತೆ ಬೇರೆ ವಸ್ತುಗಳ ಮಾರಾಟಕ್ಕೆ ಅನುಕೂಲವಾಗುವಂತೆ ನವೀಕರಿಸಿ ಅವುಗಳನ್ನು ಬಾಡಿಗೆ ರೂಪದಲ್ಲಿ ನೀಡುವುದು. ತರಕಾರಿ ಹೂವು, ಹಣ್ಣು ಮಾರಾಟದ ಯೋಚನೆಯನ್ನೇ ಕೈಬಿಡುವುದು. ಇದು ಕಾರ್ಯದರ್ಶಿಗಳ ಯೋಜನೆ. ಇದಕ್ಕಾಗಿ ಎಂಜಿನಿಯರ್‌ಗಳಿಗೆ ಯೋಜನೆ ಸಿದ್ಧಪಡಿಸುವಂತೆ ಸೂಚಿಸಿದ್ದಾರೆ. ಇದೀಗ ಎಂಜಿನಯರ್‌ಗಳು ಯಾವ ರೀತಿ ನವೀಕರಿಸಬೇಕು. ಈಗಿರುವ ಮಳಿಗೆಗಳ ಸೈಜ್‌ ಎಷ್ಟು? ಅವುಗಳನ್ನು ಎಷ್ಟು ಸೈಜಿನ ಮಳಿಗೆಗಳನ್ನಾಗಿ ಮಾಡಬೇಕು. ಇರುವ ಮಳಿಗೆಗಳ ಸಂಖ್ಯೆ ಹೆಚ್ಚಿಸಬೇಕಾ? ಅಥವಾ ಅಷ್ಟೇ ಬಿಡಬೇಕಾ? ಎಂಬ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

ಬಳಿಕ ಆ ಕುರಿತು ಯೋಜನೆ ಸಿದ್ಧಪಡಿಸಿ ಎಪಿಎಂಸಿಗೆ ನೀಡಲಿದ್ದಾರೆ. ತದನಂತರ ಅದನ್ನು ಸರ್ಕಾರಕ್ಕೆ ಕಳುಹಿಸಿ ಅನುಮೋದನೆ ಪಡೆದು ತರಕಾರಿ ಮಾರುಕಟ್ಟೆಯಲ್ಲಿನ ಮಳಿಗೆಗಳನ್ನು ಬೇರೆ ವಸ್ತುಗಳ ಮಾರಾಟಕ್ಕೆ ಬಳಸಲು ಬಾಡಿಗೆ ರೂಪದಲ್ಲಿ ನೀಡಲಾಗುವುದು ಎಂದು ಎಪಿಎಂಸಿ ಮೂಲಗಳು ತಿಳಿಸಿವೆ.

ಒಟ್ಟಿನಲ್ಲಿ ನಿರುಪಯುಕ್ತ ಭಾನುವಾರ ಸಂತೆಯನ್ನು ಉಪಯೋಗಿಸಿಕೊಳ್ಳಲು ಎಪಿಎಂಸಿ ಮುಂದಾಗಿರುವುದು ಒಳ್ಳೆಯ ಬೆಳವಣಿಗೆ. ಇದಕ್ಕೆ ಸಾರ್ವಜನಿಕರ ಮೆಚ್ಚುಗೆಯೂ ಸಿಗುತ್ತಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

ಯಾವ ಉದ್ದೇಶಕ್ಕಾಗಿ ಭಾನುವಾರ ಸಂತೆಯನ್ನು ನಿರ್ಮಿಸಲಾಗಿದೆಯೋ ಅದು ವಿಫಲವಾಗಿದೆ. ಆದಕಾರಣ ಅದರ ಮಳಿಗೆಗಳನ್ನು ಬೇರೆ ವಸ್ತುಗಳ ಮಾರಾಟಕ್ಕೆ ಬಳಸಲು ಯೋಚಿಸಲಾಗುತ್ತಿದೆ. ಈ ಸಂಬಂಧ ಯೋಜನೆ ಸಿದ್ಧಪಡಿಸುವಂತೆ ಎಂಜಿನಿಯರ್‌ಗಳಿಗೆ ಸೂಚಿಸಲಾಗಿದೆ. ಅವರು ವರದಿ ಸಲ್ಲಿಸಿದ ಬಳಿಕ ಸರ್ಕಾರಕ್ಕೆ ವರದಿ ಸಲ್ಲಿಸಿ ಅನುಮೋದನೆ ಪಡೆಯಲಾಗುವುದು ಎಂದು ಹುಬ್ಬಳ್ಳಿ ಎಪಿಎಂಸಿ ಕಾರ್ಯದರ್ಶಿ ಕೆ.ಎಚ್‌. ಗುರುಪ್ರಸಾದ ಹೇಳಿದರು.