ಪಿಎಂ ಸ್ವ ನಿಧಿ ಫಲಾನುಭವಿಗಳಿಂದ ದೇಶದ ಅಭ್ಯುದಯ

| Published : Aug 16 2025, 02:01 AM IST

ಪಿಎಂ ಸ್ವ ನಿಧಿ ಫಲಾನುಭವಿಗಳಿಂದ ದೇಶದ ಅಭ್ಯುದಯ
Share this Article
  • FB
  • TW
  • Linkdin
  • Email

ಸಾರಾಂಶ

ಬೀದಿ ಬದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ ಯೋಜನೆಯಡಿ ದೇಶಾದ್ಯಂತ 68 ಲಕ್ಷ ಬೀದಿ ಬದಿ ವ್ಯಾಪಾರಿಗಳು ಸುಮಾರು ₹14,316 ಕೋಟಿ ಸಾಲ ಪಡೆದಿದ್ದಾರೆ.

ಹುಬ್ಬಳ್ಳಿ: ನಮ್ಮ ಜೀವನ ನಿರ್ವಹಣೆಗೆ ದುಡಿಮೆ ಅನಿವಾರ್ಯವಾಗಿದೆ. ಅದನ್ನೆ ವಿಶ್ವಗುರು ಬಸವಣ್ಣನವರು ಕಾಯಕವೆಂದು ಕರೆದರು. ನಮ್ಮ ದೈನಂದಿನ ಬೇಡಿಕೆಗಳಿಗಾಗಿ ನಾವು ಬೀದಿ ಬದಿಯ ವ್ಯಾಪಾರಸ್ಥರ ಮೇಲೆ ಹೆಚ್ಚು ಅವಲಂಬಿತರಾಗಿದ್ದೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದರು.

ನಗರದ ತಮ್ಮ ಕಚೇರಿಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಸನ್ಮಾನಿಸುವ ಕಾರ್ಯಕ್ರಮದಲ್ಲಿ ದೆಹಲಿಯಿಂದ ವರ್ಚುವಲ್‌ ಮೂಲಕ ಪಾಲ್ಗೊಂಡು ಮಾತನಾಡಿದರು.

ಬೀದಿ ಬದಿ ವ್ಯಾಪಾರಿಗಳಿಗೆ ಯಾವುದೇ ಸೆಕ್ಯುರಿಟಿ ಇಲ್ಲದೆ ಸಾಲ ನೀಡುವ ಮತ್ತು ವ್ಯಾಪಾರಿಗಳನ್ನು ಆತ್ಮ ನಿರ್ಭರರನ್ನಾಗಿಸುವ ಸಲುವಾಗಿ ಅವರ ಹಣಕಾಸಿನ ತೊಂದರೆ ಮನಗಂಡು ಅವರ ಆರ್ಥಿಕ ಅನುಕೂಲಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನಮ್ಮ ಸರ್ಕಾರ ಪ್ರಧಾನಮಂತ್ರಿ ಸ್ವ-ನಿಧಿ ಯೋಜನೆ ಜಾರಿಗೊಳಿಸಿದೆ. ಇಲ್ಲಿವರೆಗೆ ಬೀದಿ ಬದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ ಯೋಜನೆಯಡಿ ದೇಶಾದ್ಯಂತ 68 ಲಕ್ಷ ಬೀದಿ ಬದಿ ವ್ಯಾಪಾರಿಗಳು ಸುಮಾರು ₹14,316 ಕೋಟಿ ಸಾಲ ಪಡೆದಿದ್ದಾರೆ. ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 29,586 ಫಲಾನುಭವಿಗಳು ಸುಮಾರು ₹44.42 ಕೋಟಿ ಸಾಲ ಸೌಲಭ್ಯ ಪಡೆದಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ಸನ್ಮಾನ ಮಾಡಿದ ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪಿಎಂ ಸುರಕ್ಷಾ ಭೀಮಾ ಯೋಜನೆ, ಪಿಎಂ ಜೀವನ್ ಜ್ಯೋತಿ ಭೀಮಾ ಯೋಜನೆ, ಪಿಎಂ ಶ್ರಮಯೋಗಿ ಮಾನ್‌ಧನ್ ಯೋಜನೆ, ಒಂದು ರಾಷ್ಟ್ರ ಒಂದು ಪಡಿತರ ಯೋಜನೆ, ಪಿಎಂ ಸ್ವನಿಧಿ ಸಾಲ ಯೋಜನೆ, ಜನನಿ ಸುರಕ್ಷಾ ಯೋಜನೆ ಸೇರಿದಂತೆ ವಿವಿಧ ಯೋಜನೆಗಳು ಬೀದಿ ಬದಿ ವ್ಯಾಪಾರಿಗಳಿಗೆ ವರದಾನವಾಗಿದೆ ಎಂದು ಹೇಳಿದರು.

ಕುಂದಗೋಳ, ಕಲಘಟಗಿ, ಅಳ್ನಾವರ, ಶಿಗ್ಗಾಂವಿ, ನವಲಗುಂದ ಅಣ್ಣಿಗೇರಿ, ಧಾರವಾಡ-ಹುಬ್ಬಳ್ಳಿ ಸೇರಿದಂತೆ ಇನ್ನಿತರೆ ಕಡೆಗಳಿಂದ ಬಂದಿದ್ದ ಸುಮಾರು 300 ಬೀದಿಬದಿ ವ್ಯಾಪಾರಿಗಳನ್ನು ಸನ್ಮಾನಿಸಲಾಯಿತು.

ಧಾರವಾಡ ಗ್ರಾಮೀಣ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ, ವಿವಿಧ ಮಂಡಳಗಳ ಅಧ್ಯಕ್ಷ ರಾಜು ಕಾಳೆ, ಅಶೋಕ ವಾಲ್ಮೀಕಿ, ಯಲ್ಲಪ್ಪ ಹುಲಿಗೆಪ್ಪನವರ, ಮಂಜುನಾಥ ಗಣಿ, ಪಾಲಿಕೆ ಸದಸ್ಯರು, ಸಚಿವರ ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಬೀದಿ ಬದಿ ವ್ಯಾಪಾರಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆತ್ಮ ನಿರ್ಭರ ನಿಧಿ, ಪಿಎಂ ಸ್ವ-ನಿಧಿ ಯೋಜನೆಯ ಸೌಲಭ್ಯಗಳ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡರು. ಬಿ.ಎಸ್. ದೇವರಮನಿ ಸ್ವಾಗತಿಸಿದರು. ರಾಜು ಕಾಳೆ ನಿರೂಪಿಸಿದರು. ಕಾಲೇಜಿನ ಎನ್.ಸಿ.ಸಿ. ಕೆಡೆಟ್‌ಗಳು ರಾಷ್ಟ್ರಧ್ವಜಕ್ಕೆ ಗೌರವ ಸಮರ್ಪಿಸಿದರು. ಗೋವಿಂದ ಜೋಶಿ ವಂದಿಸಿದರು.