ಸಾರಾಂಶ
ಜಿಲ್ಲೆಯ ಶೃಂಗೇರಿ ತಾಲೂಕಿನ ಗ್ರಾಮವೊಂದರಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಅಪ್ರಾಪ್ತ ಬಾಲಕಿಯ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿ ತಾಯಿ ಸೇರಿದಂತೆ ನಾಲ್ವರನ್ನು ದೋಷಿ ಎಂದು ಚಿಕ್ಕಮಗಳೂರು ಜಿಲ್ಲಾ ತ್ವರಿತಗತಿ ನ್ಯಾಯಾಲಯ ಗುರುವಾರ ತೀರ್ಪು ನೀಡಿದೆ.
ಚಿಕ್ಕಮಗಳೂರು ಜಿಲ್ಲಾ ತ್ವರಿತಗತಿ ನ್ಯಾಯಾಲಯ ತೀರ್ಪು
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಜಿಲ್ಲೆಯ ಶೃಂಗೇರಿ ತಾಲೂಕಿನ ಗ್ರಾಮವೊಂದರಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಬಾಲಕಿಯ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿ ತಾಯಿ ಸೇರಿದಂತೆ ನಾಲ್ವರನ್ನು ದೋಷಿ ಎಂದು ಚಿಕ್ಕಮಗಳೂರು ಜಿಲ್ಲಾ ತ್ವರಿತಗತಿ ನ್ಯಾಯಾಲಯ ಗುರುವಾರ ತೀರ್ಪು ನೀಡಿದೆ.ಬಾಲಕಿ ತಾಯಿ ಗೀತಾ, ಸ್ಮಾಲ್ ಅಭಿ, ಗಿರೀಶ್, ದೀವಿ ಶರಣ್ ಅವರಿಗೆ ಶಿಕ್ಷೆಯ ಪ್ರಮಾಣ ಮಾ.11 ರಂದು ಪ್ರಕಟವಾಗಲಿದೆ.ಘಟನೆ ವಿವರ: ಶೃಂಗೇರಿ ತಾಲೂಕಿನ ಗ್ರಾಮವೊಂದರ ಹೊರ ವಲಯದ ಮನೆಯಲ್ಲಿ ವಾಸವಾಗಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾಭ್ಯಾಸ ಮಾಡುತ್ತಿದ್ದ ಬಾಲಕಿ ಮೇಲೆ ಆಗಾಗ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಈ ಸಂಬಂಧ ಬಾಲಕಿ ಕೊಟ್ಟ ದೂರಿನನ್ವಯ 2021ರ ಜನವರಿ 30 ರಂದು ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು.ಸಂತ್ರಸ್ತ ಬಾಲಕಿ ಹಾಗೂ ನೆರೆ ಹೊರೆಯವರು ಕೊಟ್ಟ ಮಾಹಿತಿ ಮೇರೆಗೆ 53 ಜನರನ್ನು ಪೊಲೀಸರು ಬಂಧಿಸಿದ್ದರು. ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಅತಿ ಹೆಚ್ಚು ಮಂದಿ ಬಂಧಿತರಾದ ಪ್ರಕರಣ ರಾಜ್ಯದಲ್ಲೇ ಮೊದಲನೆಯದು. ಈ ಪ್ರಕರಣ ಮಲೆನಾಡಿನ ಜನರನ್ನು ಬೆಚ್ಚಿ ಬೀಳಿಸಿತ್ತು. ಈ ಪ್ರಕರಣದಲ್ಲಿ ಭಾಗಿಯಾಗಿದ್ದವರ ಬಂಧನಕ್ಕಾಗಿ ಆಗಿನ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಶೃತಿ ಅವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚನೆ ಮಾಡಲಾಗಿತ್ತು.ತನಿಖೆ ಸಂದರ್ಭದಲ್ಲಿ ಒಂದೊಂದು ಅಂಶಗಳು ಬಯಲಿಗೆ ಬಂದವು. ಈ ಪ್ರಕರಣದ ರೂವಾರಿ ತಾಯಿ ಎಂಬ ವಿಷಯ ಬೆಳಕಿಗೆ ಬಂದಿತು. ಅವರೇ ಇದಕ್ಕೆ ಕುಮ್ಮಕ್ಕು ನೀಡುತ್ತಿದ್ದರೆಂಬ ಮಾತು ಕೂಡ ತನಿಖೆ ಸಂದರ್ಭದಲ್ಲಿ ಕೇಳಿ ಬಂದಿತ್ತು. ಸತತ ಮೂರು ವರ್ಷಗಳ ಕಾಲ ವಾದ, ವಿವಾದ ಆಲಿಸಲಾಗಿದ್ದು, ಈ ಪ್ರಕರಣದಲ್ಲಿ 49 ಜನರನ್ನು ಖುಲಾಸೆಗೊಳಿಸಿ, ಇನ್ನುಳಿದ ನಾಲ್ವರು ತಪ್ಪಿತಸ್ಥರೆಂದು ನ್ಯಾಯಾಲಯ ತೀರ್ಪು ನೀಡಿದೆ. ಶಿಕ್ಷೆ ಪ್ರಮಾಣ ಮಾ. 11 ರಂದು ನ್ಯಾಯಾಲಯ ಪ್ರಕಟಿಸಲಿದೆ.