ಕಾಂಗ್ರೆಸ್ ಪಾಲಿಗೆ ಕರ್ನಾಟಕವೇ ಎಟಿಎಂ: ಗೋವಾ ಸಿಎಂ ಡಾ.ಪ್ರಮೋದ್ ಸಾವಂತ್

| Published : Mar 08 2024, 01:50 AM IST

ಕಾಂಗ್ರೆಸ್ ಪಾಲಿಗೆ ಕರ್ನಾಟಕವೇ ಎಟಿಎಂ: ಗೋವಾ ಸಿಎಂ ಡಾ.ಪ್ರಮೋದ್ ಸಾವಂತ್
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆಯಲ್ಲಿ ನಡೆದ ಬಿಜೆಪಿ ಧಾರವಾಡ ಕ್ಲಸ್ಟರ್ ಪ್ರಮುಖರ ಸಭೆಗೆ ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಚಾಲನೆ ನೀಡಿ, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಕಾಂಗ್ರೆಸ್ ಪಕ್ಷದ ಪಾಲಿಕೆ ಕರ್ನಾಟಕವು ಎಟಿಎಂ ಆಗಿದ್ದು, ಎರಡೂ ಕೈಗಳಿಂದ ಜನರಿಂದ ಲೂಟಿ ಮಾಡಿದ ಹಣ‍ವನ್ನು ಕಾಂಗ್ರೆಸ್ಸಿನ ಚಟುವಟಿಕೆಗಳಿಗೆಂದು ಇಲ್ಲಿಂದಲೇ ಹಣ ಕಳಿಸಲಾಗುತ್ತಿದ್ದು, ಇಲ್ಲಿ ಭ್ರಷ್ಟಾಚಾರ, ಕ್ರಿಮಿನಲ್, ಕೋಮುವಾದಿ ಸರ್ಕಾರ ಅಧಿಕಾರದಲ್ಲಿದೆ ಎಂದು ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಆರೋಪಿಸಿದ್ದಾರೆ.

ಇಲ್ಲಿನ ವಿನೋಬ ನಗರದ ದಾ-ಹ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ ಸಮುದಾಯ ಭವನದಲ್ಲಿ ಗುರುವಾರ ಬಿಜೆಪಿ ಧಾರವಾಡ ಕ್ಲಸ್ಟರ್ ಪ್ರಮುಖರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರವೆಂಬುದು ಕಬಡ್ ಆಗಿದ್ದು, ಸಚಿವ ಸಂಪುಟದ ಸದಸ್ಯರೊಬ್ಬರ ಆಪ್ತನ ಮನೆಯಲ್ಲಿ ಕೋಟ್ಯಾಂತರ ರು. ಹಣ ಸಿಕ್ಕಿದ್ದು, ಆ ಪಕ್ಷದ ರಾಷ್ಟ್ರೀಯ ನಾಯಕರಿಗೆ ಈಗ ಕರ್ನಾಟಕವೇ ಅಕ್ಷರಶಃ ಎಟಿಎಂ ಆಗಿದೆ ಎಂದರು.

ಜಾತಿ, ಧರ್ಮಗಳ ವಿಭಜನೆಯ ಆದಾರದಲ್ಲಿ ಕಾಂಗ್ರೆಸ್ ಇಲ್ಲಿ ಆಡಳಿತ ನಡೆಸುತ್ತಿದೆ. ಕೇಂದ್ರ, ರಾಜ್ಯದಲ್ಲಿ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರವಿದ್ದಾಗ ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗಿದ್ದವು. ಕಾಂಗ್ರೆಸ್ ಅಧಿಕಾರಕ್ಕೆ ಬಂದ 10 ತಿಂಗಳಲ್ಲೇ ಎಲ್ಲಾ ಅಭಿವೃದ್ಧಿ ಕಾರ್ಯ ನಿಂತು ಹೋಗಿವೆ. ಕಾಂಗ್ರೆಸ್ ಆಳ್ವಿಕೆಯಲ್ಲಿ ಭ್ರಷ್ಟಾಚಾರ ದ್ವಿಗುಣವಾಗಿವೆ. ಎರಡೂ ಕೈಗಳಿಂದ ಜನರನ್ನು ಲೂಟಿ ಮಾಡಿ, ಕಾಂಗ್ರೆಸ್ಸಿನ ಚಟುವಟಿಕೆಗಳಿಗೆ ಇಲ್ಲಿಂದಲೇ ಹಣ ಕಳಿಸಲಾಗುತ್ತಿದೆ ಎಂದು ಅವರು ದೂರಿದರು.

ಕಾಂಗ್ರೆಸ್ ಸರ್ಕಾರವ ಇಲ್ಲಿ ಜಾತಿ, ಧರ್ಮ ವಿಭಜನೆ ಆದಾರದಲ್ಲಿ ಆಡಳಿತ ನಡೆಸಿದೆ. ಸಮಗ್ರ ಅಭಿವೃದ್ಧಿ, ಜನರಿಗೆ ಮೂಲ ಸೌಕರ್ಯ ಒದಗಿಸುವುದರಿಂದ ರಾಜ್ಯದ ಅಭಿವೃದ್ಧಿ ಸಾಧ್ಯವೆಂಬುದನ್ನೇ ಇಲ್ಲಿನ ಸರ್ಕಾರ ಮರೆತಿದೆ. ಈಚೆಗೆ ದೇವಸ್ಥಾನಗಳ ಹುಂಡಿಯಲ್ಲಿನ ಹಣಕ್ಕೂ ಕಾಂಗ್ರೆಸ್ ಸರ್ಕಾರ ಕೈ ಹಾಕಿತ್ತು. ಆದರೆ, ಜನರ ತೀವ್ರ ವಿರೋಧದ ಕಾರಣಕ್ಕಾಗಿ ದೇವರ ಹುಂಡಿ, ದೇವಸ್ಥಾನದ ಹುಂಡಿಗಳಿಗೆ ಕಾಂಗ್ರೆಸ್ ಕೈ ಹಾಕುವುದನ್ನು ಬಿಟ್ಟಿತಷ್ಟೇ ಎಂದು ಅವರು ಟೀಕಿಸಿದರು.

ಪಿಎಫ್‌ಐ ಚಟುವಟಿಕೆಗಳು ಮತ್ತೆ ರಾಜ್ಯದಲ್ಲಿ ಹೆಚ್ಚುತ್ತಿವೆ. ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟವಾಗಿದೆ. 10 ತಿಂಗಳಲ್ಲಿ ಸರ್ಕಾರದ ನೀತಿಯ ಕಾರಣದಿಂದಾಗಿಯೇ 500ಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಒಳಗಾಗಿದ್ದಾರೆ. ರಾಜ್ಯದಲ್ಲಿ ಜನ ಸಾಮಾನ್ಯರು, ಸಾಧು-ಸಂತರು, ರೈತರು ಯಾರೂ ಸಹ ಸುರಕ್ಷಿತ ವಾಗಿಲ್ಲವೆಂಬಂತಹ ವಾತಾವರಣ ಇದೆ. ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುನ್ನ 10 ಕೆಜಿ ಅಕ್ಕಿ ಉಚಿತವಾಗಿ ನೀಡುವುದಾಗಿ ಭರವಸೆ ನೀಡಿತ್ತು. ಈವರೆಗೆ ಕಾಂಗ್ರೆಸ್ ಸರ್ಕಾರ ಅಕ್ಕಿಯನ್ನೇ ಕೊಟ್ಟಿಲ್ಲ. ಬರೀ ಸುಳ್ಳು ಹೇಳಿ ಕಾಲಹರಣ ಮಾಡುತ್ತಿದೆ. ಇಲ್ಲಿನ ಸರ್ಕಾರ ನೀಡುತ್ತಿರುವ ಗ್ಯಾರಂಟಿಗಳಿಗೆ ಇನ್ನೂ ಗ್ಯಾರಂಟಿ ಇಲ್ಲ ಎಂದು ಅವರು ವ್ಯಂಗ್ಯವಾಡಿದರು.

ವಿಪ ಸದಸ್ಯ ಕೆ.ಎಸ್.ನವೀನ ಮಾತನಾಡಿ, ಶೀಘ್ರವೇ ಲೋಕಸಭೆ ಚುನಾವಣೆಯಲ್ಲಿ ಧಾರವಾಡ ಕ್ಲಸ್ಟರ್‌ನ ಎಲ್ಲಾ ನಾಲ್ಕೂ ಲೋಕಸಭಾ ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲಲಿದೆ. ನರೇಂದ್ರ ಮೋದಿ ಮೂರನೇ ಅವಧಿಗೆ ಪ್ರಧಾನಿಯಾಗುವ ಸುವರ್ಣ ಅವಕಾಶ ಇದೆ. ಕ್ಲಸ್ಟರ್ ಉಸ್ತುವಾರಿ, ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಜಿಲ್ಲೆಯ ಚಟುವಟಿಕೆಗಳು, ಇತರೆ ಆಂತರಿಕ ವಿಷಯಗಳ ಬಗ್ಗೆ ಮಾಹಿತಿಗಾಗಿ ಇಲ್ಲಿಗೆ ಭೇಟಿ ನೀಡಿದ್ದಾರೆ ಎಂದರು.

ಸಂಸದ, ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ, ಹರಿಹರ ಶಾಸಕ ಬಿ.ಪಿ.ಹರೀಶ ಗೌಡ, ಕೆ.ಎಸ್.ಚನ್ಬಸಪ್ಪ ಚನ್ನಿ, ಎಂ.ಚಂದ್ರಪ್ಪ, ಚಂದ್ರು ಲಮಾಣಿ, ಮಹೇಶ ಟೆಂಗಿನಕಾಯಿ, ಬಿ.ಎ.ಬಸವರಾಜ ಭೈರತಿ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ, ಮಾಜಿ ಶಾಸಕ ಪ್ರೊ.ಎನ್.ಲಿಂಗಣ್ಣ, ಕಳಕಪ್ಪ ಬಂಡಿ, ಸೀಮಾ ಮಸೂತಿ, ಅರುಣ ಕುಮಾರ ಪೂಜಾರ, ಡಾ.ಎ.ಎಚ್.ಶಿವಯೋಗಿಸ್ವಾಮಿ, ಜಿ.ತಿಪ್ಪಾರೆಡ್ಡಿ, ಎಂ.ಬಸವರಾಜ ನಾಯ್ಕ, ಬಸವರಾಜ ಕೇಲಗಾರ, ಎ.ಮುರುಳಿ, ತಿಪ್ಪಣ್ಣ ಮಜ್ಜಿಗೆ, ನಿಂಗಪ್ಪ ಸುತ್ತಗಟ್ಟಿ, ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೇಬಾಳು, ಅನಿಲಕುಮಾರ ನಾಯ್ಕ ಇತರರು ಇದ್ದರು.

ಲೋಕಸಭೆಯಲ್ಲಿ ಬಿಜೆಪಿಗೆ 370, ಎನ್‌ಡಿಎಗೆ 400+: ಗೋವಾ ಸಿಎಂ

ದಾವಣಗೆರೆ: ಲೋಕಸಭೆ ಚುನಾವಣೆ-2024ರಲ್ಲಿ ಬಿಜೆಪಿ ಸ್ವತಂತ್ರವಾಗಿ 370 ಕ್ಷೇತ್ರ ಸೇರಿದಂತೆ ಎನ್‌ಡಿಎ ಮೈತ್ರಿಕೂಟವು 400ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ ಸಾವಂತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ವಿನೋಬ ನಗರದ ದಾ-ಹ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ ಸಮುದಾಯ ಭವನದಲ್ಲಿ ಗುರುವಾರ ಬಿಜೆಪಿ ಧಾರವಾಡ ಕ್ಲಸ್ಟರ್ ಪ್ರಮುಖರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ 2014ರಿಂದ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರವು ಕಿಸಾನ್ ಶಕ್ತಿ, ನಾರಿ ಶಕ್ತಿ, ಯುವಶಕ್ತಿ, ಬಡವರ ಉದ್ಧಾರವೆಂಬ ನಾಲ್ಕು ಅಡಿಪಾಯಗಳ ಆದಾರದಲ್ಲಿ ಅಂತ್ಯೋದಯ, ಗ್ರಾಮೋದಯ, ಸರ್ವೋದಯ ಅಂಶದೊಂದಿಗೆ ಅಧಿಕಾರ ನೀಡುತ್ತಿದೆ ಎಂದರು.

ಹಿಂದೆ 2004ರಿಂದ 2014ರವರೆಗೆ ಡಾ.ಮನಮೋಹನ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರ ಒಂದೇ ಒಂದು ಜನೋಪಯೋಗಿ ಕಾರ್ಯಕ್ರಮ, ಯೋಜನೆ ಜಾರಿಗೆ ತಂದಿಲ್ಲ. ಹಾಗಾಗಿಯೇ ಸ್ವತಃ ಡಾ.ಮನಮೋಹನ ಸಿಂಗ್‌ರಿಗೆ ಜನೋಪಯೋಗಿ ಕಾರ್ಯಕ್ರಮಗಳೂ ನೆನಪಿಗೆ ಬರುವುದಿಲ್ಲ. ಕಲ್ಲಿದ್ದಲು, ಕಾಮನ್‌ವೆಲ್ತ್‌, 2 ಜಿ, 4 ಜಿ ಹಗರಣಗಳನ್ನು ಇಂದಿಗೂ ಜನರು ಮರೆತಿಲ್ಲ. ಯುಪಿಎ ಆಳ್ವಿಕೆಯಲ್ಲಿ ಯಾವುದಾದರೂ ಒಂದೇ ಒಂದು ಜನಪರ ಕಾರ್ಯಕ್ರಮದ ಬಗ್ಗೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನೊಂದಿಗೆ ಚರ್ಚೆಗೆ ಬರಲಿ ಎಂದು ಅವರು ನೇರ ಸವಾಲೆಸೆದರು.ಮನಮೋಹನ ಸಿಂಗ್‌- ಮೋದಿ ಸಾಧನೆ ಬಗ್ಗೆ ಚರ್ಚೆಗೆ ಬನ್ನಿ

ದಾವಣಗೆರೆ: ಡಾ.ಮನಮೋಹನ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ 10 ವರ್ಷದ ಸಾಧನೆ ಹಾಗೂ ನರೇಂದ್ರ ಮೋದಿ ನೇತೃತ್ವದ ಯುಪಿಎ ಸರ್ಕಾರದ ಕಳೆದೊಂದು ದಶಕದ ಸಾಧನೆ ಬಗ್ಗೆ ಬಹಿರಂಗ ಚರ್ಚೆಗೆ ಬರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಮುಕ್ತ ಸವಾಲು ಹಾಕಿದ್ದಾರೆ.

ನಗರದ ದಾವಣಗೆರೆ ಹರಿಹರ ಸಹಕಾರ ಭವನದಲ್ಲಿ ನಡೆದ ಲೋಕಸಭಾ ಚುನಾವಣೆ ಸಿದ್ಧತೆಗಾಗಿ ಬಿಜೆಪಿಯ ಧಾರವಾಡ ಕ್ಲಸ್ಟರ್‌ನ ಪ್ರಮುಖರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ನಿಮ್ಮ ಮನಮೋಹನ ಸಿಂಗ್‌ರ ಸರ್ಕಾರದ ಸಾಧನೆ ಬಗ್ಗೆ ನೀವು ಬನ್ನಿ, ನರೇಂದ್ರ ಮೋದಿ ಸರ್ಕಾರದ ಯೋಜನೆ, ಕಾರ್ಯಕ್ರಮ, ಜನಪರ ಕಾರ್ಯಗಳ ಬಗ್ಗೆ ನಾನು ಚರ್ಚೆಗೆ ಬರುತ್ತೇನೆ ಎಂದರು.

ನಿಮಗೆ ಬೇಕಾದ ಸುದ್ದಿ ವಾಹಿನಿಯಲ್ಲಿ ಕರ್ನಾಟಕ ಸಿಎಂ ಚರ್ಚೆಗೆ ಬರಲಿ. ನಾನು ಸಿದ್ಧನಿದ್ದೇನೆ, ಯುಪಿಎ-ಎನ್‌ಡಿಎ ಸರ್ಕಾರಗಳ ಸಾಧನೆ ಬಗ್ಗೆ ಚರ್ಚೆಗೆ ನಾನು ಸಿದ್ಧನಿದ್ದೇನೆ. ಮಹಿಳೆಯರು, ಯುವಕರು, ರೈತರನ್ನು ದೃಷ್ಟಿಯಲ್ಲಿಟ್ಟುಕೊಂಡು ಮೋದಿ ಕೆಲಸ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ ಪೊರಕೆ ಹಿಡಿದು, ದೇಶ ಸ್ವಚ್ಛ ಮಾಡಿದ್ದಾರೆ. ಗಾಂಧೀಜಿ ಬಳಿಕ ಹೀಗೆ ಪೊರಕೆ ಹಿಡಿದು, ಬೀದಿಗಿಳಿದವರೆಂದರೆ ಅದು ಮೋದಿ ಮಾತ್ರ ಎಂದು ಅವರು ತಿಳಿಸಿದರು.ಪ್ರಧಾನ ಮಂತ್ರಿ ಆವಾಸ್‌ ಯೋಜನೆ ಮನೆಯನ್ನು ಮಹಿಳೆಯ ಹೆಸರಿಗೆ ಮೋದಿ ಮಾಡಿದ್ದಾರೆ. ಮುದ್ರಾದಡಿ ಗ್ಯಾರಂಟಿ ಇಲ್ಲದೇ, 2 ಲಕ್ಷ ರು. ಸಾಲ ನೀಡಲಾಗು ತ್ತದೆ. ದೇಶದ ಸಮಸ್ತರು ಸೋದರರಂತೆ ಬಾಳುವ ಅವಕಾಶವನ್ನು ಮೋದಿ ಕಾಲದಲ್ಲಿ ಆಗಿದೆ. ತ್ರಿವಳಿ ತಲಾಕ್ ರದ್ಧುಪಡಿಸಿ, ಮುಸ್ಲಿಂ ಮಹಿಳೆಯರು, ತಾಯಂದಿರು, ಹೆಣ್ಣು ಹೆತ್ತವರ ಕುಟುಂಬದ ಸಂಕಷ್ಟಕ್ಕೆ ನರೇಂದ್ರ ಮೋದಿ ಸ್ಪಂದಿಸಿದ್ದಾರೆ. ಕಾಂಗ್ರೆಸ್ ಬರೀ ಜನರಿಗೆ ಕೈ ತೋರಿಸುವ ಕೆಲಸ ಮಾಡಿತೆ ಹೊರತು ಕೈಗಳಿಗೆ ಕೆಲಸ ಕೊಡುವ ಕೆಲಸವನ್ನು ಮಾಡಲೇ ಇಲ್ಲ ಎಂದು ಅವರು ಟೀಕಿಸಿದರು.

ಪ್ರಿಯಾಂಕ ಖರ್ಗೆ ಸೂಪರ್ ಸಿಎಂ, ಉಳಿದವರು ನೆಪಕ್ಕೆ!

ಕರ್ನಾಟಕದಲ್ಲಿ ಈಗ ಐವರು ಮುಖ್ಯಮಂತ್ರಿಗಳಿದ್ದಾರೆ. ಸೂಪರ್ ಸಿಎಂ ಮಾತ್ರ ಪ್ರಿಯಾಂಕ ಖರ್ಗೆ. ಹೆಸರಿಗೆ ಮಾತ್ರ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ, ಡಾ.ಜಿ. ಪರಮೇಶ್ವರ, ಸತೀಶ ಜಾರಕಿಹೊಳಿ ರೇಸ್‌ನಲ್ಲಿದ್ದಾರೆ. ಅತ್ತ ಡಾ.ಯತೀಶ ಸಿದ್ದರಾಮಯ್ಯ ಸಹ ಮುಖ್ಯಮಂತ್ರಿಯಂತೆ ವರ್ತಿಸುತ್ತಿದ್ದಾರೆ. ಕಾಂಗ್ರೆಸ್ಸಿನವರು ಕೇವಲ ಗಾಂಧಿ ಪರಿವಾರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯಲ್ಲಿ ನಾಯಿಗೆ ತಿನ್ನಿಸುವ ಬಿಸ್ಕತ್ತನ್ನು ಕಾರ್ಯಕರ್ತನಿಗೆ ತಿನ್ನಿಸಿ ದ್ದಾರೆ. ಇದು ಕಾಂಗ್ರೆಸ್ಸಿನವರ ಕಥೆ ಎಂದು ಡಾ.ಪ್ರಮೋದ ಸಾವಂತ್ ಹೇಳಿದರು.