ಹಿಟ್ ಅಂಡ್ ರನ್ ಪ್ರಕರಣ: ಸಿಸಿ ಕ್ಯಾಮರಾ, ಎಂಜಿನ್ ದೋಷ ಬಗ್ಗೆ ಪೊಲೀಸ್ ತನಿಖೆ
KannadaprabhaNewsNetwork | Published : Oct 20 2023, 01:00 AM IST
ಹಿಟ್ ಅಂಡ್ ರನ್ ಪ್ರಕರಣ: ಸಿಸಿ ಕ್ಯಾಮರಾ, ಎಂಜಿನ್ ದೋಷ ಬಗ್ಗೆ ಪೊಲೀಸ್ ತನಿಖೆ
ಸಾರಾಂಶ
ಹಿಟ್ಟ್ ಆ್ಯಂಡ್ಡ್ ರನ್ನ್ ಕೇಸ್ಸ್; ಪೊಲೀಸರಿಂದ ತನಿಖೆ ಆರಂಭ
ಕನ್ನಡಪ್ರಭ ವಾರ್ತೆ ಮಂಗಳೂರು ನಗರದ ಲೇಡಿಹಿಲ್ ಬಳಿ ಬುಧವಾರ ಸಂಭವಿಸಿದ ಹಿಟ್ ಆಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಘಟನಾ ಸ್ಥಳ ಮತ್ತು ಕಾರು ಸಂಚರಿಸಿದ ಇತರ ಸ್ಥಳಗಳ ಸಿಸಿ ಕ್ಯಾಮರಾ ಫೂಟೇಜ್ ಹಾಗೂ ಕಾರಿನಲ್ಲಿ ಏನಾದರೂ ತಾಂತ್ರಿಕ ಸಮಸ್ಯೆ ಉಂಟಾಗಿತ್ತೇ ಎನ್ನುವ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಘಟನೆಯಲ್ಲಿ ಸುರತ್ಕಲ್ ಸಮೀಪದ ಕಾನ ಬಾಳ ಬಳಿಯ ನಿವಾಸಿ ರೂಪಶ್ರೀ (೨೩) ಅವರು ಮೃತಪಟ್ಟು, ಇತರ ನಾಲ್ವರು ಯುವತಿಯರು ಗಾಯಗೊಂಡಿದ್ದರು. ಕಾರು ಚಾಲಕ ಕಮಲೇಶ್ ಬಲದೇವ್ ಎಂಬಾತನ ನಿರ್ಲಕ್ಷ್ಯದ ಚಾಲನೆಯೇ ಘಟನೆಗೆ ಕಾರಣ ಎಂದು ಆರೋಪಿಸಲಾಗಿದ್ದು, ಈ ಬಗ್ಗೆ ಕೇಸು ಕೂಡ ದಾಖಲಾಗಿದೆ. ಆರೋಪಿ ಚಾಲಕನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, ಮದ್ಯ ಸೇವಿಸಿರುವುದಕ್ಕೆ ಸಂಬಂಧಿಸಿದಂತೆ ಪುರಾವೆ ಸಿಕ್ಕಿಲ್ಲ. ಕಾರಿನ ಎಂಜಿನ್ ಓವರ್ ಹೀಟ್ ಆಗಿ ನಿಯಂತ್ರಣ ತಪ್ಪಿದೆ ಎಂದು ವಿಚಾರಣೆ ವೇಳೆ ಆರೋಪಿ ಕಾರು ಚಾಲಕ ತಿಳಿಸಿದ್ದು, ಈ ನಿಟ್ಟಿನಲ್ಲಿ ಕಾರಿನಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದೆಯೇ ಎಂಬ ಬಗ್ಗೆ ತಂತ್ರಜ್ಞರಿಂದ ಪರಿಶೀಲನೆಗೆ ಒಳಪಡಿಸಲಾಗುತ್ತಿದೆ. ಜತೆಗೆ ಸಿಸಿ ಕೆಮರಾ ಫೂಟೇಜ್‌ಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತ ಸಂದರ್ಭ ಕಾರು ಚಾಲಕ ಮೊಬೈಲ್ ನೋಡುತ್ತಿದ್ದನೇ ಎನ್ನುವ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಒಂದು ಕೈಯಲ್ಲಿ ಮೊಬೈಲ್ ಹಿಡಿದುಕೊಂಡಾಗ ಕಾರಿನ ಸ್ಟಿಯರಿಂಗ್ ಮೇಲಿನ ನಿಯಂತ್ರಣ ಕಳೆದುಕೊಂಡು ಕಾರು ಎಡಕ್ಕೆ ಚಲಿಸಿ ಫುಟ್‌ಪಾತ್ ಮೇಲಕ್ಕೆ ಏರಿರುವ ಸಾಧ್ಯತೆಯೂ ಇದೆ. ಆ ಹಿನ್ನೆಲೆಯಲ್ಲಿ ಪೊಲೀಸರು ಅಪಘಾತ ಸ್ಥಳಕ್ಕಿಂತ ಹಿಂದಿನ ಸಿಸಿ ಕ್ಯಾಮರಾ ಫೂಟೇಜ್‌ಗಳ ಪರಿಶೀಲನೆ ನಡೆಸುತ್ತಿದ್ದಾರೆ.