ಹಾವೇರಿ: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಕಾನಸ್ಟೇಬಲ್ (ಸಿವಿಲ್) ಹುದ್ದೆಗಳ ನೇರ ನೇಮಕಾತಿ ಹಿನ್ನೆಲೆಯಲ್ಲಿ ನಗರ ಸೇರಿದಂತೆ ಜಿಲ್ಲೆಯ ೩೦ ಪರೀಕ್ಷಾ ಕೇಂದ್ರಗಳಲ್ಲಿ ಭಾನುವಾರ ಲಿಖಿತ ಪರೀಕ್ಷೆ ಬಹುತೇಕ ಶಾಂತಿಯುತವಾಗಿ ನಡೆಯಿತು.ಪೊಲೀಸ್ ಕಾನಸ್ಟೇಬಲ್ ಪರೀಕ್ಷೆಯನ್ನು ಪಾರದರ್ಶಕವಾಗಿ ಹಾಗೂ ವ್ಯವಸ್ಥಿತವಾಗಿ ನಡೆಸಲು ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿತ್ತು. ಪರೀಕ್ಷೆ ಬಹಳ ಸೂಕ್ಷ್ಮವಾಗಿದೆ, ಎಷ್ಟೇ ಅನುಭವ ಇದ್ದರೂ ಪ್ರತಿ ಪರೀಕ್ಷೆಯನ್ನು ಸವಾಲಾಗಿ ಸ್ವೀಕರಿಸಬೇಕು. ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಲಾದ ಅಧಿಕಾರಿಗಳು, ಮಾರ್ಗಾಧಿಕಾರಿಗಳು, ವೀಕ್ಷಕರು, ಕೊಠಡಿ ಮೇಲ್ವಿಚಾರಕರು ತಮ್ಮ ಕರ್ತವ್ಯಗಳಲ್ಲಿ ಯಾವುದೇ ತಪ್ಪುಗಳು ಆಗದಂತೆ ಜವಾಬ್ದಾರಿಯಿಂದ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಬೇಕು. ಅನಾವಶ್ಯಕ ಗೊಂದಲ ಮಾಡಿಕೊಳ್ಳದೆ, ಯಾವುದೇ ಅಪಸ್ವರ ಬರದಂತೆ ಕಾರ್ಯನಿರ್ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸಭೆಯನ್ನು ನಡೆಸಿ ಸೂಚನೆಯನ್ನು ಕೊಟ್ಟಿದ್ದರು. ಪರೀಕ್ಷೆ ಪ್ರಶ್ನೆ ಪತ್ರಿಕೆ ಸ್ವೀಕೃತಿ ಹಾಗೂ ವಿತರಣೆ ವ್ಯವಸ್ಥೆಗೆಂದು ತ್ರಿಸದಸ್ಯ ಕಮಿಟಿಯನ್ನು ರಚಿಸಲಾಗಿತ್ತು.ಭಾನುವಾರ ಬೆಳಗ್ಗೆ ೧೦.೩೦ರಿಂದ ೧೨ ಗಂಟೆಯವರೆಗೆ ಪರೀಕ್ಷಾ ಅವಧಿ ನಿಗದಿಪಡಿಸಿತ್ತು. ಪರೀಕ್ಷಾರ್ಥಿಗಳು ೯.೩೦ ಗಂಟೆಯೊಳಗಾಗಿ ಬಹುತೇಕ ಕೇಂದ್ರಗಳಲ್ಲಿ ಹಾಜರಿದ್ದರು. ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ, ಸಿಸಿ ಕ್ಯಾಮೆರಾ ಅಳವಡಿಕೆ, ಗಡಿಯಾರದ ವ್ಯವಸ್ಥೆ, ಕುಡಿಯುವ ನೀರು, ಬೆಳಕಿನ ವ್ಯವಸ್ಥೆ ಹೀಗೆ ಎಲ್ಲ ಮೂಲ ಸೌಕರ್ಯ ಕಲ್ಪಿಸಲಾಗಿತ್ತು. ಪರೀಕ್ಷಾ ಕೇಂದ್ರದೊಳಗೆ ಮೊಬೈಲ್, ಕ್ಯಾಲ್ಕುಲೇಟರ್ ಸೇರಿ ಎಲೆಕ್ಟ್ರಾನಿಕ್ ಉಪಕರಣ ನಿಷೇಧಿಸಲಾಗಿತ್ತು. ವಸ್ತ್ರ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಲಾಗಿತ್ತು. ಪರೀಕ್ಷಾ ಕೇಂದ್ರದ ೨೦೦ ಮೀಟರ್ ಪ್ರದೇಶವನ್ನು ನಿಷೇಧಿತ ಸ್ಥಳವೆಂದು ಘೋಷಿಸಿ, ಸೂಕ್ತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಕೈಗೊಳ್ಳಲಾಗಿತ್ತು. ಒಟ್ಟಿನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಎಲ್. ನಾಗರಾಜ ತಿಳಿಸಿದರು.೧೦,೪೩೯ ಅಭ್ಯರ್ಥಿಗಳು ಹಾಜರ್: ಪೊಲೀಸ್ ಕಾನಸ್ಟೇಬಲ್ ಪರೀಕ್ಷೆಗೆ ನೊಂದಾಯಿಸಿಕೊಂಡಿದ್ದ ೧೦,೮೨೪ ಅಭ್ಯರ್ಥಿಗಳ ಪೈಕಿ, ೧೦,೪೩೯ ಅಭ್ಯರ್ಥಿಗಳು ಹಾಜರಾಗಿದ್ದರು. ೩೮೫ ಅಭ್ಯರ್ಥಿಗಳು ಗೈರಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಾವೇರಿ ಜಿಲ್ಲೆಯಲ್ಲಿ ಪೊಲೀಸ್ ನೇರ ನೇಮಕಾತಿ ಪರೀಕ್ಷೆ ಸುಸೂತ್ರ
ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಕಾನಸ್ಟೇಬಲ್ (ಸಿವಿಲ್) ಹುದ್ದೆಗಳ ನೇರ ನೇಮಕಾತಿ ಹಿನ್ನೆಲೆಯಲ್ಲಿ ನಗರ ಸೇರಿದಂತೆ ಜಿಲ್ಲೆಯ ೩೦ ಪರೀಕ್ಷಾ ಕೇಂದ್ರಗಳಲ್ಲಿ ಭಾನುವಾರ ಲಿಖಿತ ಪರೀಕ್ಷೆ ಬಹುತೇಕ ಶಾಂತಿಯುತವಾಗಿ ನಡೆಯಿತು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.