ಕನ್ನಡಪ್ರಭ ವಾರ್ತೆ ಹುಕ್ಕೇರಿ
ನ್ಯಾಯ ಕೇಳಿ ಠಾಣೆಗೆ ಬರುವ ತಮ್ಮ ಸಮಾಜದ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಹುಕ್ಕೇರಿ ಪೊಲೀಸರು ಅನುಚಿತವಾಗಿ ವರ್ತಿಸುತ್ತಿದ್ದು ಸಮಸ್ಯೆಗಳು ಮತ್ತು ಅಹವಾಲುಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ದಲಿತ ಮುಖಂಡರು ಆರೋಪಿಸಿದರು.ಸ್ಥಳೀಯ ಪೊಲೀಸ್ ಠಾಣೆಯಲ್ಲಿ ರವಿವಾರ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ಕುಂದುಕೊರತೆ ನಿವಾರಣೆ ಸಭೆಯಲ್ಲಿ ಮಾತನಾಡಿದ ಬಹುತೇಕ ಮುಖಂಡರು, ಕೆಲ ಪ್ರಕರಣಗಳಲ್ಲಿ ದಲಿತ ಸಮುದಾಯವನ್ನು ರಕ್ಷಿಸುವ ಬದಲು ಇಲ್ಲಿನ ಪೊಲೀಸರು ಅನ್ಯ ಮತ್ತು ಮೇಲ್ಜಾತಿಯ ಜನರ ಪರವಾಗಿ ನಿಲ್ಲುತ್ತಿದ್ದಾರೆ ಎಂದು ದೂರಿ, ಪೊಲೀಸರ ಕಾರ್ಯವೈಖರಿ ವಿರುದ್ಧ ಖಂಡನೆ ವ್ಯಕ್ತಪಡಿಸಿದರು.
ಎಸ್ಸಿ, ಎಸ್ಟಿ ಜನರ ಸಮಸ್ಯೆ ಆಲಿಸುವಲ್ಲಿ ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ನ್ಯಾಯ ಕೇಳಿ ಠಾಣೆಗೆ ಬರುವ ಸಮಾಜದ ಮುಖಂಡರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಅವರಗೋಳ, ಗುಡಸ, ಕೊಟಬಾಗಿ ಸೇರಿದಂತೆ ಕೆಲ ಪ್ರಕರಣಗಳಲ್ಲಿ ಪೊಲೀಸರು ಸಮಾಜದ ಮುಖಂಡರಿಗೆ ಅವಮಾನ ಮಾಡಿದ್ದಾರೆ. ಇದರೊಂದಿಗೆ ಅನ್ಯಕೋಮಿನೊಂದಿಗೆ ಕೈಜೋಡಿಸಿದ್ದಾರೆ. ಸಿವಿಲ್ ವ್ಯಾಜ್ಯಗಳಲ್ಲಿ ಪೊಲೀಸರು ಹಣದ ಆಸೆಗಾಗಿ ಉದ್ದೇಶಪೂರ್ವಕವಾಗಿ ಖೊಟ್ಟಿ ಜಾತಿ ನಿಂದನೆ ಕೇಸ್ ದಾಖಲಿಸಿ ಕಾಯ್ದೆ ದುರುಪಯೋಗ ಮಾಡಿದ್ದಾರೆ ಎಂದು ದಲಿತರು ಆಪಾದಿಸಿದರು.ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಜನರ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಬೇಕು. ಈ ಹಿಂದೆ ಬೇಜವಾಬ್ದಾರಿ ತೋರಿರುವ ಪೊಲೀಸರ ಮೇಲೆ ಕ್ರಮ ಕೈಗೊಳ್ಳಬೇಕು. ಬೀಟ್ ವ್ಯವಸ್ಥೆ ಮತ್ತಷ್ಟು ಬಲಪಡಿಸಬೇಕು. ಅಕ್ರಮ ಸಾರಾಯಿ, ಜೂಜುಕೋರ ದಂಧೆ, ಗಾಂಜಾ ಮಾರಾಟ ಸೇರಿದಂತೆ ಅಪರಾಧ ಚಟುವಟಿಕೆಗಳನ್ನು ಹತ್ತಿಕ್ಕಲು ಕಠಿಣ ಕ್ರಮ ಕೈಗೊಳ್ಳಬೇಕು. ಮನೆ ಮನೆಗೆ ಪೊಲೀಸರು, ಎಸ್ಸಿ,ಎಸ್ಟಿ ಕಾಲೋನಿಗಳಿಗೆ ಪೊಲೀಸರ ಭೇಟಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಮುಖಂಡರು ಒತ್ತಾಯಿಸಿದರು.ಸಿಪಿಐ ಶಿವಶಂಕರ ಗಣಾಚಾರಿ ಅಧ್ಯಕ್ಷತೆ ವಹಿಸಿದ್ದರು. ಪಿಎಸ್‌ಐಗಳಾದ ಸತೀಶ.ಎಸ್.ಎಚ್, ಗೀತಾಗೌಡ, ಪುರಸಭೆ ಮಾಜಿ ಅಧ್ಯಕ್ಷ ಉದಯ ಹುಕ್ಕೇರಿ, ಎಸ್ಸಿ,ಎಸ್ಟಿ ದೌರ್ಜನ್ಯ ನಿಯಂತ್ರಣ ಸಮಿತಿ ಜಿಲ್ಲಾ ಮಟ್ಟದ ನಾಮನಿರ್ದೇಶಿತ ಸದಸ್ಯ ಕರೆಪ್ಪ ಗುಡೆನ್ನವರ, ಮುಖಂಡರಾದ ಕೆಂಪಣ್ಣಾ ಶಿರಹಟ್ಟಿ, ವಿಠ್ಠಲ ಮಾದರ, ಮಾರುತಿ ಚಿಕ್ಕೋಡಿ, ಸಂಜು ಶಿರಗಾಂವಕರ, ಸತೀಶ ದಿನ್ನಿಮನಿ, ಕಿರಣ ಬಾಗೇವಾಡಿ, ಕಾಡೇಶ ಹೊಸಮನಿ, ಅಪ್ಪಣ್ಣಾ ಖಾತೇದಾರ, ಶಂಕರ ಕಟ್ಟಿಮನಿ, ಮುತ್ತು ಕಾಂಬಳೆ, ಪಿಂಟು ಹೊನ್ನಳ್ಳಿ, ಮಂಜು ತಳವಾರ, ರೇಖಾ ಬಂಗಾರಿ, ಕವಿತಾ ಬೇವಿನಕಟ್ಟಿ, ಪೇದೆಗಳಾದ ಅರ್ಜುನ ಮಸರಗುಪ್ಪಿ, ಬಿ.ಕೆ.ಸಣ್ಣಕ್ಕಿ, ಕುಮಾರ ಕರೆನ್ನವರ ಮತ್ತಿತರರು ಉಪಸ್ಥಿತರಿದ್ದರು.