ಕನ್ನಡಪ್ರಭ ವಾರ್ತೆ ಆಲಮಟ್ಟಿ

ಆಲಮಟ್ಟಿಯ ಚಂದ್ರಮ್ಮ ದೇವಸ್ಥಾನದ ಬಳಿ ಕೃಷ್ಣಾ ನದಿಯ ತೀರದಲ್ಲಿ ತಾಳಿಕೋಟೆ, ಹುಲ್ಲೂರು ತಾಂಡಾದ 16 ಜನ ಯುವಕ ತಂಡ 5 ಗಂಟೆಗಳ ಶ್ರಮದಾನ ಮಾಡಿ ಸುಮಾರು 2 ಟನ್ ಕಸ ಸ್ವಚ್ಛಗೊಳಿಸಿದರು.

ನದಿ ತೀರದಲ್ಲಿ ಭಕ್ತರು ಎಸೆದು ಹೋದ ಹಳೆಯ ಬಟ್ಟೆಗಳು, ಗುಟ್ಕಾ ಪ್ಯಾಕೆಟ್, ಶ್ಯಾಂಪೂ ಪೌಚ್, ಪ್ಲಾಸ್ಟಿಕ್ ಬಾಟಲಿ, ಟೆಟ್ರಾ ಪಾಕ್, ಕುಂಕುಮ-ಅರಿಶಿಣದ ಪ್ಲಾಸ್ಟಿಕ್ ಚೀಲ ಮುಂತಾದವುಗಳನ್ನು ತೆರವುಗೊಳಿಸಿದರು.

ಸಾಮಾಜಿಕ ಜಾಲತಾಣದಲ್ಲಿ ಮನು ನಾಯ್ಕೋಡಿ ಅವರ ಕರೆಗೆ ಸ್ಪಂದಿಸಿ ವಾಟ್ಸಾಪ್/ಫೇಸ್‌ಬುಕ್ ಮೂಲಕ ಸೇರಿದ ಈ ತಂಡ 60 ಕಿ.ಮೀ ದೂರದಿಂದ ಸ್ವಂತ ಖರ್ಚಲ್ಲಿ ಆಗಮಿಸಿ ಸ್ವಚ್ಛತಾ ಕಾರ್ಯ ಕೈಗೊಂಡರು.

ಲಕ್ಷ್ಮಿ ಕ್ಲಾಥ್ ಸ್ಟೋರ್ ನವರು ಉಚಿತ ಬಟ್ಟೆ ಚೀಲ ಕೊಟ್ಟಿದೆ. ಅಪರಿಚಿತರು ಕುಡಿಯಲು ನೀರಿನ ಬಾಕ್ಸ್ ಕೊಟ್ಟು ಸಹಕಾರ ನೀಡಿದ್ದಾರೆ. ರಾಜಕಾರಣಿಗಳು ಬಾಗಿನ ಅರ್ಪಿಸಿದರೆ ಸಾಲದು, ನದಿ ಸ್ವಚ್ಛ ಮಾಡೋದೇ ನಿಜವಾದ ಬಾಗಿನ ಎಂದು ಯುವಕರು ಹೇಳಿದರು.


ಮನು ನಾಯ್ಕೋಡಿ, ರಾಜೇಂದ್ರ ಈಳಗೇರ, ಸೂರಜ್ ರಾಠೋಡ ಸೇರಿ 16 ಯುವಕರು ಈ ಕಾರ್ಯದಲ್ಲಿ ಪಾಲ್ಗೊಂಡಿದ್ದರು.