ಸಾರಾಂಶ
ನಗರದ ಬಹುತೇಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ಸಹ ಉದ್ಯಾನವನ, ಆಟದ ಮೈದಾನ, ಹೊಟೇಲ್, ಹಾಸ್ಟೆಲ್, ಲಾಡ್ಜ್ ಗಳಿಗೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ
ಕನ್ನಡಪ್ರಭ ವಾರ್ತೆ ಮೈಸೂರು
ನಗರದಲ್ಲಿ ಡ್ರಗ್ಸ್ ಸೇರಿದಂತೆ ಮಾದಕ ವಸ್ತು ವಿರುದ್ಧ ನಗರ ಪೊಲೀಸರು ಗುರುವಾರ ಸಹ ಕಾರ್ಯಾಚರಣೆ ನಡೆಸಿ, ಮೂವರು ಡ್ರಗ್ಸ್ ಪೆಡ್ಲರ್ ಗಳನ್ನು ಬಂಧಿಸಿದ್ದಾರೆ.ಬಂಧಿತರಿಂದ 5 ಗ್ರಾಂ ಎಂಡಿಎಂಎ ಮತ್ತು 967 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಅಲ್ಲದೆ, 23 ಮಂದಿ ಮಾದಕ ವ್ಯಸನಿಗಳ ವಿರುದ್ಧ ಪ್ರಕರಣ ದಾಖಲಿಸಿ, 123 ಮಂದಿ ಶಂಕಿತರನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.ನಗರದ ಬಹುತೇಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ಸಹ ಉದ್ಯಾನವನ, ಆಟದ ಮೈದಾನ, ಹೊಟೇಲ್, ಹಾಸ್ಟೆಲ್, ಲಾಡ್ಜ್ ಗಳಿಗೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಲ್ಲದೆ, ಈ ಹಿಂದೆ ಮಾದಕ ವಸ್ತು ಮಾರಾಟದಲ್ಲಿ ಬಂಧಿತರಾಗಿದ್ದ 13 ಮಂದಿ ಹಳೆಯ ಅಪರಾಧಿಗಳ ಮನೆ ಮೇಲೆಯೂ ದಾಳಿ ನಡೆಸಿ ಶೋಧಿಸಿ, ಎಚ್ಚರಿಕೆ ನೀಡಿದ್ದಾರೆ.ಚಾಮುಂಡಿ ಕಮಾಂಡೋ ಪಡೆಯ ಸಿಬ್ಬಂದಿ ಪಿಜಿ, ಲಾಡ್ಜ್, ಅನುಮಾನಾಸ್ಪದ ವ್ಯಕ್ತಿ, ಅಂಗಡಿ, ಮೆಡಿಕಲ್ ಹಾಗೂ ವಾಹನಗಳ ತಪಾಸಣೆ ನಡೆಸಿದ್ದಾರೆ. ಅಲ್ಲದೆ, ಜಯಲಕ್ಷ್ಮಿಪುರಂ ಠಾಣೆಯ ಪೊಲೀಸರು ಕಾಲ್ನಡಿಗೆ ಜಾಥಾ ಮಾಡಿ ವಿವಿಧೆಡೆ ಪರಿಶೀಲಿಸಿದ್ದಾರೆ.ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಅವರ ನೇತೃತ್ವದಲ್ಲಿ ಡಿಸಿಪಿ ಆರ್.ಎಸ್. ಬಿಂದು ಮಣಿ, ಕೆ.ಎಸ್. ಸುಂದರ್ ರಾಜ್, ಎಸಿಪಿಗಳು, ವಿವಿಧ ಠಾಣೆಗಳ ಇನ್ಸ್ ಪೆಕ್ಟರ್ ಗಳು ಮತ್ತು ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.